ಜಿಮ್ಸ್ ನೇಮಕಾತಿಯಲ್ಲಿ ಅಕ್ರಮ: ಸಿಬಿಐ ತನಿಖೆಗೆ ಒತ್ತಾಯ

| Published : Feb 22 2024, 01:47 AM IST

ಜಿಮ್ಸ್ ನೇಮಕಾತಿಯಲ್ಲಿ ಅಕ್ರಮ: ಸಿಬಿಐ ತನಿಖೆಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಹೊಸದಾಗಿ ನಿರ್ದೇಶಕ ಹುದ್ದೆಯನ್ನು ನೀಡಲಾಗಿದೆ. ಅನೇಕ ಅಕ್ರಮ ನೇಮಕಾತಿಗಳು ಆಗಿದ್ದು, ಈ ಕುರಿತು ಸಿಬಿಐ ತನಿಖೆಗೆ ಒಳಪಡಿಸಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅರ್ಹತೆ ಇಲ್ಲದ ಡಾ. ಉಮೇಶ್ ಅವರಿಗೆ ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಹೊಸದಾಗಿ ನಿರ್ದೇಶಕ ಹುದ್ದೆಯನ್ನು ನೀಡಲಾಗಿದೆ. ಅನೇಕ ಅಕ್ರಮ ನೇಮಕಾತಿಗಳು ಆಗಿದ್ದು, ಈ ಕುರಿತು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ಜಿಮ್ಸ್ ಆಸ್ಪತ್ರೆಯ ಆಡಳಿತಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಜಿಮ್ಸ್‍ಗೆ ಹೊಸದಾಗಿ ನಿರ್ದೇಶಕರ ಹುದ್ದೆಗೆ ಅರ್ಹತೆ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬದಲು ರಾಜಕೀಯ, ಹಣ ಬಲ ಇರುವ ಅರ್ಹತೆ ಇಲ್ಲದಿರುವ ಮತ್ತು ಅಕ್ರಮ ನೇಮಕಾಯಲ್ಲಿ ಕಾನೂನು ಬಾಹಿರವಾಗಿ ಹುದ್ದೆ ಪಡೆದು ಕಲಬುರ್ಗಿ ಉಚ್ಛ ನ್ಯಾಯಾಲಯವು ಕಳೆದ 2021ರಲ್ಲಿ ಡಾ. ಉಮೇಶ್ ಎಸ್.ಆರ್ ಅವರಿಗೆ ವಜಾಗೊಳಿಸುವುದಕ್ಕೆ ಆದೇಶ ನೀಡಿದೆ ಎಂದರು.

ಆದಾಗ್ಯೂ, ಡಾ. ಉಮೇಶ್ ಅವರನ್ನು ಜಿಮ್ಸ್ ಪ್ರಿನ್ಸಿಪಾಲರನ್ನಾಗಿ ಮುಂದುವರೆಯಲು ಹಿಂದಿನ ನಿರ್ದೇಶಕಿ ಡಾ. ಕವಿತಾ ಪಾಟೀಲ್ ಅವರು ಬೆಂಬಲಿಸಿದ್ದರಿಂದ ಈಗ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಆಪ್ತ ಗೆಳೆಯ ಡಾ. ಉಮೇಶ್ ಅವರಿಗೆ ನಿರ್ದೇಶಕ ಹುದ್ದೆಗೆ ಅರ್ಹತೆ ಇಲ್ಲದಿದ್ದರೂ ಸಹ ಅಕ್ರಮವಾಗಿ ನೇಮಕಾತಿ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಅರ್ಹತೆ ಇರುವ ಐದು ಅಭ್ಯರ್ಥಿಗಳನ್ನು ಬಿಟ್ಟು ನಿರ್ದೇಶಕರ ಹುದ್ದೆಗೆ ಅರ್ಹತೆ ಇಲ್ಲದ ಡಾ. ಉಮೇಶ್ ಎಸ್.ಆರ್. ಅವರಿಗೆ ನೀಡಿರುವುದು ನಾಚಿಕೆಗೇಡಿತನದ್ದಾಗಿದೆ. ಯಾರಿಗೆ ರಾಜಕೀಯ, ಹಣ ಬಲ ಇರುತ್ತದೆಯೋ ಅವರು ಎಷ್ಟೇ ಭ್ರಷ್ಟಾಚಾರ ಮಾಡಿದರೂ ಸಹ ಉನ್ನತ ಹುದ್ದೆ ಪಡೆಯಬಹುದು ಎನ್ನುವುದಕ್ಕೆ ಡಾ. ಉಮೇಶ್ ಅವರ ನೇಮಕಾತಿಯೇ ಸಾಕ್ಷಿಯಾಗಿದೆ ಎಂದು ಅವರು ಕಿಡಿಕಾರಿದರು.

ಹಿಂದಿನ ನಿರ್ದೇಶಕಿ ಕವಿತಾ ಪಾಟೀಲ್ ಅವರ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ. ಆ ಕುರಿತು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ ಅವರು, ಇಲ್ಲವಾದಲ್ಲಿ ಸಾಮಾಜಿಕ ಹೋರಾಟಗಾರರ ನೇತೃತ್ವದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

2015-2016ರಲ್ಲಿ ಮೂರು ಪ್ರಾಧ್ಯಾಪಕ ಹುದ್ದೆಗಳನ್ನು ಅಕ್ರಮವಾಗಿ ನೇಮಕ ಮಾಡಲಾಗಿದೆ. ಆ ಹುದ್ದೆಗಳನ್ನು ಮೂರು ತಿಂಗಳೊಳಗೆ ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸಲು ಕಲಬುರ್ಗಿ ಉಚ್ಛ ನ್ಯಾಯಾಲಯವು ನಿರ್ದೇಶನ ನೀಡಿದೆ.

ಜಿಮ್ಸ್‍ನಲ್ಲಿನ ಎಲ್ಲ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ ಅವರು, ಇಲ್ಲವಾದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮಿತಿಯ ಅಧ್ಯಕ್ಷ ಶ್ರವಣಕುಮಾರ್ ನಾಯಕ್ ಹಾಗೂ ವೇದಿಕೆಯ ಜಿಲ್ಲಾಧ್ಯಕ್ಷ ಸಂದೀಪ್ ಪಿ. ಭರಣಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾಧ್ಯಕ್ಷ ನಂದಕುಮಾರ್ ನಾಯಕ್, ಸಂಚಾಲಕ ರಮೇಶ್ ಮದಕರಿ ಮುಂತಾದವರು ಪಾಲ್ಗೊಂಡಿದ್ದರು.