ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಜಿಲ್ಲೆಯ ಪ್ರವಾಸದಲ್ಲಿರುವ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹುಬ್ಬಳ್ಳಿಯ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ವೀಕ್ಷಿಸಿದರು.ಗುರುವಾರ ಬೆಳಗ್ಗೆ ನಗರದ ಚಿಟಗುಪ್ಪಿ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸುವುದರ ಜತೆಗೆ ವೈದ್ಯ ಹಾಗೂ ರೋಗಿಗಳ ಕುಂದುಕೊರತೆ ಆಲಿಸಿದರು.ಬಳಿಕ ಲ್ಯಾಮಿಂಗ್ಟನ್ ಶಾಲೆ ಭೇಟಿ ನೀಡಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾದ ಸ್ಮಾರ್ಟ್ ಕ್ಲಾಸ್ ರೂಮ್‌ಗಳ ಪರಿಶೀಲಿಸಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾದ ಸ್ಮಾರ್ಟ್‌ಸಿಟಿ ಯೋಜನೆಯಡಿ ದೇಶ ಹಲವು ನಗರಗಳಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿದ್ದು, ಇಷ್ಟು ದಿನವಾದರೂ ಒಂದು ಪೂರ್ಣಗೊಂಡಿಲ್ಲ. ಇನ್ನೂ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಕೋಟ್ಯಂತರ ಖರ್ಚು ಮಾಡಲಾಗಿದ್ದು, ಕಾಮಗಾರಿ ಗುಣಮಟ್ಟ ನೋಡಿದರೆ ಅಷ್ಟು ಹಣ ಖರ್ಚಾಗಿದೆಯೋ ಇಲ್ಲವೋ ಎಂಬುವುದು ಅನುಮಾನ ಮೂಡುತ್ತಿದೆ ಎಂದರು.ಲ್ಯಾಮಿಂಗ್ಟನ್ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗಳಿಗೆ ₹3 ಕೋಟಿ ವೆಚ್ಚವಾಗಿದೆ ಎಂದು ಹೇಳುತ್ತಿದ್ದಾರೆ.ಆದರೆ ಅಷ್ಟು ವೆಚ್ಚದ ಉಪಕರಣ ಶಾಲೆಯಲ್ಲಿ ಕಾಣಲಿಲ್ಲ.ಇನ್ನೂ ಗ್ರೀನ್ ಕಾರಿಡಾರ್ ಮೂಲ ಉದ್ದೇಶ ನಾಲಾದಿಂದ ಹರಿಯುತ್ತಿರುವ ನೀರು ಬದಲಿಸುವುದಾಗಿದೆ. ಆದರೆ ಅಂತಹ ಕಾಮಗಾರಿ ಯಾವುದು ಆದಂತೆ ಕಾಣುತ್ತಿಲ್ಲ. ನಗರದ ಯಾವುದೇ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಸಂಪೂರ್ಣ ಹಾಳಾಗಿವೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿಗೆ ಹಾಗೂ ಪ್ಲೈಓವರ್‌ಗೆ ಇಷ್ಟು ಹಣ ಖರ್ಚು ಮಾಡಿದ್ದರೆ ನಗರಕ್ಕೆ ಯಾಕೆ ಇಂತಹ ಪರಿಸ್ಥಿತಿ ಬರುತ್ತಿತ್ತು.ಇದೆಲ್ಲವನ್ನೂ ನೋಡಿದರೆ ಇಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವಾಡುತ್ತಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಆದೇಶಿಸಬೇಕು. ಅಷ್ಟೇ ಅಲ್ಲದೇ ಕಾಮಗಾರಿಗಳ ನಡೆದಿರುವ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.ನ್ಯಾಯಾಲಯ ಆದೇಶಿಸಿದರೂ ವಾರ್ಡ್ ಸಮಿತಿ ರಚಿಸಲು ಹು-ಧಾ ಮಹಾನಗರ ಪಾಲಿಕೆ ಮುಂದಾಗುತ್ತಿಲ್ಲ.ಇಲ್ಲಿಯ ಜನಪ್ರತಿನಿಧಿಗಳು, ಶಾಸಕರು ಆಸಕ್ತಿ ವಹಿಸುತ್ತಿಲ್ಲ.ವಿಧಾನ ಪರಿಷತ್ ಸಭಾಪತಿ ಸಹ ಇಲ್ಲಿಯವರಾಗಿದ್ದು, ಸುಮ್ಮನಿರುವುದು ದುರಾದೃಷ್ಟ ಸಂಗತಿ.ಇನ್ನೂ 15-20 ದಿನಗಳಲ್ಲಿ ವಾರ್ಡ್ ಸಮಿತಿ ರಚಿಸದಿದ್ದರೆ ಆಮ್ ಆದ್ಮಿ ಪಕ್ಷದಿಂದ ಜನ ಜಾಗೃತಿ ಅಭಿಯಾನ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆಪ್ ಜಿಲ್ಲಾಧ್ಯಕ್ಷ ಪ್ರವೀಣ ನಡಗಟ್ಟಿ, ರಾಜ್ಯ ಕಾರ್ಯದರ್ಶಿ ಅನಂತ್‌ಕುಮಾರ ಬುಗಡಿ, ಮಲ್ಲಿಕಾರ್ಜುನಯ್ಯ ಹಿರೇಮಠ, ಬಸವರಾಜ ತೇರದಾಳ, ಪ್ರತಿಭಾ ದಿವಾಕರ ಇದ್ದರು.