ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳವರ 96ನೇ ಪುಣ್ಯ ಸ್ಮರಣೋತ್ಸವದ ಪೋಸ್ಟರ್ ಮತ್ತು ಆಮಂತ್ರಣ ಪತ್ರಿಕೆಗಳನ್ನು ಇಲ್ಲಿನ ವಿರಕ್ತಮಠದಲ್ಲಿ ಶನಿವಾರ ಸಂಜೆ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಹಾನಗಲ್ಲ: ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳವರ 96ನೇ ಪುಣ್ಯ ಸ್ಮರಣೋತ್ಸವದ ಪೋಸ್ಟರ್ ಮತ್ತು ಆಮಂತ್ರಣ ಪತ್ರಿಕೆಗಳನ್ನು ಇಲ್ಲಿನ ವಿರಕ್ತಮಠದಲ್ಲಿ ಶನಿವಾರ ಸಂಜೆ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಫೆ. 6ರಿಂದ ಮೂರು ದಿನಗಳು ಇಲ್ಲಿನ ವಿರಕ್ತಮಠದಲ್ಲಿ ನಡೆಯುವ ಪುಣ್ಯಸ್ಮರಣೋತ್ಸವದ ಅರ್ಥಪೂರ್ಣ ಆಚರಣೆಗೆ ಭಕ್ತರ ಸಹಕಾರ ಅಗತ್ಯವಾಗಿದೆ. ಈಗಾಗಲೇ ರಚನೆಗೊಂಡ ಸಮಿತಿಗಳ ಸದಸ್ಯರು ಜವಾಬ್ದಾರಿ ನಿರ್ವಹಿಸಿದಾಗ ಕುಮಾರೇಶನ ಸೇವೆಯ ಸಾರ್ಥಕತೆ ಮೂಡುತ್ತದೆ ಎಂದು ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ನುಡಿದರು.ಮೂರು ದಿನಗಳ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಮಠಾಧೀಶರು, ಉತ್ತಮ ವಾಗ್ಮಿಗಳು, ವಿಷಯತಜ್ಞ ಉಪನ್ಯಾಸಕರು, ಕಲಾವಿದರನ್ನು ಆಹ್ವಾನಿಸಲಾಗುತ್ತಿದೆ. ಪ್ರತಿದಿನ ಧಾರ್ಮಿಕ ಗೋಷ್ಠಿ, ಉಪನ್ಯಾಸ, ಸಾಧಕರಿಗೆ ಸನ್ಮಾನ, ಅನ್ನ ದಾಸೋಹ ನಡೆಯಲಿದ್ದು, ಉತ್ಸವದ ಕೊನೆಯ ದಿನ ಸಾಮೂಹಿಕ ವಿವಾಹ ಮತ್ತು ಕುಮಾರ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಉತ್ಸವದ ಯಶಸ್ಸಿಗಾಗಿ ಸಮಿತಿಗಳನ್ನು ರಚಿಸಲಾಗಿದ್ದು, ಮೂರುಸಾವಿರಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಉತ್ಸವ ಸಮಿತಿ ಉಪಾಧ್ಯಕ್ಷರಾಗಿ ಬಸವರಾಜ ಯಲಿ, ರವಿಕುಮಾರ ಎಚ್, ದಾನಪ್ಪ ಸಿಂಧೂರ, ಪ್ರಧಾನ ಕಾರ್ಯದರ್ಶಿಯಾಗಿ ನಾಗಪ್ಪ ಸವದತ್ತಿ, ರವಿಬಾಬು ಪೂಜಾರ, ಶಿವಯೋಗಿ ಸವದತ್ತಿ ನೇಮಕಗೊಂಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು.ಕಾರ್ಯದರ್ಶಿಯಾಗಿ ಶಂಭು ಕೋಟಿ, ರಾಜಶೇಖರ ಸಿಂಧೂರ, ಬಸವರಾಜ ಆಲದಕಟ್ಟಿ, ಕೋಶಾಧ್ಯಕ್ಷ ಕುಮಾರ ಹತ್ತಿಕಾಳ, ಸಲಹಾ ಸಮಿತಿ ಸದಸ್ಯರಾಗಿ ಎ.ಎಸ್.ಬಳ್ಳಾರಿ, ಬಿ.ಎಸ್.ಅಕ್ಕಿವಳ್ಳಿ, ಚನ್ನವೀರಸ್ವಾಮಿ ಹಿರೇಮಠ, ಕಲ್ಯಾಣಕುಮಾರ ಶೆಟ್ಟರ, ಡಾ.ವಿ.ಎಸ್.ಪುರಾಣಿಕಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ರವಿಬಾಬು ಪೂಜಾರ ತಿಳಿಸಿದರು.ಉತ್ಸವದ ಮೊದಲ ದಿನದ ಅನ್ನ ದಾಸೋಹ ಸೇವೆಯನ್ನು ನಿಸರ್ಗ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಆಯೋಜಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ನಾಗಪ್ಪ ಸವದತ್ತಿ ಹೇಳಿದರು.