ಆಹಾರ ಧಾನ್ಯ ಕಳ್ಳ ಸಾಗಾಣಿಕೆಯಲ್ಲಿ ಅಧಿಕಾರಿಗಳ ಶಾಮೀಲು

| Published : Feb 01 2025, 12:01 AM IST

ಸಾರಾಂಶ

ಸರ್ಕಾರಿ ಗೋದಾಮಿನಲ್ಲಿರುವ ಪಡಿತರ ಅಕ್ಕಿಯು ಅಧಿಕಾರಿಗಳ ಹಸ್ತಕ್ಷೇಪ ಇಲ್ಲದೆ ಯಾವುದೇ ಹಗರಣ ನಡೆಯಲು ಸಾಧ್ಯವಿಲ್ಲ. ಆಹಾರ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಇಲ್ಲದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಸರ್ಕಾರಿ ಗೋದಾಮಿನಲ್ಲಿರುವ ಪಡಿತರ ಅಕ್ಕಿಯು ಅಧಿಕಾರಿಗಳ ಹಸ್ತಕ್ಷೇಪ ಇಲ್ಲದೆ ಯಾವುದೇ ಹಗರಣ ನಡೆಯಲು ಸಾಧ್ಯವಿಲ್ಲ. ಆಹಾರ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಇಲ್ಲದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದರು.

ಶುಕ್ರವಾರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಪ್ರಗತಿ ಪ್ರಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಹಾರ ಇಲಾಖೆ ಅಧಿಕಾರಿಗಳಿಂದ ಸಮರ್ಪಕವಾದ ಉತ್ತರ ಬಾರದೇ ಇದ್ದಾಗ ಶಾಸಕರು ಬಡವರ ಹಸಿವು ನೀಗಿಸಲು ಸರ್ಕಾರ ರೂಪಿಸಿರುವ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಕ್ಕೆ ಉಚಿತವಾಗಿ ನೀಡುವ ಪಡಿತರ ಅಕ್ಕಿ ಕಾಳಸoತೆಯಲ್ಲಿ ಮಾರಾಟವಾಗುವುದಲ್ಲದೆ, ಹೊರ ರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಆಗುತ್ತಿರುವ ದೂರುಗಳು ಬಂದಿವೆ. ಇನ್ನು ಮೇಲೆ ಇಂತಹ ದೂರುಗಳು ಬರದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಇಂಥ ಹಗರಣಗಳ ಮತ್ತೆ ಕಂಡು ಬಂದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ನೇರವಾಗಿ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಕೆರೆ ತುಂಬುವ ಯೋಜನೆಯಡಿ ನಡೆದಿರುವ ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ಸಾಗಿದೆ. ಅಧಿಕಾರಿಗಳು ಅದನ್ನು ಬರುವ 15 ದಿನಗಳೊಳಗಾಗಿ ಪೂರ್ಣಗೊಳಿಸಿ ಬಾಡಗಿ ಮತ್ತು ಕೋಹಳ್ಳಿ ಕೆರೆಗಳಿಗೆ ಬೇಗ ನೀರು ತುಂಬಿಸುವ ಕಾರ್ಯ ಮಾಡಬೇಕು. ಈ ಕಾರ್ಯ ನಿಮ್ಮಿಂದ ಆಗದಿದ್ದರೆ ನೌಕರಿಗೆ ರಜೆ ಹಾಕಿ ಮನೆಗೆ ಹೋಗಿ, ನಾವು ಬೇರೆಯವರ ಕಡೆಯಿಂದ ಮಾಡಿಸಿಕೊಳ್ಳುತ್ತೇವೆ ಎಂದು ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಾಮಾಜಿಕ ಅರಣ್ಯ ಇಲಾಖೆಯಿಂದ ತಯಾರಿಸುವ ಸಸಿಗಳನ್ನು ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಮಾರಾಟ ಮಾಡಿರುವ ದೂರುಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಮಾಡಬಾರದು. ನಮ್ಮ ರಾಜ್ಯದ ರೈತರಿಗೆ ಮಾತ್ರ ಸಸಿಗಳನ್ನು ವಿತರಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಗ್ರೇಡ್ 2 ತಹಸೀಲ್ದಾರ ಆಶೋಕ ಗುಡಮೆ, ಡಿವೈಸ್ಪಿ ಪ್ರಶಾಂತ ಮುನ್ನೋಳಿ, ಎಸ್.ಐ. ಗಿರಮಲ್ಲಪ್ಪ ಉಪ್ಪಾರ, ಈರಣ್ಣ ವಾಲಿ, ಮಹಾದೇವ ಬಿರಾದರ, ಡಾ.ಬಸವಗೌಡ ಕಾಗೆ, ಪುನೀತ ಪಾಸೋಡಿ, ಅಶೋಕ ಗುಡಿಮನಿ, ಮಹಾತೇಶ ಬಂಡಗರ, ಪ್ರವೀಣ ಹುಣಶಕಟ್ಟಿ, ವೇಕಟೇಶ ಕುಲಕರ್ಣಿ, ಬಸವರಾಜ ಯಾದವಾಡ, ಸಿ.ಆರ್. ಗುರುಸ್ವಮಿ, ರೇಣುಕಾ ಹೊಸಮನಿ, ಎಂ.ಆರ್. ಕೋತವಾಲ, ಜಿ.ಎಂ. ಹಿರೇಮಠ, ಅಮೀತ ಡವಳೇಶ್ವರ, ಮಲಿಕಾರ್ಜುನ ನಾಮದಾರ, ರಾಘವ ನೂಲಿ, ಪ್ರಶಾಂತ ಗೌರಾಣಿ, ರಾಕೇಶ ಅರ್ಜುನವಾಡಿ, ಶ್ರಿರಂಗ ಜೂಶಿ, ಅಜೀತಕುಮಾರ ಚೌಗಲೆ, ಅಶೋಕ ಶಿರೂರಮ ಸಂತೋಷ ಹಳ್ಳೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಕನ್ನಡಪ್ರಭ ವರದಿ ಪ್ರಸ್ತಾಪಿಸಿದ ಶಾಸಕ ಸವದಿ:

ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿತರಿಸಬೇಕಾದ ಪುಸ್ತಕಗಳನ್ನ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿ ಅವ್ಯವಹಾರ ಎಸಗಿರುವ ಕುರಿತು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದೆ. ಅಕ್ರಮ ಮಾರಾಟದ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೋರಟಗಿ ಅವರನ್ನು ಶಾಸಕ ಲಕ್ಷ್ಮಣ ಸವದಿ ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುವಲ್ಲಿ ವಿಳಂಬವಾಗಿದ್ದು, ಹಂತ ಹಂತವಾಗಿ ಪುಸ್ತಕ ವಿತರಿಸಿದ್ದೇವೆ. ವಿತರಣೆಯಲ್ಲಿ ಸ್ವಲ್ಪ ತಾರತಮ್ಯ ಆಗಿದ್ದು ಸತ್ಯ. ಮುಂಬರುವ ದಿನಗಳಲ್ಲಿ ಹೀಗಾಗದಂತೆ ನಿಗಾ ವಹಿಸುತ್ತೇವೆ ಎಂದು ಹೇಳುವ ಮೂಲಕ ಜಾರಿಕೊಳ್ಳುವ ಪ್ರಯತ್ನಿಸಿದರು. ಆಗ ಶಾಸಕ ಸವದಿ ಅವರು, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಯ ಮಕ್ಕಳ ಪುಸ್ತಕ ವಿತರಣೆಯಲ್ಲಿ ತಾರತಮ್ಯ ಸಹಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಕಲಿಗೆಗೆ ತೊಂದರೆ ಆದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.