ಸಾರಾಂಶ
ಬೆಂಗಳೂರು; ಕೇಂದ್ರ ಸರ್ಕಾರವು ಇಡಿ, ಸಿಬಿಐ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಮಾತನಾಡಿ, ಕೇಂದ್ರ ಸರ್ಕಾರ ಆಮ್ ಆದ್ಮಿ ಪಾರ್ಟಿಯ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ಕಳುಹಿಸಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಎದುರಾಳಿಗಳನ್ನು ಮುಗಿಸಲು ಸಂಚು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ನಾಯಕರನ್ನು ಜೈಲಿನಲ್ಲಿಡಲು ಇಡಿ ಮತ್ತು ಸಿಬಿಐ ಕೆಲಸ ಮಾಡುತ್ತಿದೆ ಎಂದು ಕೋರ್ಟ್ ಜಡ್ಜ್ ಕೂಡ ಹೇಳಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಕಿಡಿಕಾರಿದರು.
ಅರವಿಂದ್ ಕೇಜ್ರಿವಾಲ್ ತನಿಖೆಗೆ ಎಲ್ಲಾ ಸಹಕಾರ ಕೊಟ್ಟಿದ್ದರೂ ಎರಡು ವರ್ಷದ ಬಳಿಕ ಅವರನ್ನು ಏಕಾಏಕಿ ಬಂಧಿಸಲಾಗಿದೆ. ತನಿಖಾ ಸಂಸ್ಥೆಗಳು ಈ ರೀತಿ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡಿದರೆ, ನೀಟ್ ರೀತಿಯ ಹಗರಣಗಳಿಗೆ ನ್ಯಾಯ ಸಿಗುತ್ತದೆಯೇ ಎಂದು ಪ್ರಶ್ನಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಸಾಮಾಜಿಕ ಮಾಧ್ಯಮ ಉಸ್ತುವಾರಿ ದರ್ಶನ್ ಜೈನ್, ಉಪಾಧ್ಯಕ್ಷ ಸುರೇಶ್ ರಾಥೋಡ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್, ಮುಖಂಡರಾದ ಉಷಾ ಮೋಹನ್, ಅಶೋಕ್ ಮೃತ್ಯುಂಜಯ, ಜಗದೀಶ್ ಬಾಬು, ಶಾಷಾ ವಲಿ, ಅಂಜನಾ ಗೌಡ, ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))