ಸಾರಾಂಶ
ಹುಬ್ಬಳ್ಳಿ:
ನಗರದ ಹೊರವಲಯದ ಕುಸುಗಲ್ಲ ರಸ್ತೆಯಲ್ಲಿರುವ ಆಕ್ಸಫರ್ಡ್ ಕಾಲೇಜು ಹತ್ತಿರದ ಬೃಹತ್ ಮೈದಾನದಲ್ಲಿ ಫೆ. 20, 21ರಂದು ಅಂತಾರಾಷ್ಟ್ರೀಯ ಗಾಳಿಪಟ ಹಾಗೂ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಗಾಳಿಪಟ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂಸದ ಸಾಂಸ್ಕೃತಿಕ ಮಹೋತ್ಸವ-25 ಹಾಗೂ ಅಂತಾರಾಷ್ಟ್ರೀಯ ಗಾಳಿಪಟ ಹಾಗೂ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಗುಜರಾತ್ ಸೇರಿದಂತೆ ಗೋವಾ, ಅಹಮದಾಬಾದ್‌ನಲ್ಲಿ ನಡೆಯುತ್ತಿದ್ದ ಇಂತಹ ಗಾಳಿಪಟ ಅಂತಾರಾಷ್ಟ್ರೀಯ ಉತ್ಸವವನ್ನು ನಗರದಲ್ಲಿ ಸತತ 6ನೇ ಬಾರಿಗೆ ಏರ್ಪಡಿಸುವ ಮೂಲಕ ಈ ಭಾಗಕ್ಕೂ ಗಾಳಿಪಟ ಉತ್ಸವವನ್ನು ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ. ಈ ಉತ್ಸವದಲ್ಲಿ ದೇಶದ ಪ್ರಸಿದ್ಧ ಗಾಳಿಪಟ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ರಂಗುರಂಗಿನ ವಿವಿಧ ಕಲ್ಪನೆಗಳಲ್ಲಿ ಸಾಕಾರಗೊಂಡ ಪ್ರಾಣಿ, ಪಕ್ಷಿಗಳ ಗಾಳಿಪಟಗಳು ಆಕಾಶದಲ್ಲಿ ಹಾರಿ ಹೊಸ ವರ್ಣರಂಜಿತ ಲೋಕ ಸೃಷ್ಟಿಸಲಿವೆ ಎಂದರು.ಗಾಳಿಪಟ ಉತ್ಸವದೊಂದಿಗೆ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆ, ಒಂದೇ ಸೂರಿನಲ್ಲಿ ವೈವಿದ್ಯಮಯ ತಿಂಡಿ-ತಿನಿಸುಗಳ ಆಹಾರ ಉತ್ಸವವೂ ನಡೆಯಲಿದೆ. ಜತೆಗೆ ಎರಡು ದಿನ ಸಂಜೆ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಫೆ. 20ರಂದು ನಡೆಯುವ ದೇಶಿ ಕ್ರೀಡೆಗಳಿಗೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಚಾಲನೆ ನೀಡುವರು. ತಿಂಡಿ-ತಿನಿಸುಗಳ ಆಹಾರ ಉತ್ಸವಕ್ಕೆ ಶಾಸಕ ಮಹೇಶ ಟೆಂಗಿನಕಾಯಿ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಚಿತ್ರಕಲಾ ಸ್ಪರ್ಧೆಗೆ ಬಿಜೆಪಿ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಕ್ರೀಡೆ ಮತ್ತು ಮನರಂಜನೆ ಕಾರ್ಯಕ್ರಮಗಳಿಗೆ ಶಾಸಕ ಎಂ.ಆರ್. ಪಾಟೀಲ, ಮಹಿಳಾ ಕ್ರೀಡೆಗಳಿಗೆ ಪಾಲಿಕೆ ಉಪಮೇಯರ್ ದುರ್ಗಮ್ಮ ಬಿಜವಾಡ ಚಾಲನೆ ನೀಡುವರು ಎಂದು ಹೇಳಿದರು.
20ರಂದು ಸಂಜೆ ಫಿಲ್ಮಫೇರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೈಲಾಶ ಕೇರ್ ಹಾಗೂ ಹುಬ್ಬಳ್ಳಿಯ ಗಾನಕೋಗಿಲೆ ಮಹನ್ಯ ಪಾಟೀಲ, ಫೆ. 21ರಂದು ಸಂಜೆ ರಘು ದೀಕ್ಷಿತ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಸೇರಿದಂತೆ ಹಲವರಿದ್ದರು.