ಸಾರಾಂಶ
ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನಲ್ಲಿ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್‌ನ ಕಲಾವಿದರಿಂದ ರಂಗಗೀತೆಗಳ ಕಾರ್ಯಾಗಾರ ನೆರವೇರಿತು.
ಮೂಲ್ಕಿ: ಪು.ತಿ.ನ., ಸಿಂದೂವಳ್ಳಿ ಅನಂತಮೂರ್ತಿ, ಬಿ.ವಿ.ಕಾರಂತ, ಕೆಮ್ತೂರು ದೊಡ್ಡಣ್ಣ ಶೆಟ್ಟಿ ಮುಂತಾದವರು ರಂಗಭೂಮಿಯನ್ನು ಬೆಳೆಸಿದ್ದು ರಂಗಗೀತೆಗಳ ಮೂಲಕ ಸಾಹಿತ್ಯ, ಸಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಅಭಿನಂದನೀಯ ಎಂದು ಸಾಹಿತ್ಯಾಸಕ್ತ ಪಾಂಡುರಂಗ ಭಟ್ ಕಟೀಲು ಹೇಳಿದ್ದಾರೆ.
ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನಲ್ಲಿ ಮೂಲ್ಕಿ ತಾಲೂಕಿನ ಶಿಕ್ಷಣ ಸಂಸ್ಥೆಗಳ ಆಸಕ್ತ ವಿದ್ಯಾರ್ಥಿಗಳಿಗೆ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್‌ನ ಕಲಾವಿದರಿಂದ ಆಯೋಜಿಸಿದ ರಂಗಗೀತೆಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಶಿಬಿರದಲ್ಲಿ ಭಾಗವಹಿಸಿದ ಸಾನ್ವಿ, ಮೇಘ, ಜಗತ್, ಶ್ರೀರಕ್ಷಾ ಅನುಭವ ಹೇಳಿದರು. ಮೂಲ್ಕಿ ತಾಲೂಕಿನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು. ಗಜವದನ ಹೇರಂಬ, ಬಂದೇವು ನಾವು ನಿಮ್ಮ ಚರಣಕ, ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸೋ...ಹೀಗೆ ಪುರಂದರ ದಾಸರು, ಪುತಿನ, ಬಿ.ವಿ.ಕಾರಂತ, ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದ ಸಾಹಿತಿಗಳ ರಂಗಗೀತೆಗಳನ್ನು, ವಚನಗಳನ್ನು ಕಲಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ಹೆರಿಕ್ ಪಾಯಸ್, ಕಟೀಲು ಪ್ರೌಢಶಾಲೆಯ ಉಪಪ್ರಾಚಾರ್ಯ ರಾಜಶೇಖರ್, ಜರ್ನಿ ಥೇಟರ್‌ನ ಶಶಾಂಕ್ ಐತಾಳ್, ಚಿನ್ಮಯಿ, ಮೇಘನಾ ಕುಂದಾಪುರ ಮತ್ತಿತರರಿದ್ದರು. ಉಪನ್ಯಾಸಕಿ ಶೈಲಜಾ ನಿರೂಪಿಸಿದರು. ತನುಜಾ ವಂದಿಸಿದರು.