ಸಾರಾಂಶ
ಬೆಂಗಳೂರು : ದೇಶದ ಜನರಲ್ಲಿ ಶೇ.100 ಸಾಕ್ಷರತೆ, ಎಲ್ಲಾ ರಂಗಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ನಾಗರಿಕರ ಸಂಘಟಿತ ಕಠಿಣ ಪರಿಶ್ರಮದಿಂದ ಭಾರತ ‘ವಿಶ್ವಗುರು’ವಿನ ಸ್ಥಾನ ಅಲಂಕರಿಸಬಲ್ಲದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಹೇಳಿದರು.
ಶನಿವಾರ ನಗರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದಲ್ಲಿ ಟಾಪರ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಇಲ್ಲಿ ಪದಕ ಪಡೆದವರಲ್ಲಿ ಶೇ.90ರಷ್ಟು ಹೆಣ್ಣು ಮಕ್ಕಳೇ ಇರುವುದು ನೋಡಿ ಸಂತೋಷವಾಯಿತು. ಪ್ರಗತಿಶೀಲ ಭಾರತದ ಪರಿಚಯವಾಗುತ್ತಿದೆ. ಮಹಿಳೆಯರ ಸಬಲೀಕರಣ ಆಗುತ್ತಿದೆ. ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.
ನಾವು ಶಿಕ್ಷಿತರಾಗುವ ಜೊತೆಗೆ ಬೇರೆಯವರಿಗೆ ಜ್ಞಾನ ಹಂಚಬೇಕು. ಸಮಾಜ, ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು. ನಮ್ಮನ್ನು ಜನ ಗುರುತಿಸಬೇಕು ಎಂದರೆ ನಾವು ಬೇರೆಯವರಿಗೆ ಸಹಾಯ ಮಾಡಬೇಕು. ಎಲ್ಲರೂ ಅಭಿವೃದ್ಧಿ ಆಗಬೇಕು. ನಮ್ಮ ದೇಶಕ್ಕೆ ಕೌಶಲ್ಯಾಧಾರಿತ ಗುಣಮಟ್ಟದ ಶಿಕ್ಷಣ ಬೇಕಿದೆ. ಅತ್ಯುತ್ತಮ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು ವಿದ್ವಾಂಸರು ಎನಿಸಿಕೊಳ್ಳುತ್ತಾರೆ. ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವ ಸಂಶೋಧನೆ ಮಾಡಬೇಕು ಎಂದು ರಾಜ್ಯಪಾಲರು ಕಿವಿ ಮಾತು ಹೇಳಿದರು.
ಸಚಿವ ಡಾ। ಎಂ.ಸಿ.ಸುಧಾಕರ್ ಮಾತನಾಡಿ, ಬೆಂಗಳೂರು ವಿವಿ ಕಳೆದ 6 ವರ್ಷಗಳಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಮುಂಬರುವ ವರ್ಷಗಳಲ್ಲಿ ಹೈ ರ್‍ಯಾಂಕಿಂಗ್ ವಿವಿ ಆಗುವ ಎಲ್ಲಾ ಲಕ್ಷಣಗಳಿವೆ. ಹೊಸ ವಿವಿ ಆಗಿದ್ದರೂ ಅನೇಕ ವಿದೇಶಿ ವಿವಿಗಳ ಜೊತೆ ಸಂಶೋಧನಾ ಸಹಯೋಗ ಮಾಡಿಕೊಂಡಿದೆ. ಇದರಿಂದ ಗುಣಮಟ್ಟ ಸುಧಾರಣೆಗೆ ನೆರವಾಗಿದೆ ಎಂದು ಹೇಳಿದರು.
ಈ ವರ್ಷ ನಮ್ಮ ವಿಶ್ವವಿದ್ಯಾಲಯದಿಂದ ಅಪ್ರೆಂಟಿಸ್ ಸಹಿತ ಪದವಿ ಕೋರ್ಸ್ ಆರಂಭಿಸಲಾಗುತ್ತಿದೆ. ಈ ವರ್ಷ 1,400 ಪದವಿ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತದೆ. ವಿವಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಕಡಿಮೆ ಸಿಬ್ಬಂದಿಯಿಂದಲೇ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ತಮ ಆಡಳಿತ ನಡೆಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‌ನ(ಎಐಸಿಟಿಇ) ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಮಾತನಾಡಿ, ಇಂಗ್ಲೀಷ್‌ನಲ್ಲಿ ಪ್ರಾವೀಣ್ಯತೆಯನ್ನು ಹೊಂದಿರದ ಯುವ ಪದವೀಧರರು ಮಾತೃ ಭಾಷೆಗಳಲ್ಲಿ ಶೈಕ್ಷಣಿಕ ಮಾಹಿತಿ ಪಡೆಯಲು ನೆರವಾಗುವಂತೆ ನಮ್ಮ ಸಂಸ್ಥೆ ‘ಎಐಸಿಟಿಇ ಅನುವಾದಿನಿ’ ಎಂಬ ತಂತ್ರಾಂಶ ರೂಪಿಸಿದೆ. ಇದು ಕಲಿಕೆಯನ್ನು ಸುಲಭವಾಗಿಸಿ, ಅಂತರ್ಗತ ಶಿಕ್ಷಣವನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.68 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. 35,912 ವಿದ್ಯಾರ್ಥಿಗಳು ಪದವಿ ಪಡೆದರು.
ಜಯರಾಂ, ವಿಶ್ವನಾಥ್‌ಗೆ ಗೌರವ ಡಾಕ್ಟರೆಟ್
ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಎಂ.ಎಸ್.ರಾಮಯ್ಯ ಸಂಸ್ಥೆಯ ಡಾ। ಎಂ.ಆರ್.ಜಯರಾಂ ಮತ್ತು ಹಿರಿಯ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಅವರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಯಿತು. ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಲಿಂಗರಾಜು ಗಾಂಧಿ ಉಪಸ್ಥಿತರಿದ್ದರು.