ಸಿಎಂ ಡಿ.ಕೆ.ಶಿವಕುಮಾರ್ ಅವರು ಜನರು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದಾಟ ತಪ್ಪಿಸಲು ಪ್ರಜಾ ಸೇವಾ ಆಂದೋಲನವನ್ನು ಜಾರಿ ಮಾಡಿದ್ದಾರೆ. ಇದು ರಾಜ್ಯದೆಲ್ಲೆಡೆ ಯಶಸ್ವಿಯಾಗಿ ನಡೆಯುತ್ತಿದೆ. ಜನರು ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳೇ ಅವರ ಮನೆ ಬಾಗಿಲು ಬಳಿ ಹೋಗಲಿ ಎನ್ನುವ ಆಶಯವಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನಲ್ಲಿ ನಡೆದಿರುವ ಭೂ ಅಕ್ರಮ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಈಗಾಗಲೇ ಸುಮಾರು 352 ಎಕರೆ ಜಮೀನನ್ನು ವಾಪಸ್ ಪಡೆಯಲಾಗಿದೆ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ಬೊಪ್ಪೇಗೌಡನಪುರ(ಬಿ.ಜಿ.ಪುರ) ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕೆಲವರಿಗೆ ಭೂ ಹಗರಣ ಯಾರ ಕಾಲದಲ್ಲಿ ನಡೆದಿದೆ ಎನ್ನುವುದು ಗೊತ್ತಿದೆ. ಆದರೂ ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕರ ವಿರುದ್ಧ ಕಿಡಿಕಾರಿದರು.
ಭೂ ಅಕ್ರಮದ ಬಗ್ಗೆ ಸದನದಲ್ಲಿ ನಾನು ಧ್ವನಿ ಎತ್ತಿದ್ದ ಪರಿಣಾಮ ವಿಶೇಷ ತನಿಖಾ ತಂಡ ರಚನೆಯಾಗಿ ತನಿಖೆ ನಡೆಸಿದ್ದ ಹಿನ್ನೆಲೆಯಲ್ಲಿ 600ಕ್ಕೂ ಹೆಚ್ಚು ಎಕರೆ ಪತ್ತೆಯಾಗಿದೆ. ಆರ್ ಟಿಸಿ ರದ್ದು ಪಡಿಸಿದ ಸುಮಾರು 352 ಎಕರೆ ಜಮೀನನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ಈಗ ಸಿಕ್ಕಿರುವುದು ಬರೀ ಅರ್ಧದಷ್ಟು ಮಾತ್ರ. ಇನ್ನೂ ಶೇ.50ರಷ್ಟು ಇದೆ. ತನಿಖೆ ಬಗ್ಗೆ ಅರಿವು ಇಲ್ಲದೇ ಕೆಲವರು ಏನೇನೋ ಮಾತನಾಡುತ್ತಾರೆ ಎಂದು ಹೆಸರೇಳದೇ ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾನು ಶಾಸಕನಾಗುವ ಮೊದಲು ಬೊಪ್ಪೇಗೌಡನಪುರ(ಬಿ.ಜಿ.ಪುರ) ಹೋಬಳಿ ಹೇಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸರಿಯಾದ ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದ ಈ ಭಾಗಕ್ಕೆ ಶಾಸಕನಾದ ನಂತರ ಅನೇಕ ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ಹೊಸ ಕಾಯಕಲ್ಪ ನೀಡಲಾಗಿದೆ ಎಂದರು.ಮಾಹಿತಿ ಕೊರತೆ ಇರುವ ಕೆಲವರು ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ನಾನು ತಂದೆ ಎನ್ನುತ್ತಾರೆ. ಏತ ನೀರಾವರಿ ಯೋಜನೆಗೂ ಹನಿ ನೀರಾವರಿ ಯೋಜನೆಗೂ ವ್ಯತ್ಯಾಸ ಗೊತ್ತಿಲ್ಲವೇ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಹೇಳಿಕೆಗೆ ವ್ಯಂಗ್ಯವಾಡಿದರು.
ಯೋಜನೆಯ ಕಾಮಗಾರಿಯು ಬಹುತೇಕ ಮುಕ್ತಾಯವಾಗಿದೆ. ಈಗಾಗಲೇ ರೈತರ ಸಭೆ ನಡೆಸಿ ಅರಿವು ಮೂಡಿಸಲಾಗಿದೆ. ಕೆಲವರ ಅಪಪ್ರಚಾರದಿಂದ ಇನ್ನೂ ಹಲವು ರೈತರು ಕೈಜೋಡಿಸುತ್ತಿಲ್ಲ. ಕೆಲವೆಡೆ ಜಮೀನುಗಳಿಗೆ ಅಳವಡಿಸಿದ ಪೈಪ್ ಗಳನ್ನು ಹಾಳು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮಣ್ಣು ಸಾಗಿಸುವ ಉದ್ದೇಶದಿಂದ ಆಗಿರುವ ಅನಾಹುತಗಳಿಗೆ ಅವರೇ ಹೊಣೆಯಾಗುತ್ತಾರೆ. ಇನ್ನು ಮುಂದೆ ಸುಮ್ಮನೆ ಇರುವುದಿಲ್ಲ. ಇಲ್ಲಿಂದಲೇ ಅಂಥವರಿಗೆ ಒಂದು ಎಚ್ಚರಿಕೆ ನೀಡುವೆ, ನಿಮಗೆ ಕಾನೂನಿನಡಿ ಕ್ರಮವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪೂರಿಗಾಲಿ ಹನಿ ನೀರಾವರಿ ಯೋಜನೆಯು ಅಂತರ್ ರಾಜ್ಯ ಒಪ್ಪಂದವಾಗಿದೆ. ಅದನ್ನು ಜಾರಿ ಮಾಡಿಸಲು ಸಾಕಷ್ಟು ಶ್ರಮ ಹಾಕಲಾಗಿದೆ. ಸುಮಾರು 25 ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಈ ಯೋಜನೆಯ ಸಂಬಂಧ ಈಗಾಗಲೇ 1 ಸಾವಿರ ಎಕರೆಗೆ ಒಂದು ಸಂಘವನ್ನು ರಚಿಸಿ ರೈತರನ್ನು ಒಗ್ಗೂಡಿಸಲಾಗಿದೆ. ಎಲ್ಲರನ್ನು ಸಾಮೂಹಿಕ ಕೃಷಿ ಪದ್ಧತಿಗೆ ಒಳಪಡಿಸಿ ಯೋಜನೆ ಯಶಸ್ವಿಗೆ ಮುಂದಾಗಬೇಕಿದೆ. ಇನ್ನೂ ಎರಡು ಗ್ರಾಮಗಳನ್ನು ಯೋಜನೆಯ ವ್ಯಾಪ್ತಿಗೆ ಸೇರಿಸಲು ಸರ್ಕಾರದ ಅನುಮೋದನೆಗೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.ಸಿಎಂ ಡಿ.ಕೆ.ಶಿವಕುಮಾರ್ ಅವರು ಜನರು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದಾಟ ತಪ್ಪಿಸಲು ಪ್ರಜಾ ಸೇವಾ ಆಂದೋಲನವನ್ನು ಜಾರಿ ಮಾಡಿದ್ದಾರೆ. ಇದು ರಾಜ್ಯದೆಲ್ಲೆಡೆ ಯಶಸ್ವಿಯಾಗಿ ನಡೆಯುತ್ತಿದೆ. ಜನರು ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳೇ ಅವರ ಮನೆ ಬಾಗಿಲು ಬಳಿ ಹೋಗಲಿ ಎನ್ನುವ ಆಶಯವಾಗಿದೆ ಎಂದರು.
ಇದೇ ವೇಳೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆಯಿಂದ ಸುಕನ್ಯ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಪಾಸ್ ಬುಕ್ ವಿತರಿಸಲಾಯಿತು. ಕೃಷಿ ಇಲಾಖೆಯ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಂಟಿ ನಿರ್ದೇಶಕ ಎಸ್.ಜಯಸ್ವಾಮಿ, ಉಪ ನಿರ್ದೇಶಕಿ ಮಾಲತಿ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಗಳಾದ ಬಾಬು ಕೃಷ್ಣದೇವ್, ವಾಸುದೇವ್, ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ಪಾಲ್ಗೊಂಡಿದ್ದರು.