ಹಿರಿಯೂರು ಪೊಲೀಸರಿಂದ ಅಂತರಾಜ್ಯ ಕಳ್ಳನ ಬಂಧನ

| Published : Mar 16 2025, 01:45 AM IST

ಹಿರಿಯೂರು ಪೊಲೀಸರಿಂದ ಅಂತರಾಜ್ಯ ಕಳ್ಳನ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

4 ಲಕ್ಷ ಹಣ ವಶ, ಓರ್ವ ಬಂಧನ । ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಕೆ

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರ ಠಾಣೆ ಪೊಲೀಸರು ಅಂತರಾಜ್ಯ ಕಳ್ಳನನ್ನು ಬಂಧಿಸಿ 4,03,000 ರು. ವಶಪಡಿಸಿಕೊಂಡಿದ್ದು ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.ಆಂಧ್ರ ಪ್ರದೇಶದ ಓ.ಜಿ.ಕೊಪ್ಪo ಗ್ರಾಮದ ಎಂ.ಶ್ರೀನಿವಾಸಲು ಬಂಧಿತ ಆರೋಪಿಯಾಗಿದ್ದು ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.

ಮಾರ್ಚ್ 4,2025 ರಂದು ವೇಲುಸ್ವಾಮಿ ಎಂಬುವವರು ಹಿರಿಯೂರು ಟೌನ್ ಹುಳಿಯಾರು ರಸ್ತೆಯಲ್ಲಿನ ಕರ್ನಾಟಕ ಬ್ಯಾಂಕಿನಲ್ಲಿ 4,73,000 ರು. ವಿತ್‌ ಡ್ರಾ ಮಾಡಕೊಂಡು ತಮ್ಮ ಮೋಟರ್ ಸೈಕಲ್ ನ ಸೈಡ್ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಟೆಲ್ ಬಳಿ ನಿಲ್ಲಿಸಿ ಟೀ ಕುಡಿಯಲು ಹೋದ ಸಮಯದಲ್ಲಿ ಸೈಡ್ ಬ್ಯಾಗನಲ್ಲಿದ್ದ ಹಣ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು.

ಈ ಪ್ರಕರಣದ ಆರೋಪಿತರ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಭಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಹಾಗೂ ಡಿವೈಎಸ್‌ಪಿ ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ರಾಘವೇಂದ್ರ ಕಾಂಡಿಕೆಯವರ ನೇತೃತ್ವದಲ್ಲಿ ಪಿಎಸ್‌ಐ ಲಕ್ಷ್ಮೀ ನಾರಾಯಣ ಹಾಗೂ ಸಿಬ್ಬಂದಿಗಳಾದ ದೇವೇಂದ್ರಪ್ಪ, ಸುದರ್ಶನಗೌಡ, ತಿಪ್ಪೇಸ್ವಾಮಿ, ಸಿದ್ದಲಿಂಗೇಶ್ವರ ಯಳವಟ್ಟಿ, ಪ್ರವೀಣ್ ಡಿ. ಶಶಿಧರ್ ಟಿ.ಎಸ್. ಸುನಿಲ್ ಮತ್ತು ಶರಣಬಸಪ್ಪ ಬಿ.ಪೂಜಾರಿಯವರನ್ನು ಒಳಗೊಂಡ ವಿಶೇಷ ತಂಡವು ರಚನೆಯಾಗಿತ್ತು. ವಿಶೇಷ ತಂಡವು ವಿವಿಧ ಮಾಹಿತಿಯನ್ನು ಸಂಗ್ರಹಿಸಿ ಆಂಧ್ರಪ್ರದೇಶದ ಹಲವು ಕಡೆಗಳಲ್ಲಿ ಸಂಚರಿಸಿ ದಿನಾಂಕ ಮಾರ್ಚ್‌ 13,2025 ರಂದು ಪ್ರಕರಣದಲ್ಲಿನ ಆರೋಪಿಗಳ ಪೈಕಿ ಒಬ್ಬನಾದ ಎಂ. ಶ್ರೀನಿವಾಸಲುನನ್ನು ವಶಕ್ಕೆ ಪಡೆದು ಆರೋಪಿತನ ಕಡೆಯಿಂದ 4,03,000 ರು.ನಗದನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ. ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.