ಅತ್ಯಂತ ಜನಪ್ರಿಯವಾದ ಐಪಿಎಲ್ ಪಂದ್ಯಾವಳಿ ಬೆಂಗಳೂರಿನಲ್ಲಿಯೇ ನಡೆಯಬೇಕು. ಇದಕ್ಕೆ ಬೇಕಾದ ಮುಂಜಾಗ್ರತೆಯನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಅರುಣ್ ಆಗ್ರಹಿಸಿದರು.
ಶಿವಮೊಗ್ಗ: ಅತ್ಯಂತ ಜನಪ್ರಿಯವಾದ ಐಪಿಎಲ್ ಪಂದ್ಯಾವಳಿ ಬೆಂಗಳೂರಿನಲ್ಲಿಯೇ ನಡೆಯಬೇಕು. ಇದಕ್ಕೆ ಬೇಕಾದ ಮುಂಜಾಗ್ರತೆಯನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಅರುಣ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐಪಿಎಲ್ ಎಂಬುದು ಒಂದು ಜಗತ್‌ಪ್ರಸಿದ್ಧ ಕ್ರಿಕೆಟ್ ಆಟವಾಗಿದೆ. ಕಳೆದ 17 ವರ್ಷಗಳಿಂದ ಈ ಆಟ ಅತ್ಯಂತ ಜನಪ್ರಿಯವಾಗಿದ್ದು ಅದರಲ್ಲೂ ಆರ್‌ಸಿಬಿ ತಂಡ ಎಲ್ಲರ ಗಮನ ಸೆಳೆದಿದೆ. ಮೂರು ಬಾರಿ ಫೈನಲ್‌ಗೆ ಬಂದು ಕಳೆದ ಸಾಲಿನಲ್ಲಿ ಆರ್.ಸಿ.ಬಿ. ಗೆದ್ದಿತ್ತು. ಇದರ ವಿಜಯೋತ್ಸವ ಸಂಭ್ರಮಾಚರಣೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಾಗ ದುರಂತಕ್ಕೆ ಕಾರಣವಾಯಿತು. ಈ ದುರಂತಕ್ಕೆ ಕಾರಣವಾದದ್ದು ರಾಜ್ಯ ಸರ್ಕಾರವೇ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಸುಮಾರು 11 ಜನರು ಕಾಲ್ತುಳಿತದಿಂದ ಸಾವು ಕಂಡಿದ್ದು, ಇತಿಹಾಸ. ಅಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ನಡೆದಿಲ್ಲ. ಈಗ ಮತ್ತೆ ಐಪಿಎಲ್ ಆರಂಭವಾಗಿದ್ದು, ಸರ್ಕಾರ ಮುಂಜಾಗ್ರತೆ ಕೈಗೊಂಡರೆ ಇಲ್ಲಿಯೇ ಪಂದ್ಯಾವಳಿಯನ್ನು ನಡೆಸಲು ಸಾಧ್ಯ ಎಂದರು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ತನಿಖೆಗೆ ಆಗ್ರಹಿಸಿತ್ತು. ಇದಕ್ಕಾಗಿ ನಿವೃತ್ತ ನ್ಯಾಯಾಧೀಶರಾದ ಡಿಕುನ್ಹಾ ಅವರ ನೇತೃತ್ವದಲ್ಲಿ ಈಗಾಗಲೇ ತನಿಖೆ ಮುಗಿದಿದ್ದು, ಆದರೆ ಸರ್ಕಾರ ವರದಿಯನ್ನು ಬಹಿರಂಗಪಡಿಸಿಲ್ಲ. ಘಟನೆ ನಡೆದ ಏಳು ತಿಂಗಳಾದರೂ ಕುನ್ಹಾ ವರದಿಯನ್ನು ಬಹಿರಂಗಪಡಿಸದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ವರದಿಯಲ್ಲಿ ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ಲೋಪವೂ ಇರಬಹುದಾಗಿದೆ. ಆದ್ದರಿಂದಲೇ ಈ ವರದಿಯನ್ನು ಬಿಡುತ್ತಿಲ್ಲ ಎಂದು ಆರೋಪಿಸಿದರು.ಯಾವುದೇ ಮ್ಯಾಚ್ ನಡೆಯಲು ನಿಯಮಾವಳಿಗಳು ಇರುವುದು ಸಹಜ. ಸರ್ಕಾರ ಈ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಕ್ರೀಡಾಂಗಣದಲ್ಲಿ ಅಂದು ನಡೆದ ಘಟನೆಗೆ ಸರ್ಕಾರವೇ ಕಾರಣವಾಗಿತ್ತು. ವಿಜಯೋತ್ಸವ ಆಚರಣೆಯಲ್ಲಿ ಸರ್ಕಾರದ ಮಂತ್ರಿಗಳ ಕುಟುಂಬದವರೇ ಕಂಡು ಬಂದಿದ್ದರು. ಘಟನೆ ನಡೆದರೂ ಆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ತಮ್ಮ ಹೆಸರಿಗಾಗಿಯೇ ಈ ರೀತಿ ಸರ್ಕಾರದ ಮಂತ್ರಿಗಳು ಮಾಡಿದ್ದರು ದೂರಿದರು.ಈಗ ಮತ್ತೆ ಐಪಿಎಲ್ ಆರಂಭವಾಗಿದೆ ಇದು ಬಹಳ ಪ್ರಮುಖವಾದ ಕ್ರೀಡೆಯಾಗಿದ್ದು, ಕ್ರಿಕೆಟ್‌ನಲ್ಲಿ ನಮ್ಮ ಹೊಸ ಪ್ರತಿಭೆಗಳು ಹೊರಬರುಲು ಇಂತಹ ಐಪಿಎಲ್ ಮ್ಯಾಚ್‌ಗಳು ಕಾರಣವಾಗುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಐಪಿಎಲ್ ಮ್ಯಾಚ್ ಬೆಂಗಳೂರನ್ನು ಬಿಟ್ಟು ಹೊರಹೋಗಬಾರದು. ಒಂದು ಪಕ್ಷ ಹಾಗೇನಾದರೂ ಆದರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣವಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಲಯ ಸಂಚಾಲಕರಾದ ಡಿ.ಆರ್.ನಾಗರಾಜ್, ಸದಾನಂದ, ಪ್ರಮುಖರಾದ ಐಡಿಯಲ್ ಗೋಪಿ ಇದ್ದರು.