ಸಾರಾಂಶ
ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳು ಸುದೀರ್ಘವಾಗಿ ಸೇವೆ ಸಲ್ಲಿಸಿ ಶನಿವಾರ ನಿವೃತ್ತರಾದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಅವರಿಗೆ ಇಲಾಖೆ ಹೃದಯ ಸ್ಪರ್ಶಿಯಾಗಿ ಬೀಳ್ಕೊಡುಗೆ ನೀಡಿತು.
ಡಿಜಿಪಿ ಕಮಲ್ ಪಂತ್ ಅವರ ನಿವೃತ್ತಿ ನಿಮಿತ್ತ ಗೌರವಾರ್ಥವಾಗಿ ನಗರದ ಕೋರಮಂಗಲ ರಾಜ್ಯ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಬೆಳಗ್ಗೆ ರಾಜ್ಯ ಪೊಲೀಸ್ ಇಲಾಖೆ ವಿಶೇಷ ಕವಾಯತ್ ನಡೆಸಿದರೆ, ಅಂತಿಮ ದಿನ ಕಚೇರಿ ಕೆಲಸ ಮುಗಿಸಿ ಹೊರಟ ಅವರಿಗೆ ಇಳಿ ಸಂಜೆ ರಾಜ್ಯ ಅಗ್ನಿಶಾಮಕ ದಳ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಹೂ ಮಳೆ ಸುರಿಸಿ ಬೀಳ್ಕೊಟ್ಟರು. ಇದೇ ವೇಳೆ ಕಮಲ್ ಅವರ ತಾಯಿ ತಾರಾ ಪಂತ್ ಹಾಗೂ ಪತ್ನಿ ಡಾ.ಭಾವನಾ ಪಂತ್ ಇದ್ದರು.
ಕೋರಮಂಗಲದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಕಮಲ್ ಪಂತ್ ಅವರು, ‘ನ್ಯಾಯವನ್ನು ಕೊಂದರೆ ಅದು ನಿಮ್ಮನ್ನು ಕೊಲ್ಲುತ್ತದೆ. ನ್ಯಾಯಯುತವಾಗಿ ಸೇವೆ ಸಲ್ಲಿಸಬೇಕು’ ಎಂದು ಕಿವಿಮಾತು ಹೇಳಿದರು.
‘ದೇಶದಲ್ಲೇ ಕರ್ನಾಟಕ ಪೊಲೀಸರಿಗೆ ಅತ್ಯುತ್ತಮ ಹೆಸರಿದೆ. ಇಲಾಖೆಯ ಗೌರವ ಮತ್ತು ಘನತೆಯನ್ನು ಹೆಚ್ಚಿಸುವಂತೆ ಅಧಿಕಾರಿಗಳ ಕಾರ್ಯನಿರ್ವಹಿಸಬೇಕು. ಈಗ ಇಲಾಖೆಗೆ ಸೇರ್ಪಡೆಯಾಗುತ್ತಿರುವ ತರುಣ ಅಧಿಕಾರಿಗಳು ಇಲಾಖೆಯ ಗೌರವವನ್ನು ಶಿಖರಕ್ಕೇರಿಸುವ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರಿಂದ ಕನ್ನಡ ಕಲಿತೆ-ಪಂತ್ ಸ್ಮರಣೆ
‘1990ರಲ್ಲಿ ಕರ್ನಾಟಕ ಐಪಿಎಸ್ ಕೇಡರ್ ಅಧಿಕಾರಿಯಾಗಿ ಆಯ್ಕೆಯಾಗಿ ಪೊಲೀಸ್ ಸೇವೆಗೆ ಬಂದಾಗ ಪರಿಸ್ಥಿತಿ ಆಶಾದಾಯಕವಾಗಿರಲಿಲ್ಲ. ಉತ್ತರ ಭಾರತದಲ್ಲಿ ಪೊಲೀಸ್ ಸೇವೆ ಎಂದರೆ ಜನರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಹೀಗಾಗಿ ನಾನು ಐಪಿಎಸ್ ಅಧಿಕಾರಿ ಆಗಿದ್ದು ನನ್ನ ತಾಯಿಗೆ ಇಷ್ಟವಿರಲಿಲ್ಲ’ ಎಂದು ಕಮಲ್ ಪಂತ್ ಹೇಳಿದರು.
‘ರಾಜ್ಯದ ಸೇವೆ ಆರಂಭಿಸಿದಾಗ ಭಾಷೆ ಸಮಸ್ಯೆ ಎದುರಾಯಿತು. ಆದರೆ ಕಾಲ ಕಳೆದಂತೆ ಜನರ ಒಡನಾಟ ಹೆಚ್ಚಾದ ಬಳಿಕ ಭಾಷೆ ತೊಡಕು ನಿವಾರಣೆಯಾಯಿತು. ಜನರಿಂದಲೇ ನಾನು ಕನ್ನಡ ಬರೆಯೋದು ಮಾತನಾಡೋದು ಕಲಿತೆ. ಅಲ್ಲದೆ ಭಾಷೆ ಕಲಿಕೆಗೆ ಅಧಿಕಾರಿ ಮತ್ತು ಸಿಬ್ಬಂದಿ ಕೂಡ ನೆರವಾದರು’ ಎಂದು ಪಂತ್ ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ, ಕಾರಾಗೃಹ ಇಲಾಖೆಯ ಮುಖ್ಯಸ್ಥೆ ಮಾಲಿನಿ ಕೃಷ್ಣಮೂರ್ತಿ, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಎಡಿಜಿಪಿ ಉಮೇಶ್ ಕುಮಾರ್ ಹಾಗೂ ಐಜಿಪಿ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೀಳ್ಕೊಡುಗೆ ದಿನ ಸುಳ್ಳೇ ಹೇಳೋದು: ಪಂತ್ ಹಾಸ್ಯ
ನಾನು ಬೀಳ್ಕೊಡುಗೆ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಹೋಗೋದಿಲ್ಲ. ಏಕೆಂದರೆ ಆ ದಿನ ಹೆಚ್ಚಾಗಿ ಸುಳ್ಳೇ ಹೇಳುತ್ತಾರೆ. ನಮ್ಮನ್ನು ಸುಖಾಸುಮ್ಮನೆ ಹೊಗಳುತ್ತಾರೆ ಎಂದು ಕಮಲ್ ಪಂತ್ ತಮಾಷೆ ಮಾಡಿದರು.
ನನ್ನ ಅವಧಿಯಲ್ಲಿ ಒಳ್ಳೆಯ ಕೆಲಸಗಳಾಗಿದ್ದರೆ ನನ್ನೊಬ್ಬನಿಂದ ಆಗಿರುವುದಿಲ್ಲ. ಅಗ್ನಿಶಾಮಕ ದಳದ ನೇಮಕಾತಿ- ಗಣಕೀಕರಣ ವ್ಯವಸ್ಥೆ ಜಾರಿಯಲ್ಲಿ ಡಿಐಜಿ ರವಿ ಚನ್ನಣ್ಣವರ್, ಮುಂಬಡ್ತಿಯಲ್ಲಿ ಎಡಿಜಿಪಿ ನಂಜುಂಡಸ್ವಾಮಿ, ಇಲಾಖೆಯ ಸುಧಾರಣೆಯಲ್ಲಿ ನಿರ್ದೇಶಕ ಶಿವಶಂಕರ್ ಹೀಗೆ ಪ್ರತಿಯೊಬ್ಬರು ಸಮರ್ಥವಾಗಿ ಕೆಲಸ ಮಾಡಿದ್ದರಿಂದ ಇಲಾಖೆಗೆ ಒಳ್ಳೆಯದಾಗಿದೆ ಎಂದು ಕಮಲ್ ಪಂತ್ ಶ್ಲಾಘಿಸಿದರು.