ಹುಬ್ಬಳ್ಳಿ: ನಗರದ ವಿವಿಧೆಡೆ ವಿವಿಧ ಸಂಘ ಸಂಸ್ಥೆಗಳು ಯೋಗಾಭ್ಯಾಸ ಶಿಬಿರಗಳನ್ನು ಏರ್ಪಡಿಸುವ ಮೂಲಕ ವಿಶ್ವ ಯೋಗ ದಿನ ಆಚರಿಸಿದವು. ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಎಲ್ಲ ವಯೋಮಾನದ ಜನರು ಭಾನುವಾರ ಬೆಳಗ್ಗೆ ಯೋಗಪಟುಗಳ ದಿರಿಸಿನಲ್ಲಿ ಕಾಣಿಸಿಕೊಂಡರು. ಅತ್ಯಂತ ಉತ್ಸಾಹದಿಂದ ಯೋಗಾಭ್ಯಾಸ ಮಾಡಿದರು. ಪ್ರತಿನಿತ್ಯ ಯೋಗ ಮಾಡಿ; ಯೋಗದಿಂದ ರೋಗ ದೂರ. ಪ್ರತಿಯೊಬ್ಬರ ಜೀವನದ ಅಂಗವಾಗಲಿ ಯೋಗ. ಯೋಗದ ಮೂಲಕವೇ ದಿನಚರಿ ಪ್ರಾರಂಭವಾಗಲಿ ಎಂದು ಗಣ್ಯರು ಕರೆ ಕೊಟ್ಟರು.
ಇಲ್ಲಿನ ನ್ಯಾಯಾಲಯ ಆವರಣ, ಇಂದಿರಾಗಾಜಿನ ಮನೆ, ಮೂರುಸಾವಿರ ಮಠ, ನೃಪತುಂಗ ಬೆಟ್ಟ, ಸಂಘ-ಸಂಸ್ಥೆ ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗಾಭ್ಯಾಸದಲ್ಲಿ ತೊಡಗಿದರು. ಹಾಗೆಯೇ ಯೋಗ ಗುರುಗಳ ಮಾರ್ಗದರ್ಶದಲ್ಲಿನ ಸಾರ್ವಜನಿಕರು ಪದ್ಮಾಸನ, ವೃಕ್ಷಾಸನ, ತಾಡಾಸನ, ಸೂರ್ಯನಮಸ್ಕಾರ ಸೇರಿದಂತೆ ವಿವಿಧ ಆಸನಗಳ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಕೊನೆಗೆ ಶವಾಸನದಲ್ಲಿ ಪಾಲ್ಗೊಂಡರು.ನ್ಯಾಯಾಲಯ ಆವರಣ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಲ್ಲಿನ ನ್ಯಾಯಾಲಯಗಳ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಯೋಗಾಭ್ಯಾಸ ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ವೀಣಾ ನಾಯ್ಕರ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ರಾಜಕುಮಾರ ಅಮ್ಮಿನಭಾವಿ, ವಿಶ್ವನಾಥ ಯಮಕನಮರಡಿ, ಗುರುರಾಜ ಶಿರೋಳ, ವಕೀಲರು, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಇಂದಿರಾ ಗಾಜಿನ ಮನೆ: ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌ಪಿವೈಎಸ್‌ಎಸ್) ಹಾಗೂ ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ಭಾನುವಾರ ಏರ್ಪಡಿಸಿದ್ದ ಯೋಗ ದಿನಾಚರಣೆಯನ್ನು ಧಾರವಾಡದ ಐಐಟಿ ನಿರ್ದೇಶಕ ವೆಂಕಪ್ಪಯ್ಯ ಆರ್.ದೇಸಾಯಿ ಉದ್ಘಾಟಿಸಿದರು.ಎಸ್‌ಪಿವೈಎಸ್‌ಎಸ್ ಶಿಕ್ಷಕ ದತ್ತಾತ್ರೇಯ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವಲಯ ಸಂಚಾಲಕಿ ಅಕ್ಕಮಹಾದೇವಿ ಗಣಾಚಾರಿ ಮಾತನಾಡಿದರು. ಛಾಯಾಗ್ರಾಹಕ ಗೌರವ ಮನೀಶ ಖೋನಾ, ಸಂಚಾಲಕರಾದ ಅನಿಲ ಲದವಾ, ನಿರ್ಮಲಾ ಅಡವಿ, ಯೋಗ ಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಎಸ್‌ಪಿವೈಎಸ್‌ಎಸ್‌ನ ಜಿಲ್ಲಾ ಸಂಚಾಲಕರಾದ ಗೋಪಾಲಕೃಷ್ಣ ಜೋಶಿ, ಅಮರವಾತಿ ಗಾಣಗಿ ಸೇರಿದಂತೆ ಇತರರು ಇದ್ದರು. ಇದಕ್ಕೂ ಪೂರ್ವದಲ್ಲಿ ಗಾಯತ್ರಿ ಜೋಶಿ ನೇತೃತ್ವದಲ್ಲಿ ನೂರಾರು ಜನರು ಯೋಗಾಭ್ಯಾಸ ನಡೆಸಿದರು.
ಮೂರುಸಾವಿರ ಮಠ: ಪೂರ್ವ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಜುನಾಥ ಕಾಟಕರ ನೇತೃತ್ವದಲ್ಲಿ ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. ಶ್ರೀ ಗಂಗಾ ಆರೋಗ್ಯ ಮಹಾಮನೆ ಸಂಸ್ಥಾಪಕ ವೈದ್ಯಶ್ರೀ ಜ್ಯೋತಿತಾಯಿ ಚನ್ನಬಸವಣ್ಣವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಯಿತು. ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಯೋಗ ಭಾರತದ ಅಮೂಲ್ಯ ಪರಂಪರೆ, ಅದರ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ ದಿನವಾದ ಜೂ. 21ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅನನ್ಯ ಕೊಡುಗೆ ಇದಾಗಿದೆ ಎಂದರು.
ಈ ವೇಳೆ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಪ್ರೀತಿ ಲದವಾ, ಅನೂಪ ಬಿಜವಾಡ, ರಂಗ ಕಠಾರೆ, ಪ್ರಭು ನವಲಗುಂದಮಠ, ಬಸವರಾಜ ಇಚಂಗಿ, ರಾಜು ಜರತಾರಘರ, ಜಗದೀಶ ಬುಳ್ಳಾನವರ, ರಾಜು ಕೋರ್ಯಾಣಮಠ, ಲಕ್ಷ್ಮೀಕಾಂತ ಘೋಡಕೆ, ನೀಲಕಂಠ ತಡಸದಮಠ, ಅಣ್ಣಪ್ಪ ಗೋಕಾಕ, ಮಂಜುನಾಥ ಚಿಂತಗಿಂಜಲ್, ಮಿಥುನ್ ಚವ್ಹಾಣ, ಡಾ.ರವೀಂದ್ರ ಯಲಕಾನ, ವಿನಾಯಕ ಲದವಾ, ಸವಿತಾ ಚವ್ಹಾಣ, ಸುವರ್ಣ ಜಂಗಮಗೌಡರ, ಅನುರಾಧಾ ಚಿಲ್ಲಾಳ, ಮಂಜುಳಾ ಪರ್ಭತ, ಭಾರತಿ ಯಲಕಾನ, ಸುನೀತಾ ಜರತಾರಘರ, ಅಮೃತ ಕಲ್ಪವೃಕ್ಷ, ಈರೇಶ ಮುದುಕವಿ, ಗುರುನಾಥ ಹೇಮಕರ, ನಾರಾಯಣ ಹಬೀಬ ಸೇರಿದಂತೆ ಇತರರು ಇದ್ದರು.ನೃಪತುಂಗ ಬೆಟ್ಟ: ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಘಟಕದಿಂದ ಇಲ್ಲಿನ ನೃಪತುಂಗ ಬೆಟ್ಟದ ತಪ್ಪಲಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಯೋಗ ಗುರು ವೈದ್ಯ ಚನ್ನಬಸವಣ್ಣವರ ಮಾರ್ಗದರ್ಶನದಲ್ಲಿ ಜನರು ವಿವಿಧ ಯೋಗಾಸನ, ಪ್ರಾಣಾಯಾಮ, ಧ್ಯಾನ ನಡೆಸಿದರು. ಶಾಸಕ ಮಹೇಶ ಟೆಂಗಿನಕಾಯಿ, ಉಪಮೇಯರ್ ಸಂತೋಷ ಚವ್ಹಾಣ, ಉಮೇಶಗೌಡ, ಬೀರಪ್ಪ ಖಂಡೇಕರ, ಉಮಾ ಮುಕುಂದ, ರೂಪಾ ಶೆಟ್ಟಿ, ಈಶ್ವರಗೌಡ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.
ಚೇತನ ಕಾಲೇಜ್: ಇಲ್ಲಿನ ಚೇತನ ಶಿಕ್ಷಣ ಸಂಸ್ಥೆಗಳ ಸಮೂಹದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕ ವಿ.ಎಂ. ಕೊರವಿ ಉದ್ಘಾಟಿಸಿದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಯೋಗದ ಮಹತ್ವ ತಿಳಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ವಿನಾಯಕ ಅವರು ಯೋಗಾಭ್ಯಾಸವನ್ನು ನಡೆಸಿಕೊಟ್ಟರು. ಯೋಗ ತರಬೇತುದಾರ ಬಾಗಲಕೋಟ ಅವರು ವಿವಿಧ ಯೋಗಾಸನ ಪ್ರದರ್ಶಿಸಿದರು.