ಮಕ್ಕಳಿಗೆ ದಾಸ ಸಾಹಿತ್ಯದ ಪರಿಚಯ ಮಾಡಿಕೊಡಬೇಕು, ಅಂದಾಗ ಮಾತ್ರ ದಾಸ ಸಾಹಿತ್ಯ ಉಳಿಯಲು ಸಾಧ್ಯ.

ದಾಸ ಸಾಹಿತ್ಯ ಉಪನ್ಯಾಸ, ಸಂವಾದ, ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆಕನ್ನಡಪ್ರಭ ವಾರ್ತೆ ಮುಂಡಗೋಡ

ಮಕ್ಕಳಿಗೆ ದಾಸ ಸಾಹಿತ್ಯದ ಪರಿಚಯ ಮಾಡಿಕೊಡಬೇಕು, ಅಂದಾಗ ಮಾತ್ರ ದಾಸ ಸಾಹಿತ್ಯ ಉಳಿಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಭಾಸ ಡೋರಿ ಹೇಳಿದರು.

ಇಲ್ಲಿಯ ಸಂಗಮೇಶ್ವರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಉಪನ್ಯಾಸ, ಸಂವಾದ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜರು ತಮ್ಮ ಕಾಲದಲ್ಲಿ ಬಹಳ ಪ್ರಯತ್ನದಿಂದ ದಾಸ ಸಾಹಿತ್ಯ ಬೆಳೆಸಿದ್ದಾರೆ. ದಾಸ ಸಾಹಿತ್ಯ ಅತ್ಯಂತ ಹಳೆಯ ಸಾಹಿತ್ಯವಾಗಿದ್ದು, ಕನಕದಾಸರು, ಪುರಂದರದಾಸರ ಸಾಹಿತ್ಯವನ್ನು ಅನುಕರಣೆ ಹಾಗೂ ಅಳವಡಿಕೆ ಮಾಡುವುದು ಅತ್ಯವಶ್ಯಕವಾಗಿದೆ. ಮುಂಡಗೋಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದಾಸ ಸಾಹಿತ್ಯ ಉಳಿಯಲು ಒಂದು ಉತ್ತಮ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಸಂತ ಕೊಣಸಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾಸ ಸಾಹಿತ್ಯವು ಅತ್ಯಂತ ಹಳೆಯ ಹಾಗೂ ಸಾಮಾಜಿಕ ಅಂಕು-ಡೊಂಕುಗಳನ್ನು ತಿದ್ದಿ ಉತ್ತಮ ಸಮಾಜದ ನಿರ್ಮಾಣದಲ್ಲಿ ಬಹುದೊಡ್ಡ ಪತ್ರ ವಹಿಸಿದೆ. ಇಂತಹ ಗಟ್ಟಿತನದ ಸಾಹಿತ್ಯವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಸಾಹಿತಿ ವಾಸುದೇವ ಮಡ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಚಲುವ ಕನ್ನಡ ನಾಡು ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಇಕ್ರಾ ಇಬ್ರಾಹಿಮ್ ಶೇಖ, ದ್ವಿತೀಯ ಸ್ಥಾನ ಪಡೆದ ಯಶಸ್ವಿ ಎಲ್.ಎಸ್., ತೃತೀಯ ಸ್ಥಾನ ಪಡೆದ ಸಮೃದ್ಧಿ ಕುಲಕರ್ಣಿ ಹಾಗೂ ವರಪ್ರಸಾದ ಪವಾರ ಹಾಗೂ ವೈಷ್ಣವಿ ದೈವಜ್ಞ, ಮಧುರಾ, ಬಿರಾದಾರ್, ರಿದಾ ರಾಜು ನದಾಫ್‌ ಅವರಿಗೆ ಬಹುಮಾನ ವಿತರಿಸಲಾಯಿತು.

ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ, ವಿನಾಯಕ ಶೇಟ್, ಶ್ಯಾಮಲಾ ನಾಯ್ಕ, ರಾಜು ನದಾಫ್‌, ಎಸ್.ಸಿ. ಬಸನಗೌಡ್ರ, ಸಂಗಪ್ಪ ಕುಳೂರು, ಎಸ್.ಬಿ. ಹೂಗಾರ, ಆರ್.ಎಸ್. ಕಲಾಲ, ಡಾ. ಅನುಪಮಾ ಅದಾಪುರ, ಗೌರಮ್ಮ ಕೊಳ್ಳಾನವರ, ಆನಂದ ಹೊಸೂರು, ಬಾಲಚಂದ್ರ ಹೆಗಡೆ, ರಾಜಶೇಖರ ನಾಯ್ಕ ಇದ್ದರು. ವಿನಾಯಕ ಶೇಟ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಅರ್ಕಸಾಲಿ ವಂದಿಸಿದರು.