ಹಿರಿಯೂರು ಕಂದಾಯ ಇಲಾಖೆ ಭ್ರಷ್ಟಾಚಾರದ ತನಿಖೆ ನಡೆಸಿ

| Published : Oct 24 2024, 12:35 AM IST

ಸಾರಾಂಶ

ಹಿರಿಯೂರು: ಕಂದಾಯ ಇಲಾಖೆ ನಿಯಮ ಉಲ್ಲಂಘಿಸಿ ಕೆಲ ಕಂಪನಿಗಳು ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದರೂ ಕ್ರಮ ವಹಿಸದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಹಿರಿಯೂರು: ಕಂದಾಯ ಇಲಾಖೆ ನಿಯಮ ಉಲ್ಲಂಘಿಸಿ ಕೆಲ ಕಂಪನಿಗಳು ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದರೂ ಕ್ರಮ ವಹಿಸದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ನಗರದ ತಾಲೂಕು ಕಚೇರಿ ಮುಂಭಾಗ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ತಹಸೀಲ್ದಾರ್ ಕಚೇರಿ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ರೈತ ಮುಖಂಡರು, ಕಂದಾಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನೇಕರು ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದಾರೆ. ತಾಲೂಕಿನಲ್ಲಿ ಅನೇಕ ಕಂಪನಿಗಳು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಅಕ್ರಮವಾಗಿ ಸರ್ಕಾರಿ ಗೋಮಾಳ, ಗ್ರಾಮ ಠಾಣಾ, ಹುಲ್ಲುಬನ್ನಿ ಹಾಗೂ ಎಕ್ಸ್ ಸೈಜ್ ಕರಾಬಿನಲ್ಲಿ ನಿರಂತರವಾಗಿ ಮಣ್ಣು ತೆಗೆಯಲಾಗುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ ನೂರಾರು ಎಕರೆ ಖಾತೆ ಮಾಡಿದ್ದು, ಭೂಗಳ್ಳರು ಮತ್ತು ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಬೆಳೆ ವಿಮೆ, ಬೆಳೆ ಪರಿಹಾರ ಕಾಲಮಿತಿಯಲ್ಲಿ ಕೊಡುವುದಿಲ್ಲ. ಬೆಳೆ ಸಮೀಕ್ಷೆಯಲ್ಲಿ ಬಹಳಷ್ಟು ಲೋಪಗಳಾಗಿದ್ದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ರೈತ ಮುಖಂಡರಾದ ಸಿದ್ದರಾಮಣ್ಣ, ಹಳ್ಳಿಕೆರೆ ತಿಪ್ಪೇಸ್ವಾಮಿ, ರಾಜಪ್ಪ, ರಾಜಕುಮಾರ್, ಜಗನ್ನಾಥ್, ನಾರಾಯಣಪ್ಪ, ಶಿವಣ್ಣ, ತಿಮ್ಮಾರೆಡ್ಡಿ, ರಂಗಸ್ವಾಮಿ, ರಾಮಣ್ಣ, ಚಿಕ್ಕಣ್ಣ, ಚಿನ್ನಪ್ಪ, ಆರ್.ಕೆ.ಗೌಡ್ರು, ರಾಜಪ್ಪ, ಸಿದ್ದಪ್ಪ ಮತ್ತಿತರರಿದ್ದರು.