ಹಿರೇಕೋಗಲೂರು ಕೆರೆ ಕಳಪೆ ಕಾಮಗಾರಿ ತನಿಖೆ ನಡೆಸಿ

| Published : May 16 2024, 12:52 AM IST

ಹಿರೇಕೋಗಲೂರು ಕೆರೆ ಕಳಪೆ ಕಾಮಗಾರಿ ತನಿಖೆ ನಡೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರಿಗೆ ಅನುಕೂಲವಾಗಲೆಂದು ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮಕ್ಕೆ ₹10 ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ ಮಂಜೂರಾಗಿದೆ. ಆದರೆ, ಈ ಕಾಮಗಾರಿಗಳೆಲ್ಲ ಸಂಪೂರ್ಣ ಕಳಪೆಯಾಗಿವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ‍ಆರೋಪಿಸಿದ್ದಾರೆ.

- ಜಿಲ್ಲಾ ವಕ್ತಾರ ಸತೀಶ ಕೊಳೇನಹಳ್ಳಿ ‍ಆಗ್ರಹ । ಮಾಡಾಳ್ ವಿರೂಪಾಕ್ಷಪ್ಪ ಬಿಜೆಪಿ ಶಾಸಕರಾಗಿದ್ದಾಗ ಕೆರೆ, ಅನುದಾನ ಮಂಜೂರು

- ಕಾಮಗಾರಿಗೆಂದು ₹10 ಕೋಟಿ ಬಿಡುಗಡೆ । ಕಾಂಗ್ರೆಸ್ ಆಡಳಿತದಲ್ಲಿ ಕಳಪೆ ಕೆಲಸ, ಕೆರೆ ಏರಿಗಳ ನಿರ್ಮಾಣ: ಆರೋಪ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರಿಗೆ ಅನುಕೂಲವಾಗಲೆಂದು ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮಕ್ಕೆ ₹10 ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ ಮಂಜೂರಾಗಿದೆ. ಆದರೆ, ಈ ಕಾಮಗಾರಿಗಳೆಲ್ಲ ಸಂಪೂರ್ಣ ಕಳಪೆಯಾಗಿವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ‍ಆರೋಪಿಸಿದ್ದಾರೆ.

ಹಿರೇಕೋಗಲೂರು ಗ್ರಾಮದ ರಿ.ಸ.ನಂ.46ರಲ್ಲಿ 10.16 ಎಕರೆ ಜಮೀನಿನಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶಾಸಕರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ 2 ಕೆರೆಗಳನ್ನು ಮಂಜೂರು ಮಾಡಿಸಿದ್ದರು. ₹10 ಕೋಟಿ ಸಹ ಬಿಡುಗಡೆ ಮಾಡಿಸಿದ್ದರು. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಕೆರೆ ಕಾಮಗಾರಿ ಸಾಗಿದೆ. ಆದರೆ, ಕಾಡುಗಲ್ಲುಗಳಿಂದ ರಿವಿಟ್‌ಮೆಂಟ್‌ ಮತ್ತು ಯೋಗ್ಯವಾದ ಗ್ರಾವೆಲ್ ಬಳಸದೇ, ಕೇವಲ ಹಳದಿ ಬಣ್ಣದ ಮಣ್ಣು (ಕಟುಗು) ಹಾಗೂ ನುಸಿ ಮಣ್ಣಿನಿಂದ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದೂರಿದರು.

ಹಿರೇಕೋಗಲೂರಿನಲ್ಲಿ ಕಳಪೆ ಕೆರೆಗಳ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಬಗ್ಗೆ ಕ್ಷೇತ್ರದ ಶಾಸಕರು, ಜಿಲ್ಲಾಡಳಿತ, ಸಂಬಂಧಿಸಿದ ಎಂಜಿನಿಯರ್‌ಗಳ ಗಮನಕ್ಕೆ ತಂದಿದ್ದಾರೆ. ಆದರೆ, ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ತಮ್ಮ ಪಾಡಿಗೆ ತಾವಿದ್ದಾರೆ. ಹೀಗಾಗಿ ಗುಣಮಟ್ಟದ ಕಾಮಗಾರಿ ಆಗುತ್ತದೆಂಬ ವಿಶ್ವಾಸವೇ ಕ್ಷೀಣಿಸಿದೆ. ಜಿಲ್ಲಾಧಿಕಾರಿ ಅವರು ಹಿರೇಕೋಗಲೂರು ಕೆರೆ ಕಳಪೆ ಕಾಮಗಾರಿ ತಕ್ಷಣವೇ ನಿಲ್ಲಿಸಬೇಕು. ಈ ಬಗ್ಗೆ ಉನ್ನತಮಟ್ಟದ ಅಧಿಕಾರಿಗಳಿಂದ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೆರೆ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದರೆ ತಕ್ಷಣವೇ ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಕೆರೆ ಸುತ್ತಲೂ ಉತ್ತಮ ಮತ್ತು ಯೋಗ್ಯ ಕಲ್ಲುಗಳಿಂದ ರಿವಿಟ್‌ಮೆಂಟ್‌ ಮಾಡಿಸಿ, ಕೆರೆ ಏರಿಯೂ ಶಾಶ್ವತವಾಗಿ ಇರುವಂತೆ ಭದ್ರಪಡಿಸಬೇಕು. ಉತ್ತಮವಾದ ಗ್ರಾವೆಲ್‌ ಬಳಸಿ, ಕೆರೆ ಏರಿಗಳನ್ನು ಭದ್ರಪಡಿಸುವ ಕೆಲಸ ಮಾಡಬೇಕು. ಕಾಮಗಾರಿ ಸಂಪೂರ್ಣ ಮುಗಿಯುವವರೆಗೂ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಕೆರೆ ನಿರ್ಮಾಣ ಕಾಮಗಾರಿ ಉಸ್ತುವಾರಿ ವಹಿಸಿ, ಕಳಪೆ ಕಾಮಗಾರಿ ಆಗದಂತೆ ನಿಗಾ ವಹಿಸಲಿ ಎಂದು ಒತ್ತಾಯಿಸಿದರು.

ಹದಡಿ ಕೆರೆ ಏರಿಯು ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿ ಹಾದುಹೋಗಿದೆ. ಈ ಕೆರೆ ಏರಿ ದುರ್ಬಲಗೊಂಡಿದ್ದಾಗ ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟವಾಗಿದೆ. ಅದು ರಾಜ್ಯ ಹೆದ್ದಾರಿ, ಅದರ ಅಭಿವೃದ್ಧಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ. ಆದರೂ, ತಮಗೂ ಅದಕ್ಕೂ ಸಂಬಂಧ ಇಲ್ಲವೆಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ವಾದಿಸಿದ್ದರು. ಲೋಕೋಪಯೋಗಿ ಇಲಾಖೆಯವರು ಅದು ಕೆರೆ ಏರಿ ಮೇಲಿನ ರಸ್ತೆ, ಕೆರೆ ಏರಿ ದುರ್ಬಲಗೊಂಡಿದೆ, ಕೆರೆ ಏರಿಗೂ ತಮಗೂ ಸಂಬಂಧವಿಲ್ಲವೆಂದು ಪ್ರತಿಯಾಗಿ ವಾದಿಸಿದ್ದರು. ಕಡೆಗೆ ಹದಡಿ ಕೆರೆ ಏರಿ ದುರಸ್ತಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಎರಡೂ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ಎರಡೂ ಕಡೆಯವರು ಸಮನ್ವಯತೆಯಿಂದ ಕೆರೆ ಏರಿ ಮತ್ತು ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಆಗುವಂತೆ ನೋಡಿಕೊಂಡಿದ್ದರು ಎಂದರು.

- - -

ಕೋಟ್‌ ಸಣ್ಣ ನೀರಾವರಿ ಇಲಾಖೆಯವರು ಯಾವುದೇ ಕೆರೆಗಳ ಏರಿ ವರ್ಷಾನುಗಟ್ಟಲೇ ಭದ್ರವಾಗಿರುವಂತೆ ನೋಡಿಕೊಳ್ಳಬೇಕು. ಅದೇ ಕಾಳಜಿಯಿಂದ ಹಿರೇಕೋಗಲೂರು ಕೆರೆ ಏರಿಯನ್ನೂ ನಿರ್ಮಿಸಬೇಕು. ಕೆರೆ ಏರಿಯ ರಸ್ತೆ ಅಭಿವೃದ್ಧಿಯೂ ಉತ್ತಮವಾಗಿರುವಂತೆ ಕಾಮಗಾರಿ ಮಾಡಿಸಲಿ

- ಬಿ.ಎಂ.ಸತೀಶ, ಜಿಲ್ಲಾ ವಕ್ತಾರ, ಬಿಜೆಪಿ

- - - -15ಕೆಡಿವಿಜಿ1, 2, 3, 4:

ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಭಾಗದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆದಿರುವುದು.