ಸಾರಾಂಶ
ಸಂಪಾಜೆ ಶಿರಂಗಾಲ ತನಕ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ನೆರೆಯ ಗ್ರಾಮಗಳ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಸಂಪಾಜೆ - ಶಿರಂಗಾಲ ತನಕದ ಬೃಹತ್ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಸೇರಿದಂತೆ ನೆರೆಯ ಗ್ರಾಮಗಳ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡರು.ಬಸವನಹಳ್ಳಿ ಬಳಿಯಿಂದ ಗುಡ್ಡೆ ಹೊಸೂರು ತನಕ, ನಂತರ ಕಾವೇರಿ ನಿಸರ್ಗಧಾಮ ವ್ಯಾಪ್ತಿಯಲ್ಲಿ ಸ್ಥಳೀಯ ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ಶಿಕ್ಷಕಿಯರು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾವರೆಕೆರೆಯಿಂದ ಬೈಚನಹಳ್ಳಿ ಕುಶಾಲನಗರ ಪಟ್ಟಣ ಮೂಲಕ ಮುಳ್ಳುಸೋಗೆ ತನಕ ಹೆದ್ದಾರಿ ರಸ್ತೆಯಲ್ಲಿ ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಮತ್ತು ಶಾಲಾ-ಕಾಲೇಜುಗಳ ಬೋಧಕ ಬೋಧಕೇತರ ಸಿಬ್ಬಂದಿ ಮಾನವ ಸರಪಳಿ ರಚಿಸಿದರು.ಸ್ಥಳೀಯ ಪುರಸಭೆ ಮೂಲಕ ವಿದ್ಯಾರ್ಥಿಗಳಿಗೆ ತಿಂಡಿ, ಕುಡಿಯುವ ನೀರು ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.
ವಾರಾಂತ್ಯ ರಜಾ ಹಿನ್ನೆಲೆಯಲ್ಲಿ ಕುಶಾಲನಗರ -ಮಡಿಕೇರಿ ಹೆದ್ದಾರಿಯಲ್ಲಿ ವಾಹನ ಓಡಾಟದ ಒತ್ತಡ ಅಧಿಕಗೊಂಡು ಸಂಚಾರ ವ್ಯವಸ್ಥೆ ಕೂಡ ಏರುಪೇರಾಯಿತು.