ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೃಷಿಕರು‌ ಈಗ ಆಧುನಿಕವಾಗಿ ಯೋಚಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೃಷಿಗೆ ಫೂರಕ ಯಂತ್ರೋಪಕರಣಗಳ ಅವಶ್ಯಕತೆಯಿದೆ. ಶಿವಮೊಗ್ಗದ ಪ್ರತಿಷ್ಠಿತ ಕಂಪನಿ ಕೀಳಂಬಿ ಅಗ್ರಿಟೆಕ್ ಇಂಥದೊಂದು ಯಂತ್ರವನ್ನು ಆವಿಷ್ಕರಿಸಿದೆ.

ಜಮೀನು, ಗದ್ದೆ, ತೋಟಗಳಲ್ಲಿ ಮಣ್ಣು, ಗೊಬ್ಬರ, ಬೀಜ, ಕೃಷಿಯ ಸಣ್ಣಪುಟ್ಟ ಪರಿಕರಗಳ ಒಳಾಂಗಣ ಸಾಗಾಣೆ ಈಗ ಅಗತ್ಯವಾಗಿದೆ. ಈ ಶ್ರಮದಾಯಕ ಕೆಲಸಗಳನ್ನು ನಿರ್ವಹಿಸಲು ಕೀಳಂಬಿ ಅಗ್ರಿ ಟೆಕ್ "RANHER,SEV 5.1 "

ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ವಿಶೇಷವೆಂದರೆ ಪೆಟ್ರೋಲ್- ಡೀಸೆಲ್ ತುಂಬಿಸಲು ಬಂಕ್ ಗಳಿಗೆ ಅಲೆದಾಡಬೇಕಿಲ್ಲ. ಕೇವಲ ವಿದ್ಯುತ್ ನಿಂದ ಚಾರ್ಜ್ ಮಾಡುವ ಯಂತ್ರ. ರಿಮೋಟ್‌ನಿಂದ ನಡೆಸಬಹುದು. ಸೋಮವಾರ ಶಿವಮೊಗ್ಗ ಜಿಲ್ಲೆಯ ಸೂಗೂರಿನಲ್ಲಿ ಯಂತ್ರವನ್ನು ಅನಾವರಣಗೊಳಿಸಲಾಗಿದೆ.


ಈ ಸಂದರ್ಭ ಕೀಳಂಬಿ ಅಗ್ರಿಟೆಕ್ ನ ವ್ಯವಸ್ಥಾಪಕ‌ ನಿರ್ದೇಶಕ ರಾಜೇಶ್ ಕೀಳಂಬಿ ಮಾತನಾಡಿ, ಕೃಷಿಕರ ಅಗತ್ಯ ಮತ್ತು

ಮಾರುಕಟ್ಟೆಯ ಬೇಡಿಕೆ ಆಧರಿಸಿ ಈ ಯಂತ್ರವನ್ನು ಅಭಿವೃದ್ಧಿ ಪಡಿಸಲಾಗಿದೆ. ಕೃಷಿಕ್ಷೇತ್ರದ ಕಾರ್ಯವನ್ನು ಮತ್ತಷ್ಟು ಸುಲಭ ಹಾಗೂ ಪರಿಣಾಮಕಾರಿಯಾಗಿಸುವ ಸಲುವಾಗಿ ರೈತಸ್ನೇಹಿ‌ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.

ನಂತರ ಪ್ರಾತ್ಯಕ್ಷಿಕೆ- ಪ್ರದರ್ಶನ ನಡೆಸಲಾಯಿತು. ಈ ಯಂತ್ರದ ಬಹು- ವಿಶೇಷತೆಗಳಾದ ಭಾರ ಹೊರುವ ಸಾಮರ್ಥ್ಯ, ಬೆಳೆಗಳಿಗೆ ಔಷಧ ಸಿಂಪರಣೆ , ಕಳೆ ಕತ್ತರಿಸುವ, ಮರಕುಯ್ಯುವ ಯಂತ್ರಗಳನ್ನು ಜೋಡಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು.

ಸೂಗೂರು ಮತ್ತು ಸುತ್ತಮುತ್ತಲಿನ ರೈತಬಾಂಧವರು ಈ ಯಂತ್ರದ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಪ್ಪದಿಂದ ಆಗಮಿಸಿದ್ದ ರೈತಮಹಿಳೆ ಮಂಗಳ ಅವರು, ಈ ಯಂತ್ರ ಬಹುಪಯೋಗಿ. ಈಗ ಕೂಲಿ ಕಾರ್ಮಿಕರ ಸಮಸ್ಯೆ ತಗ್ಗಿಸುವಲ್ಲಿ ಇದನ್ನ ಬಳಸಬಹುದು ಎಂದರು.

ಕೃಷಿಕ ಪ್ರವೀಣ್ ಸೂಗೂರ್ ಅವರು, ಸದ್ಯದ ಪರಿಸ್ಥಿತಿಯಲ್ಲಿ ಪೆಟ್ರೋಲ್- ಡೀಸೆಲ್ ಆಧಾರಿತ ಯಂತ್ರಗಳ ಬಳಕೆ ರೈತರಿಗೆ ಹೊರೆಯಾಗಿದೆ. ವಿದ್ಯುತ್ ನಿಂದ ನಡೆಯುವ ಈ ಯಂತ್ರ ಒಂದು ವರದಾನ ಎಂದರು .

ಇನ್ನೂ ಅನೇಕ ರೈತರು ಯಂತ್ರದ ಕಾರ್ಯಕ್ಷಮತೆ ಬಗ್ಗೆ ಚರ್ಚಿಸಿದರು. ಉತ್ಪನ್ನದ ಬೆಲೆ ಮತ್ತು ಇತರೆ ಮಾಹಿತಿಗಳನ್ನು ಸ್ಥಳದಲ್ಲಿಯೇ ರೈತರಿಗೆ ತಿಳಿಸಲಾಯಿತು. ಅಷ್ಟೇ ಅಲ್ಲದೆ ಖರೀದಿಸುವವರಿಗೆ ವಿಶೇಷ ಆಫರ್ ಗಳನ್ನು ಘೋಷಿಸಲಾಯಿತು.