ಮಹಿಳಾ ಡೇರಿಯಲ್ಲಿ ಕಾರ್ಯದರ್ಶಿ ಪ್ರಭಾವಿಗಳ ಜೊತೆ ಸೇರಿ ಹಲವು ಹಣದುರುಪಯೋಗ ಪಡಿಸಿಕೊಂಡಿದ್ದಾರೆ. ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ತಾನು ಕಷ್ಟಪಟ್ಟು ಡೇರಿಗೆ ಹಾಲು ಹಾಕುತ್ತಿದ್ದೇನೆ. ತನ್ನ ಖಾತೆಯ ಹಣದಲ್ಲಿ ಸಾಕಷ್ಟು ಲೋಪವಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ರೈತರ ಕಲ್ಯಾಣಕ್ಕಾಗಿ ಇರುವ ಹಾಲಿನ ಡೇರಿಯಲ್ಲಿ ಸಂಘದ ಕಾರ್ಯದರ್ಶಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಹಾಲು ವಿತರಕಿ ಗೀತಾ ಆರೋಪಿಸಿದರು.ಐಕನಹಳ್ಳಿಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಾಲು ವಿತರಕರು, ಷೇರುದಾರರು ಹಮ್ಮಿಕೊಂಡಿದ್ದ ಸಭೆಯಲ್ಲಿ ಹಣ ದುರುಪಯೋಗದ ಬಗ್ಗೆ ಹಲವು ದಾಖಲೆ ಬಿಡುಗಡೆ ಮಾಡಿ ಮಾತನಾಡಿದರು.

ಮಹಿಳಾ ಡೇರಿಯಲ್ಲಿ ಕಾರ್ಯದರ್ಶಿ ಪ್ರಭಾವಿಗಳ ಜೊತೆ ಸೇರಿ ಹಲವು ಹಣದುರುಪಯೋಗ ಪಡಿಸಿಕೊಂಡಿದ್ದಾರೆ. ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ತಾನು ಕಷ್ಟಪಟ್ಟು ಡೇರಿಗೆ ಹಾಲು ಹಾಕುತ್ತಿದ್ದೇನೆ. ತನ್ನ ಖಾತೆಯ ಹಣದಲ್ಲಿ ಸಾಕಷ್ಟು ಲೋಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಪ್ರಶ್ನಿಸಿದರೆ ಗಲಾಟೆ ಮಾಡಲಾಗುತ್ತಿದೆ. ಸುಮಾರು 50 ಲಕ್ಷ ರು.ಗಳಿಗೂ ಹೆಚ್ಚು ಅವ್ಯವಹಾರ ನಡೆದಿದೆ. ತಮ್ಮ ಕುಟುಂಬದವರ ಹೆಸರಿನಲ್ಲಿ ಡೇರಿ ಹಣ ಜಮೆ ಮಾಡಿಕೊಳ್ಳಲಾಗಿದೆ. ರೈತ ಮಹಿಳೆಯರು ಕಷ್ಟಪಟ್ಟು ಪ್ರತಿನಿತ್ಯ ಹಾಲು ಹಾಕಿ ಸಂಪಾದಿಸಿದ ಹಣವೆಲ್ಲ ದುರ್ಬಳಕೆಯಾಗಿದೆ ಎಂದು ಕಿಡಿಕಾರಿದರು.

ಹಾಲಿನ ಬಿಲ್ ಹಣ, ಸಂಘದ ಉಳಿತಾಯ ಖಾತೆಯಲ್ಲಿದ್ದ ಹಣ, ಸರ್ಕಾರದ ಸಹಾಯಧನದಲ್ಲಿ ಲೋಪವಾಗಿದೆ. ನಕಲಿ ಬಿಲ್ ಬಳಸಿ ಸ್ವಂತಕ್ಕೆ ಬಳಸಿಕೊಳ್ಳಲಾಗಿದೆ. ಈ ಎಲ್ಲವುಗಳ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಷೇರುದಾರ ನಾಗರಾಜು ಮಾತನಾಡಿ, ಡೇರಿ ವಹಿವಾಟು ವ್ಯವಹಾರ ಕೇಳಿದರೆ ಗಲಾಟೆ, ಬೆದರಿಕೆ ಹಾಕಲಾಗುತ್ತಿದೆ. ಮನ್ಮುಲ್ ಅಧಿಕಾರಿಗಳು, ಸಹಕಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಆಗಿರುವ ಲೋಪ, ಲೆಕ್ಕಪತ್ರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು.

ಹಾಲು ವಿತರಕರಿಗೆ ಆಗಿರುವ ಅನ್ಯಾಯ ಸರಿಪಡಿಸಿ ಡೇರಿ ಕಾರ್ಯದರ್ಶಿಯಿಂದ ದುರುಪಯೋಗವಾದ ಹಣ ವಾಪಸ್ಸು ನೀಡಬೇಕು. ಸೂಕ್ತ ತನಿಖೆ ನಡೆಸಲು ವಿಳಂಭವಾದರೆ ಜಿಲ್ಲಾ ಹಾಲು ಒಕ್ಕೂಟದ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಮುಖಂಡರಾದ ರವಿ, ಕೃಷ್ಣೇಗೌಡ, ನಾಗೇಶ್, ಮಂಜೇಗೌಡ, ನಾಗರಾಜು, ನಾಗೇಶ್, ಶಿವಮೂರ್ತಿ, ಆನಂದ್, ಎಲೆಕೆರೆ ರವಿ, ದಿವಾಕರ, ಚಿಕ್ಕೇಗೌಡ, ಕಾಯಿ ರವಿ, ಕಾಂತ, ಬೀರನಹಳ್ಳಿ ಮಂಜೇಗೌಡ, ಶಂಕರ, ರತ್ನಮ್ಮ, ಸರೋಜಮ್ಮ, ನೇತ್ರಮ್ಮ, ಪ್ರೇಮ, ಮಂಜಮ್ಮ, ಭಾರತಿ ಮತ್ತಿತರರು ಭಾಗವಹಿಸಿದ್ದರು.