ಸಾರಾಂಶ
- ಆರ್ಯವೈಶ್ಯ ಸಂಘದಿಂದ ಮುಜರಾಯಿ ಜಾಗ ಕಬಳಿಕೆ: ಆರೋಪ । ವಿವಾದಿತ ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಪರಿಶೀಲನೆ
ಕನ್ನಡಪ್ರಭವಾರ್ತೆ ಪಾವಗಡಸರ್ಕಾರಿ ಮುಜರಾಯಿ ಇಲಾಖೆಗೆ ಸೇರಿದ್ದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಜಮೀನು ಒತ್ತುವರಿಯಾಗಿದ್ದು, ದೇವಸ್ಥಾನವೇ ನಾಪತ್ತೆಯಾಗಿದೆ. ಸೂಕ್ತ ತನಿಖೆ ನಡೆಸಿ ಕ್ರಮವಹಿಸುವಂತೆ ಕೋರಿ ರಾಜ್ಯ ಕಾನೂನು ಸಮಿತಿಯ ಅಧ್ಯಕ್ಷ, ಎಎಪಿಯ ಮುಖಂಡರೊಬ್ಬರು ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ವರದರಾಜ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಶುಕ್ರವಾರ ಪಟ್ಟಣದ ಶ್ರೀನಿವಾಸ ನಗರದಲ್ಲಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಸ್ಥಳ ಹಾಗೂ ದಾಖಲೆ ಪರಿಶೀಲನೆ ನಡೆಸಿದರು.ಪಟ್ಟಣದಲ್ಲಿ ಸರ್ಕಾರಿ ವ್ಯಾಪ್ತಿಗೆ ಒಳಪಟ್ಟಿದ್ದ ಶ್ರೀ ನೀಲಕಂಠೇಶ್ವರ ಸ್ವಾಮಿ ವಿಗ್ರಹ ಹಾಗೂ ದೇವಸ್ಥಾನ ನಾಪತ್ತೆಯಾಗಿದೆ. ಈ ದೇವಸ್ಥಾನಕ್ಕೆ ಮೀಸಲಿದ್ದ ಜಮೀನು ಒತ್ತುವರಿಯಾಗಿದ್ದು, ಈ ದೇವಸ್ಥಾನದ ಹೆಸರು ಬದಲಾಯಿಸಿ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನ ಎಂದು ನಾಮಕರಣಗೊಳಿಸಿದ್ದಾರೆ. ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಜಾಗದಲ್ಲಿ ಕ್ನನಿಕಾ ಪರಮೇಶ್ವರಿ ದೇವಸ್ಥಾನವಿದೆ. ಹಾಗಾದರೆ ನೀಲ ಕಂಠೇಶ್ವರಸ್ವಾಮಿ ದೇವಸ್ಥಾನ ಎಲ್ಲಿದೆ? ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ಸ್ಥಾಪನೆ ಹಾಗೂ ದೇವಸ್ಥಾನ ಜಮೀನಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳಿವೆ. ಬೇರೆಯವರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಮುಜಾರಾಯಿ ಇಲಾಖೆಗೆ ಸೇರಿದ್ದ ನೀಲಕಂಠೇಶ್ವರಸ್ವಾಮಿ ದೇವಸ್ಥಾನ ಜಾಗ ಕಬಳಿಕೆಯಾಗಿ ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಕೂಡಲೇ ಪರಿಶೀಲಿಸಿ ತೆರವುಗೊಳಿಸುವಂತೆ ಎಎಪಿಯ ಮುಖಂಡ ಹಾಗೂ ರಾಜ್ಯ ಕಾನೂನು ವೇದಿಕೆಯ ರಾಜ್ಯಾಧ್ಯಕ್ಷ ಎನ್.ರಾಮಾಂಜಿನಪ್ಪ ಕಂದಾಯ ಇಲಾಖೆಯ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.ಶಿರಾ ರಸ್ತೆ ನಾಗರಕಟ್ಟೆ ಸಮೀಪದ ಕೋಟ್ಯಾಂತರ ಮೌಲ್ಯದ ಜಮೀನಿದ್ದು, ಜಮೀನಲ್ಲಿರುವ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಾಲಯದ ಆಸ್ತಿ ಮುಜಾರಾಯಿ ಇಲಾಖೆಗೆ ಸೇರಿದೆ. ಆರ್ಯವೈಶ್ಯ ಸಂಘದವರು ಈ ಸರ್ಕಾರಿ ಜಾಗ ಕಬಳಿಸಿರುವುದಾಗಿ ರಾಮಾಂಜಿನಪ್ಪ ಆರೋಪಿಸಿದ್ದು, ಸಂಘಕ್ಕೆ ಖಾತೆ, ಪಹಣಿ ಬದಲಾವಣೆ ಬಳಿಕ ದೇವಸ್ಥಾನದ ಹಳೇ ಕಲ್ಯಾಣಿ ಬಾವಿ ಸಹ ಧ್ವಂಸ ಮಾಡಿದ್ದಾರೆ. ನೀಲಕಂಠೇಶ್ವರ ದೇವ ಸ್ಥಾನದ ಬದಲಿಗೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಎಂದು ಬೋರ್ಡ್ ಹಾಕಿ ಸರ್ಕಾರಿ ಜಾಗ ಕಬಳಿಸಿದ್ದಾರೆ ಎಂದು ಸೂಕ್ತ ದಾಖಲೆಗಳ ಸಹಿತ ಕ್ರಮಕ್ಕೆ ಮುಜರಾಯಿ ಇಲಾಖೆಗೆ ಪತ್ರದ ಮನವಿ ಸಲ್ಲಿಸಿದ್ದಾರೆ.ಸರ್ಕಾರಿ ಮುಜಾರಾಯಿ ಇಲಾಖೆ ಸಂಬಂಧಪಟ್ಟಂತೆ 1965 ರಿಂದ 1985ರವೆಗೆ ಪಹಣಿಯಲ್ಲಿ ಶ್ರೀ ನೀಲಕಂಠೇಶ್ವರ ಸ್ವಾಮಿ ಹೆಸರಿದ್ದು ,1985-86ರಲ್ಲಿ ಆರ್ಯವೈಶ್ಯ ಸಂಘ ಪ್ರೆಸಿಡೆಂಟ್ ಎಂದು ಪಹಣಿ ಬದಲಾವಣೆ ಆಗಿದೆ. ಮುಜರಾಯಿ ಇಲಾಖೆ ಸ್ಥಾಪಿಸಿದ್ದ ಶ್ರೀ ನೀಲಕಂಠೇಶ್ವರ ದೇವಸ್ಥಾನ ಹಾಗೂ ಇದರ ವಿರ್ಸ್ತೀಣದ ಜಾಗ ಪತ್ತೆ ಹಚ್ಚಿಕೊಡುವಂತೆ ತಹಸೀಲ್ದಾರ್‌ಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವರದರಾಜ್ ಹಾಗೂ ಇಲ್ಲಿನ ಕಂದಾಯ ಇಲಾಖೆಯ ಅಧಿಕಾರಿಗಳು ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೋಟ್:ನೀಲಕಂಠೇಶ್ವರಸ್ವಾಮಿ ದೇವಸ್ಥಾನ ವಿಚಾರವಾಗಿ ಕಾನೂನು ಹೋರಾಟ ಸಮಿತಿಯ ಎನ್.ರಾಮಾಂಜಿನಪ್ಪ ಸಲ್ಲಿಸಿದ್ದ ದೂರಿನ ಮೇರೆಗೆ ಪಟ್ಟಣದ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸ್ಥಳಕ್ಕೆ ಭೇಟಿ ನೀಡಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಕಂದಾಯ ಇಲಾಖೆಯ ದಾಖಲೆ ಅನ್ವಯ ಕ್ರಮ ಜರುಗಿಸಲಾಗುವುದು.
- ವರದರಾಜ್, ತಹಸೀಲ್ದಾರ್‌ಬಾಕ್ಸ್:ಕಾನೂನು ಹೋರಾಟಕ್ಕೆ ಸಿದ್ಧ: ಸುದೇಶ್ನಿಯಮನುಸಾರ ಕನ್ನಿಕಾ ಪರಮೇಶ್ವರಿ ದೇವಸ್ಥಾನ ತಾಲೂಕು ಆರ್ಯ ವೈಶ್ಯ ಮಂಡಳಿ ಹೆಸರಿಗಿದ್ದು ಯಾವುದೇ ಜಾಗವನ್ನು ಯಾರೂ ಕಬಳಿಸಿಲ್ಲ. ಈ ಕುರಿತು ಯಾವುದೇ ಕಾನೂನು ಹೋರಾಟಕ್ಕೆ ಸಿದ್ಧ ರಿದ್ದೇವೆ. 1953ರಲ್ಲಿ ಪಟ್ಟಣದ ಸರ್ವೆ ನಂಬರ್ 72ರಲ್ಲಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಜಮೀನು ದಾನಿಗಳಿಂದ ಆರ್ಯವೈಶ್ಯ ಮಂಡಳಿ ಹೆಸರಿಗೆ ಡೋನೆಟ್ ಆಗಿದೆ. ಈ ಸಂಬಂಧ ಫಹಣಿ ಖಾತೆ ಇದೆ. ಕೆಲ ಕಂಡಿಷನ್‌ಗಳ ಮೇಲೆ ಈ ಜಾಗದಲ್ಲಿ ಶ್ರೀ ಅಂಜನೇಯಶೆಟ್ಟಿ ಕಲ್ಯಾಣಮಂಟಪ ಕಟ್ಟಲು ಉದ್ದೇಶಿಸಲಾಗಿದೆ ಎಂದು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಗೂ ತಾಲೂಕು ಕಾಂಗ್ರೆಸ್ ನಗರಾಧ್ಯಕ್ಷ ಸುದೇಶ್ ಬಾಬು ತಿಳಿಸಿದ್ದಾರೆ.
ಕೋಟ್-2ನೀಲಕಂಠೇಶ್ವರ ದೇವಸ್ಥಾನ ಸರ್ಕಾರಿ ಮುಜರಾಯಿ ಇಲಾಖೆ ಸೇರಿದ್ದ ಬಗ್ಗೆ ದಾಖಲೆಗಳಿವೆ. ತನಿಖೆಗೆ ಒತ್ತಾಯಿಸಲಾಗಿದೆ. ಈ ಜಾಗದಲ್ಲಿರುವ ನೀಲಕಂಠೇಶ್ವರ ದೇವಸ್ಥಾನ ಪತ್ತೆಯಾಗಬೇಕು. ಅಕ್ರಮ ಒತ್ತುವರಿ ತೆರವುಗೊಳಿಸಬೇಕು. ಕಾನೂನು ಹೋರಾಟಕ್ಕೆ ಸಿದ್ದರಿದ್ದೇವೆ. ತನಿಖೆಗೆ ಒತ್ತಾಯಿಸಿ ಕಂದಾಯ ಇಲಾಖೆಗೆ ದೂರು ಸಲ್ಲಿಸಿದ್ದ ಹಿನ್ನಲೆಯಲ್ಲಿ ಬೆದರಿಕೆಗಳು ಬರುತ್ತಿವೆ.ಇದಕ್ಕೆ ಜಗ್ಗುವುದಿಲ್ಲ.- ಎನ್.ರಾಮಾಂಜಿನಪ್ಪ, ಕಾನೂನು ಹೋರಾಟ ಸಮಿತಿಯ ಅಧ್ಯಕ್ಷ
ಫೋಟೋ 21ಪಿವಿಡಿ1: ಪಾವಗಡ, ದೇವಸ್ಥಾನ ಹೆಸರಿನಲ್ಲಿ ಸರ್ಕಾರಿ ಜಮೀನು ಕಬಳಿಕೆ ನೀಲಕಂಠೇಶ್ವರಸ್ವಾಮಿ ದೇವಸ್ಥಾನ ನಾಪತ್ತೆಯ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ವರದರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.