ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ವ್ಯಾಪಕ ಅಕ್ರಮ, ದುರುಪಯೋಗ ಹಾಗೂ ಆಡಳಿತಾತ್ಮಕ ವೈಫಲ್ಯ ನಡೆದಿದೆ. ಇದರ ಜತೆಗೆ ಅವುಗಳು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದು, ಅವುಗಳನ್ನು ರದ್ದುಗೊಳಿಸಬೇಕು ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗಾಗಿ ರಚಿಸಿರುವ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳು ತಮ್ಮ ಉದ್ದೇಶವನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅವುಗಳನ್ನು ಕೂಡಲೇ ರದ್ದುಪಡಿಸಿ ಯೋಜನೆಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಗೃಹಲಕ್ಷ್ಮೀ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳಲ್ಲಿ ಎಷ್ಟರ ಮಟ್ಟಿಗೆ ಅಕ್ರಮ ಮತ್ತು ದುರುಪಯೋಗ ನಡೆದಿದೆ ಎಂಬುದನ್ನು ತಾವು ಅಂಕಿ-ಅಂಶಗಳ ಮೂಲಕ ಹೇಳಬೇಕಾದ ಅಗತ್ಯವಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಪ್ರಕಟವಾಗಿವೆ. ಅಲ್ಲದೆ, ಸ್ವಾಯತ್ತ ಸಂಸ್ಥೆಯಾದ ಸಿಎಜಿ ವರದಿಯಲ್ಲಿಯೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬಂದಿರುವ ಲೋಪಗಳು, ದುರುಪಯೋಗ ಹಾಗೂ ಆಡಳಿತದ ವೈಫಲ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಹೇಳಿದರು.ತೆರಿಗೆ ಹಣದ ದುರುಪಯೋಗ:

ಮೂರು ವರ್ಷಗಳಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿಗಳನ್ನು ರಚಿಸಿ ಅವುಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳನ್ನು ನೇಮಕ ಮಾಡಿ ಕೋಟ್ಯಂತರ ರುಪಾಯಿ ವೆಚ್ಚ ಮಾಡಲಾಗಿದೆ. ಆದರೆ ಈ ಸಮಿತಿಗಳು ನೈಜ ಫಲಾನುಭವಿಗಳ ಗುರುತಿಸುವಿಕೆ, ಯೋಜನೆಗಳ ಮೇಲ್ವಿಚಾರಣೆ ಹಾಗೂ ಅಕ್ರಮಗಳನ್ನು ತಡೆಯುವಲ್ಲಿ ಯಾವುದೇ ಪರಿಣಾಮಕಾರಿ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು. ಫಲಾನುಭವಿಗಳ ಪಟ್ಟಿಯಲ್ಲಿ ಮೃತಪಟ್ಟವರ ಹೆಸರಿನಲ್ಲಿಯೂ ಹಣ ಬಿಡುಗಡೆಯಾಗಿರುವ ಕುರಿತು ವರದಿಗಳು ಬಂದಿವೆ. ಇಂತಹ ಪ್ರಕರಣಗಳನ್ನು ಸಂಬಂಧಪಟ್ಟ ಇಲಾಖೆ ಹಾಗೂ ಗ್ಯಾರಂಟಿ ಸಮಿತಿಗಳು ಏಕೆ ಗಮನಿಸಲಿಲ್ಲ? ಪ್ರತಿ ತಿಂಗಳು ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸುವ ಕೆಲಸ ಏಕೆ ನಡೆಯಲಿಲ್ಲ? ಎಂದು ಪ್ರಶ್ನಿಸಿದ ಅವರು, ಸಮಿತಿಗಳು ಜನಸೇವೆಗೆ ಬದಲಾಗಿ ರಾಜಕೀಯ ಉದ್ದೇಶಗಳಿಗೆ ಬಳಸಲ್ಪಡುತ್ತಿವೆ ಎಂದು ಟೀಕಿಸಿದರು. ಸರ್ಕಾರ ಈಗ ಮತ್ತೆ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಹೊಸ ಸಮಿತಿಗಳನ್ನು ರಚಿಸುವುದಾಗಿ ಹೇಳುತ್ತಿರುವುದು ಅಚ್ಚರಿಯ ಸಂಗತಿ. ಈಗಾಗಲೇ ಅಸ್ತಿತ್ವದಲ್ಲಿರುವ ಸಮಿತಿಗಳ ಕಾರ್ಯಕ್ಷಮತೆಯ ಬಗ್ಗೆ ಪರಿಶೀಲನೆ ನಡೆಸದೆ ಹೊಸ ಸಮಿತಿಗಳನ್ನು ರಚಿಸುವ ಅಗತ್ಯವೇನು ಎಂದು ಪ್ರಶ್ನಿಸಿದ ಅವರು, ಇದು ಜನರ ತೆರಿಗೆ ಹಣದ ದುರುಪಯೋಗ ಎಂದು ಆರೋಪಿಸಿದರು.

ಲಿಂಗೇಶ್‌ ಬಂಧನ: ರಾಜಕೀಯ ಪ್ರೇರಿತ ಎನ್ನುವ ಶಂಕೆ


ಮಾಜಿ ಶಾಸಕ ಲಿಂಗೇಶ್ ಬಂಧನ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕರಣ ಕಾನೂನು ವ್ಯಾಪ್ತಿಯಲ್ಲಿದ್ದು ತನಿಖೆ ನಡೆಯಲಿ ಎಂಬುದು ತಮ್ಮ ಅಭಿಪ್ರಾಯ. ಆದರೆ ಹಲವು ವರ್ಷಗಳ ಹಿಂದಿನ ಪ್ರಕರಣದಲ್ಲಿ ಈಗ ಬಂಧನವಾಗಿರುವುದು ರಾಜಕೀಯ ಪ್ರೇರಿತ ಕ್ರಮವೇ ಎಂಬ ಅನುಮಾನ ಮೂಡಿಸಿದೆ. ತನಿಖೆ ಶೀಘ್ರ ಪೂರ್ಣಗೊಂಡು ಸತ್ಯಾಂಶ ಹೊರಬರಬೇಕು. ನಿರಪರಾಧಿಗಳಿಗೆ ನ್ಯಾಯ ದೊರಕಬೇಕು ಎಂದು ಹೇಳಿದರು. ರಾಜಕಾರಣದಲ್ಲಿ ವಿಶ್ವನಾಥ್ ಅವರು ರೈತ ಸಂಘದಿಂದ ಬಂದವರು. ಅವರು ಮಾತನಾಡುವ ರೀತಿ ನೋಡಿದರೇ ಇವರು ಕೂಡ ೧೫ ವರ್ಷಗಳ ಕಾಲ ಲೂಟಿ ಮಾಡಿಕೊಂಡು ಹೊಗಿದ್ದಾರೆ. ೧೫ ವರ್ಷದಿಂದ ಏಕೆ ನನ್ನ ಮೇಲೆ ದೂರು ಮಾಡಲಿಲ್ಲ. ಜೊತೆಯಲ್ಲೆ ಇದ್ದೇವು! ಒಟ್ಟೊಟ್ಟಿಗೆ ಇದ್ದೇವು. ನನ್ನ ವಿರುದ್ಧ ಅವರೆ ಆಗಲಿ, ಯಾರೇ ಆಗಲಿ ಒಂದೇ ಒಂದು ಕಂಪ್ಲೆಂಟ್ ಮಾಡಲಿಲ್ಲ. ನಾನು ಕೂಡ ಯಾವ ಅಕ್ರಮ ಮಾಡಿಲ್ಲ ಎಂದರು. ಮೊನ್ನೆ ದೂರು ನೀಡಿದವರು ಲೋಕೇಶ್ ಬಿಜೆಪಿ ಲೀಡರ್‌. ಆತ ಹೇಳಿರುವ ದೂರು ಸಾಂಕೇತಿಕ ದೂರು. ಅದನ್ನ ಶಾಸಕ ಸಿಮೆಂಟ್ ಮಂಜು ಅವರು ತಿಳಿಸಬೇಕು. ಯಾರು ದೂರು ಕೊಟ್ಟಿದ್ದಾರೆ? ಏನಕ್ಕೆ ಕೊಟ್ಟಿದ್ದಾರೆ? ಏನಿದೆ ಎಂಬುದನ್ನು ಅವರು ಹೇಳಬೇಕು ಎಂದು ಆಗ್ರಹಿಸಿದರು. ರಾಜ್ಯದ ಹಲವೆಡೆ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಕೊರತೆ ಸೇರಿದಂತೆ ಜನಜೀವನಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ತಲೆದೋರಿವೆ. ಸರ್ಕಾರ ಈ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಪ್ರವಾಸ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಖಂಡಿಸಿದ ಅವರು, ಯಾರಿಗಾದರೂ ದಾಖಲೆಗಳಿದ್ದರೆ ಕಾನೂನು ಪ್ರಕಾರ ತನಿಖೆ ನಡೆಸಲಿ. ಸರ್ಕಾರವೇ ತನಿಖೆ ನಡೆಸಿ ಸತ್ಯಾಂಶ ಹೊರತರಲಿ ಎಂದು ಸವಾಲು ಹಾಕಿದರು.ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾ ವಕ್ತಾರ ರಘು ಹೊಂಗೆರೆ, ವಕೀಲ ಶೇಷಾದ್ರಿ, ಸಮೀರ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

------

ಬಾಕ್ಸ್::: ಗ್ಯಾರಂಟಿ ಸಮಿತಿಗಳು ರಾಜಕೀಯ ಸಮಿತಿಗಳಾಗಿ ಮಾರ್ಪಟ್ಟಿವೆ

ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ಸರ್ಕಾರ ಪ್ರತಿತಿಂಗಳು ನೂರಾರು ಕೋಟಿ ರುಪಾಯಿ ಜಾಹೀರಾತುಗಳಿಗೆ ವೆಚ್ಚ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ಸುಮಾರು ೫೨ ಸಾವಿರ ಕೋಟಿ ವೆಚ್ಚವಾಗುತ್ತಿದೆ. ಗ್ಯಾರಂಟಿ ಸಮಿತಿಗಳು ರಾಜಕೀಯ ಸಮಿತಿಗಳಾಗಿ ಮಾರ್ಪಟ್ಟಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಹುದ್ದೆ ನೀಡುವ ಉದ್ದೇಶದಿಂದಲೇ ಇವುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಹೀಗಾಗಿ ಇಂತಹ ಸಮಿತಿಗಳನ್ನು ಮುಂದುವರಿಸುವ ಬದಲು ಅವುಗಳನ್ನು ರದ್ದುಪಡಿಸಿ, ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.