ಸಮ್ಮೇಳನಾಧ್ಯಕ್ಷ ಕೆ.ಸಿದ್ದಲಿಂಗಪ್ಪ ಪರಿಚಯ

| Published : Dec 25 2024, 12:47 AM IST

ಸಾರಾಂಶ

ಪುಷ್ಕರಿಣಿ ನಗರವೆಂದೇ ಪ್ರಸಿದ್ಧಿ ಪಡೆದ ಸಂತೆನ್ನೂರಲ್ಲಿ ತಾಲೂಕುಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.8ರಂದು ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಕನ್ನಡ ಪರಿಚಾರಕ, ಕನ್ನಡಪ್ರಭದ ಮಾಜಿ ವರದಿಗಾರ ಕೆ.ಸಿದ್ದಲಿಂಗಪ್ಪ ಆಯ್ಕೆಯಾಗಿದ್ದಾರೆ.

ಚನ್ನಗಿರಿ: ಪುಷ್ಕರಿಣಿ ನಗರವೆಂದೇ ಪ್ರಸಿದ್ಧಿ ಪಡೆದ ಸಂತೆನ್ನೂರಲ್ಲಿ ತಾಲೂಕುಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.8ರಂದು ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಕನ್ನಡ ಪರಿಚಾರಕ, ಕನ್ನಡಪ್ರಭದ ಮಾಜಿ ವರದಿಗಾರ ಕೆ.ಸಿದ್ದಲಿಂಗಪ್ಪ ಆಯ್ಕೆಯಾಗಿದ್ದಾರೆ. 86ರ ಇಳಿ ವಯಸ್ಸಿನಲ್ಲಿಯೂ ಕನ್ನಡ ನಾಡು, ನುಡಿಯ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿರುವ ಸಿದ್ದಲಿಂಗಪ್ಪ ಅವರು, ಕನ್ನಡದ ಕೆಲಸಗಳಿಗೆ ಉತ್ಸಾಹದ ಚಿಲುಮೆಯಂತೆ ಕ್ರಿಯಾಶೀಲರಾಗಿದ್ದಾರೆ. ಶಿಕ್ಷಣ, ಕ್ರೀಡೆ, ಕಲೆ, ಸಂಸ್ಕೃತಿ, ಇತಿಹಾಸ ಸಂರಕ್ಷಣೆಗೆ ದುಡಿದಿದ್ದಾರೆ.

ಸರ್ಕಾರಿ ಶಾಲೆ ಶಿಕ್ಷಕರಾಗಿ ಮೂರು ದಶಕಗಳಿಗೂ ಅಧಿಕ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಸಂತೇಬೆನ್ನೂರಿನ ಎಸ್.ಎಸ್.ಜೆ.ವಿ.ಪಿ ಸರ್ಕಾರಿ ಪ್ರೌಢಶಾಲೆಯಲ್ಲಿ 1997ರಲ್ಲಿ ನಿವೃತ್ತರಾಗಿದ್ದಾರೆ. ಅವರು ಯುವಕರಾಗಿದ್ದಾಗಲೇ ಸತ್ಯನಾರಾಯಣ ನಾಡಿಗ್ ಅವರ ಮಾರ್ಗದರ್ಶನದಲ್ಲಿ 1960ರಲ್ಲಿ ವಿಜಯ ಸಮೂಹ ಶಿಕ್ಷಣ ಸಂಸ್ಥೆ ಆರಂಭಿಸಿ, ಸಂಸ್ಥಾಪಕ ಕಾರ್ಯದರ್ಶಿಗಳಾಗಿ ಇಂದಿಗೂ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೇ ಸೇವೆ ಸಲ್ಲಿಸುತ್ತಿದ್ದಾರೆ.

ಅನೇಕ ಕವನ, ಲೇಖನಗಳನ್ನು ಬರೆದರೂ ಪುಸ್ತಕ ರೂಪದಲ್ಲಿ ತರಲು ಮುಂದಾಗದ ಸಿದ್ದಲಿಂಗಪ್ಪ ಅವರು, ಕವಿಗೋಷ್ಠಿ, ಆಕಾಶವಾಣಿ, ದೂರದರ್ಶನದಲ್ಲಿ ಕವಿತೆಗಳನ್ನು ವಾಚನ ಮಾಡಿದ್ದಾರೆ. ಸ್ಥಳೀಯ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಕೆ.ಸಿದ್ದಲಿಂಗಪ್ಪ ಅವರ ಲೇಖನಗಳನ್ನು ವಿಜಯ ಯುವಕ ಸಂಘವು ಸಂಗ್ರಹಿಸಿ, ಕನ್ನಡ ಪರಿಚಾರಕರು ಹೆಸರಿನಲ್ಲಿ ಕೃತಿ ಪ್ರಕಟಿಸಿದೆ.

ಕನ್ನಡವೇ ನನ್ನ ಉಸಿರು ಎಂಬ ಸಾಕ್ಷಿಪ್ರಜ್ಞೆಯಲ್ಲಿ ಸಿದ್ದಲಿಂಗಪ್ಪ ಅವರು ಒಬ್ಬ ಕನ್ನಡಿಗ ಒಂದು ರೂಪಾಯಿ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ ಸಾಹಿತ್ಯ ಪರಿಷತ್ತಿಗೆ ನೀಡಿದ್ದಾರೆ. ತಾಲೂಕಿನಾದ್ಯಂತ ಸುತ್ತಾಡಿ ನೂರಾರು ಮಂದಿಯನ್ನು ಆಜೀವ ಸದಸ್ಯರನ್ನಾಗಿ ನೋಂದಾಯಿಸಿರುವ ಅವರು, 20ರಿಂದ 30 ದತ್ತಿಗಳ ಸ್ಥಾಪನೆಗೂ ಕಾರಣರಾಗಿದ್ದಾರೆ.

ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತ ಇಂದಿಗೂ ಕನ್ನಡದಲ್ಲಿಯೇ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಅನೇಕ ಏಕಾಂತ ಹಾಗೂ ವೃತ್ತಿ ರಂಗಭೂಮಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿದ್ದಲಿಂಗಪ್ಪ ಅವರು 12 ತಾಲೂಕು ಕನ್ನಡ ಸಾಹಿತ್ಯ ಸಂಮ್ಮೇಳನಗಳನ್ನು ಸಂಘಟಿಸಿ ನಡೆಸಿದ್ದಾರೆ. ನಾಡಿನ ಹಿರಿಯ, ಕಿರಿಯ ಸಾಹಿತಿಗಳನ್ನು ಆಹ್ವಾನಿಸುವ ಮೂಲಕ ಅವರನ್ನು ನಾಡಿಗೆ ಪರಿಚಯಿಸಿದ್ದಾರೆ. ಎಲ್ಲಾ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳನ್ನು ತಪ್ಪದೇ ಗ್ರಹಿಸಿದ್ದಾರೆ. ಕನ್ನಡ ವಿರೋಧಿ ಚಟುವಟಿಕೆಗಳನ್ನು ನಿರ್ಭೀತಿಯಿಂದ ಖಂಡಿಸಿದ್ದಾರೆ.

ಚನ್ನಗಿರಿ ತಾಲೂಕು ಶಿವಮೊಗ್ಗ ಜಿಲ್ಲೆಗೆ ಸೇರಿದ್ದಾಗ 1997ರಲ್ಲಿ ಜಿಲ್ಲಾ ಉತ್ತಮ ಪ್ರಶಸ್ತಿ, ದಾವಣಗೆರೆ ಜಿಲ್ಲಾ ಗ್ರಾಮೀಣ ಸಿರಿ ಪ್ರಶಸ್ತಿ, 2024ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಕೆ.ಸಿದ್ದಲಿಂಗಪ್ಪ ಪಾತ್ರರಾಗಿರುವುದು ವಿಶೇಷ.

- - - -23ಕೆಸಿಎನ್ಜಿ6.ಜೆಪಿಜಿ: ಕೆ.ಸಿದ್ದಲಿಂಗಪ್ಪ