ರಾಜ್ಯಕ್ಕೆ ಬಂಡವಾಳ ಹರಿವು ಹೆಚ್ಚಿಸುವ ಉದ್ದೇಶದೊಂದಿಗೆ ಹೂಡಿಕೆ ಸಮಾವೇಶಕ್ಕಿಂದು ಚಾಲನೆ

| N/A | Published : Feb 11 2025, 01:45 AM IST / Updated: Feb 11 2025, 05:13 AM IST

ರಾಜ್ಯಕ್ಕೆ ಬಂಡವಾಳ ಹರಿವು ಹೆಚ್ಚಿಸುವ ಉದ್ದೇಶದೊಂದಿಗೆ ಹೂಡಿಕೆ ಸಮಾವೇಶಕ್ಕಿಂದು ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಕ್ಕೆ ಬಂಡವಾಳ ಹರಿವು ಹೆಚ್ಚಿಸುವ ಉದ್ದೇಶದೊಂದಿಗೆ ಫೆ.12ರಿಂದ 14ರವರೆಗೆ ಆಯೋಜಿಸಲಾಗಿರುವ ಇನ್ವೆಸ್ಟ್‌ ಕರ್ನಾಟಕ ಸಮಾವೇಶಕ್ಕೆ ಮಂಗಳವಾರ ಸಂಜೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಚಾಲನೆ ನೀಡಲಿದ್ದಾರೆ.

 ಬೆಂಗಳೂರು : ರಾಜ್ಯಕ್ಕೆ ಬಂಡವಾಳ ಹರಿವು ಹೆಚ್ಚಿಸುವ ಉದ್ದೇಶದೊಂದಿಗೆ ಫೆ.12ರಿಂದ 14ರವರೆಗೆ ಆಯೋಜಿಸಲಾಗಿರುವ ಇನ್ವೆಸ್ಟ್‌ ಕರ್ನಾಟಕ ಸಮಾವೇಶಕ್ಕೆ ಮಂಗಳವಾರ ಸಂಜೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಚಾಲನೆ ನೀಡಲಿದ್ದಾರೆ.

ರಾಜ್ಯದ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸುವ ಸಿದ್ಧತೆ ರೂಪದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುತ್ತಿದೆ. ಬೆಂಗಳೂರು ಅರಮನೆಯಲ್ಲಿ ಫೆ.12ರಿಂದ 14ರವರೆಗೆ ಸಮಾವೇಶ ನಡೆಯಲಿದೆ. ಸಮಾವೇಶಕ್ಕೂ ಒಂದು ದಿನ ಮುಂಚಿತವಾಗಿ ಉದ್ಘಾಟನಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಮಂಗಳವಾರ ಸಂಜೆ 4 ಗಂಟೆಗೆ ರಾಜನಾಥ್‌ ಸಿಂಗ್‌ ಉದ್ಘಾಟಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ, ರಾಜ್ಯ ಸಚಿವರು, ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್‌ ಮಹಿಂದ್ರಾ ಸೇರಿ ಇನ್ನಿತರ ಉದ್ಯಮಿಗಳು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ರಾಹುಲ್‌ಗಾಂಧಿ ಅವರು ಕೈಗಾರಿಕಾ ಇಲಾಖೆಯು ಮೈಕ್ರೋಸಾಫ್ಟ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ನೂತನ ಏಕಗವಾಕ್ಷಿ ತಂತ್ರಾಂಶಕ್ಕೆ ಚಾಲನೆ ನೀಡಲಿದ್ದಾರೆ.

ಫೆ.14ರಂದು ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೇಂದ್ರದ ಸಚಿವರು, ರಾಜ್ಯ ಸಚಿವರು, ಉದ್ಯಮಿಗಳು ಉಪಸ್ಥಿತರಿರಲಿದ್ದಾರೆ.

19 ದೇಶಗಳು, 10 ಲಕ್ಷ ಕೋಟಿ ಹೂಡಿಕೆ:

ಸಮಾವೇಶದಲ್ಲಿ 19 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜತೆಗೆ 9 ದೇಶಗಳ ಪೆವಿಲಿಯನ್‌ಗಳು ಹಾಗೂ ವಿಶೇಷ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. 2 ಸಾವಿರಕ್ಕೂ ಹೆಚ್ಚಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಮಾವೇಶದ ಭಾಗವಾಗಿರಲಿವೆ. ಇನ್ವೆಸ್ಟ್‌ ಕರ್ನಾಟಕದ ಅಂಗವಾಗಿ ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿ ಹೆಚ್ಚಿನ ಇನ್ಸೆಂಟಿವ್‌ (ರಿಯಾಯಿತಿ) ನೀಡುವಂತಹ ಹೊಸ ಕೈಗಾರಿಕಾ ನೀತಿಯನ್ನೂ ಬಿಡುಗಡೆ ಮಾಡಲಾಗುತ್ತಿದೆ. ನೂತನ ನೀತಿಯಲ್ಲಿ ರಾಜ್ಯದ ಉತ್ಪಾದನಾ ಕ್ಷೇತ್ರ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಿಸುವತ್ತ ಗಮನಹರಿಸಲಾಗುತ್ತಿದೆ. ಹಾಗೆಯೇ, 3 ದಿನಗಳ ಸಮಾವೇಶದಲ್ಲಿ 60ಕ್ಕೂ ಹೆಚ್ಚಿನ ವಿಷಯ ತಜ್ಞರು ತಮ್ಮ ವಿಚಾರವನ್ನು ಮಂಡಿಸಲಿದ್ದಾರೆ.

ಇನ್ವೆಸ್ಟ್‌ ಕರ್ನಾಟಕದಲ್ಲಿ ಮಷಿನ್‌ ಟೂಲ್ಸ್‌, ಎಲೆಕ್ಟ್ರಾನಿಕ್ಸ್‌, ಡಿಫೆನ್ಸ್‌, ಉತ್ಪಾದನಾ ಕ್ಷೇತ್ರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ನಿರೀಕ್ಷೆ ಹೊಂದಲಾಗಿದೆ. ಇನ್ವೆಸ್ಟ್‌ ಕರ್ನಾಟಕದಲ್ಲಿ ಒಟ್ಟು 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಹೊಂದಲಾಗಿದೆ. ಅಲ್ಲದೆ, ಒಡಂಬಡಿಕೆ ನಂತರ ಎಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ತಿಳಿಯಲಿದೆ.

ವಿವಿಧ ಪ್ರಶಸ್ತಿ ಪ್ರದಾನ:

ರಾಜ್ಯದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ 14 ಸಂಸ್ಥೆಗಳಿಗೆ ಫೆ.12ರಂದು ಪುರಸ್ಕರಿಸಲಾಗುವುದು. ಫೆ.13ರಂದು ಎಸ್‌ಎಂಇ ಕನೆಕ್ಟ್‌ ಅಡಿ 35ಕ್ಕೂ ಹೆಚ್ಚಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಫೆ.14ರಂದು ನಡೆಯಲಿರುವ ಸಮಾರೋಪದಲ್ಲಿ ವೆಂಚುರೈಸ್‌ ಕಾರ್ಯಕ್ರಮದ ಅಡಿ ಎಲೆಕ್ಟ್ರಿಕ್‌ ವಾಹನ ಸೇರಿ ಇನ್ನಿತರ ಮೂರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ತಲಾ 3 ಸಂಸ್ಥೆಗಳಿಗೆ ಒಟ್ಟು 3 ಲಕ್ಷ ಡಾಲರ್‌ ಪ್ರಶಸ್ತಿ ಮೊತ್ತವನ್ನು ವಿತರಿಸಲಾಗುತ್ತದೆ.

ಡಿಸಿಎಂ ಡಿಕೆಸು ಪರಿಶೀಲನೆ

ಬೆಂಗಳೂರು ಅರಮನೆಯಲ್ಲಿ ಬುಧವಾರದಿಂದ ಆರಂಭವಾಗಲಿರುವ ಇನ್ವೆಸ್ಟ್‌ ಕರ್ನಾಟಕದ ಸಿದ್ಧತೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೋಮವಾರ ಪರಿಶೀಲನೆ ನಡೆಸಿದರು. ಉದ್ಘಾಟನಾ ಕಾರ್ಯಕ್ರಮದ ವೇದಿಕೆ, ಪ್ರದರ್ಶಕ ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿನ ಸಿದ್ಧತೆ ಮತ್ತು ಕಾರ್ಯಕ್ರಮಗಳ ಮಾಹಿತಿ ಪಡೆದರು. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಆಯುಕ್ತೆ ಗುಂಜನ್‌ ಕೃಷ್ಣ ಇತರರಿದ್ದರು.