ಬಸವಣ್ಣರ ವಚನ ಅರ್ಥೈಸಿ, ಅಳವಡಿಸಿಕೊಳ್ಳಿ: ಚುಂಚಶ್ರೀ

| Published : May 13 2024, 01:09 AM IST

ಬಸವಣ್ಣರ ವಚನ ಅರ್ಥೈಸಿ, ಅಳವಡಿಸಿಕೊಳ್ಳಿ: ಚುಂಚಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಬಸವ ವೇದಿಕೆಯಿಂದ ಭಾನುವಾರ ಗಾಂಧೀ ಭವನದಲ್ಲಿ ನಡೆದ ‘ಬಸವ ಜಯಂತಿ ಹಾಗೂ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ’ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಸವಣ್ಣನ ಜ್ಯೋತಿರ್ಲಿಂಗ ಸ್ವರೂಪದ ಮಾತು, ಅವರು ಹೇಳಿದ ವಚನಗಳನ್ನು ಅರ್ಥೈಸಿ ಅಳವಡಿಸಿಕೊಂಡಿದ್ದೇ ಆದರೆ ಮನಸ್ಸಿನ ಕೊಳೆ ಹೋಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ। ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ಬಸವ ವೇದಿಕೆಯಿಂದ ಭಾನುವಾರ ಗಾಂಧೀ ಭವನದಲ್ಲಿ ನಡೆದ ‘ಬಸವ ಜಯಂತಿ ಹಾಗೂ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಸವಣ್ಣನ ತತ್ವಗಳು ಎಂದೆಂದಿಗೂ ಶಾಶ್ವತ. ಬಸವಣ್ಣ ಜನಮಾನಸಕ್ಕೆ ಬೇಕು. ಹೊರಗಿನ ಎಲ್ಲವನ್ನೂ ತಿಳಿದು ನಮ್ಮನ್ನ ನಾವು ತಿಳಿಯದಿದ್ದರೆ ಪ್ರಯೋಜನವಿಲ್ಲ. ಬಸವಣ್ಣನವರ ರೀತಿ ದಾರ್ಶನಿಕರ ಮಾತುಗಳನ್ನು ಅನುಸಂಧಾನ ಮಾಡಿ ಅನುಷ್ಠಾನ ಮಾಡಿಕೊಳ್ಳಬೇಕು. ವಚನಗಳನ್ನು ಹೇಳುವುದಕ್ಕಿಂತ ನಾವೇ ವಚನಗಳಾಗಬೇಕು. ಹಾಗಾದಲ್ಲಿ ರಾಗ ದ್ವೇಷದ ಕೊಳೆಗಳು ತೊಳೆದು ಹೋಗುತ್ತವೆ ಎಂದರು.

ಸಾಕಷ್ಟು ಜನ ಬಸವಣ್ಣನವರನ್ನು ಕೇವಲ ಸಮಾಜ ಸುಧಾರಕರು ಎಂದು ನೋಡಿ ಸುಮ್ಮನಾಗುತ್ತಾರೆ. ಬಸವಣ್ಣ, ಬುದ್ಧ, ಗಾಂಧೀಜಿ ಅವರು ತಮ್ಮ ಒಳಗನ್ನು ತಾವು ನೋಡಿಕೊಂಡಿದ್ದರಿಂದ ಜನ ಅವರ ಮಾತಿಗೆ ಓಗೊಟ್ಟು ನಡೆದಿದ್ದರು. ಮಾತಿಗೆ ತಕ್ಕಂತೆ ನಡೆದುಕೊಂಡಿದ್ದರು. ಅದನ್ನು ನಾವೆಲ್ಲ ಪಾಲಿಸಬೇಕು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಮಾಜದಲ್ಲಿ ಇನ್ನೂ ಜೀವಂತವಿರುವ ಅಸಮಾನತೆ, ಮೂಢನಂಬಿಕೆ, ಲಿಂಗಬೇಧ ಹೋಗಲಾಡಿಸುವ ತನಕ ಬಸವಣ್ಣ ಪ್ರಸ್ತುತ. ಮಾನವನ ಸಂಪೂರ್ಣ ವಿಕಾಸಕ್ಕಾಗಿ ಹೋರಾಡಿದ ಅಪರೂಪದ ಶಾಶ್ವತ ಶಕ್ತಿ ಬಸವಣ್ಣ. ಮನುಷ್ಯ ಹಾಗೂ ದೇವರ ನಡುವೆ ಮಧ್ಯವರ್ತಿಗಳನ್ನು ತೆಗೆದು ಅಂಗೈಗೆ ಲಿಂಗವನ್ನು ಕೊಟ್ಟವರು ಅವರು. ಆದರೆ ಮೂಢನಂಬಿಕೆಯಿಂದ ಹಿಡಿದು ಅವರು ಹೋರಾಡಿದ್ದ ಎಲ್ಲ ಅನಿಷ್ಟಗಳು ಇನ್ನೂ ಸಮಾಜದಲ್ಲಿವೆ. ಇವುಗಳ ನಿರ್ಮೂಲನೆಗೆ ಮನಃ ಪರಿವರ್ತನೆ ಅಗತ್ಯ ಹೊರತು ಕಾನೂನಿನಿಂದ ಸಾಧ್ಯವಿಲ್ಲ. ಸಂಪೂರ್ಣ ಪರಿವರ್ತನೆ ಆಗುವ ತನಕ ಬಸವಣ್ಣ ಪ್ರಸ್ತುತವಾಗಿರಲಿದ್ದಾರೆ ಎಂದು ತಿಳಿಸಿದರು.ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅವರಿಗೆ ‘ಬಸವಶ್ರೀ ಪ್ರಶಸ್ತಿ’, ಅಂಬಯ್ಯ ನೂಲಿ ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಪ್ರಾಸ್ತಾವಿಕ ಮಾತನಾಡಿದರು. ವಿಶ್ರಾಂತ ನ್ಯಾಯಮೂರ್ತಿ ರತ್ನಕಲಾ ಅಧ್ಯಕ್ಷತೆ ವಹಿಸಿದ್ದರು.ಆತ್ಮ ಶುದ್ಧಿಗಾಗಿ ಅಂತರಂಗಕ್ಕೆ ಇಳಿಯಬೇಕು: ಕಿರಣ್‌ಕುಮಾರ್‌

ಬಸವಜ್ಯೋತಿ ಸಂಚಿಕೆ ಬಿಡುಗಡೆ ಮಾಡಿದ ಇಸ್ರೋ ಮಾಜಿ ಅಧ್ಯಕ್ಷ ಡಾ। ಎ.ಎಸ್.ಕಿರಣ ಕುಮಾರ್ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಬೆಳೆದ ಸಂದರ್ಭದಲ್ಲಿ ಮನುಷ್ಯ ತಮ್ಮನ್ನು ತಾವು ಅರಿತುಕೊಳ್ಳಲು ಎಷ್ಟು ಸಮಯ ಕೊಡುತ್ತಿಲ್ಲ. ಕೈಯಲ್ಲಿರುವ ಗೆಜೆಟ್ ಜಗತ್ತನ್ನು ತೋರಿಸುತ್ತದೆ. ಆದರೆ, ಆತ್ಮಶುದ್ಧಿಗೆ ನಾವು ಅಂತರಂಗಕ್ಕೆ ಇಳಿಯಬೇಕು. ನಮಗಿರುವ ಸೌಲಭ್ಯವನ್ನು ಪ್ರಜ್ಞಾಪೂರ್ವಕವಾಗಿ ಬಳಸುವುದನ್ನು ತಿಳಿಯಬೇಕು ಎಂದರು.