ಸಾರಾಂಶ
ಪರ್ಯಾಯ ಸಮಿತಿ ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರು ಮಂಗಳವಾರ ಲಕ್ನೋದಲ್ಲಿ ಯೋಗಿ ಅವರನ್ನು ಭೇಟಿ ಮಾಡಿ ಶ್ರೀಗಳ ಬಿನ್ನಹವನ್ನು ಅರ್ಪಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಕೃಷ್ಣಮಠದ ಪರ್ಯಾಯ ಪೀಠಾಧೀಶ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಕೃಷ್ಣಪೂಜಾ ಪರ್ಯಾಯದ ಅವಧಿಯಲ್ಲಿ ಕೋಟಿ ಗೀತಾ ಲೇಖನ ಯಜ್ಞದ ಮೊದಲ ಹಂತವಾಗಿ ಲಕ್ಷ ಗೀತಾ ಲೇಖನಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸುವಂತೆ ಆಪೇಕ್ಷಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಶ್ರೀಗಳ ಸೂಚನೆಯಂತೆ ಪರ್ಯಾಯ ಸಮಿತಿ ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರು ಮಂಗಳವಾರ ಲಕ್ನೋದಲ್ಲಿ ಯೋಗಿ ಅವರನ್ನು ಭೇಟಿ ಮಾಡಿ ಶ್ರೀಗಳ ಬಿನ್ನಹವನ್ನು ಅರ್ಪಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಇದರಿಂದ ಸಂತಸಗೊಂಡ ಯೋಗಿ ಅವರು ಅಲ್ಲಿಂದಲೇ ಶ್ರೀಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕೋಟಿಗೀತಾ ಲೇಖನ ಯಜ್ಞವನ್ನು ಮುಕ್ತವಾಗಿ ಪ್ರಶಂಸಿಸಿ ತಮ್ಮನ್ನು ಆಹ್ವಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು, ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರು.ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಆಪ್ತರಾದ ವಾಸುದೇವ ಭಟ್ ಪೆರಂಪಳ್ಳಿ , ಬಿಜೆಪಿ ಪ್ರಮುಖರಾದ ಮಹೇಶ್ ಠಾಕೂರ್, ಸುವರ್ಧನ್ ನಾಯಕ್ ಉಪಸ್ಥಿತರಿದ್ದರು.