ಒಬ್ಬ ಆಕೌಂಟ್ಸ್ ಆಫೀಸರ್ ನಿಮಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಅವರು ನನ್ನ ಕಂಟ್ರೋಲ್‌ನಲ್ಲಿ ಇಲ್ಲ ಎಂದು ಹೇಳುತ್ತೀರಿ. ಹೀಗಾದರೆ ನೀವೇಕೆ ಇಂತಹ ಉನ್ನತ ಹುದ್ದೆಯಲ್ಲಿ ಇರಬೇಕು. ಒಂದು ಆರ್‌ಆರ್ ನಂಬರ್ ನೀಡಲು ರೈತ ಎಷ್ಟು ತಿಂಗಳು ಕಾಯಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಚೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದಾಗಿ ತಾಲೂಕಿನ ರೈತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಶಾಸಕ ಎಚ್.ಟಿ.ಮಂಜು ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಉಪವಿಭಾಗದ ಕಚೇರಿಯಲ್ಲಿ ನಡೆದ ಚೆಸ್ಕಾಂ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಜನರಿಂದ ದೂರು ಸ್ವೀಕರಿಸಿ ಮಾತನಾಡಿ, ಕಾರ್ಯಪಾಲಕ ಎಂಜಿನಿಯರ್ ತನ್ನ ಕೈಕೆಳಗಿನ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲು ಬರುತ್ತಿಲ್ಲ ಎಂದರೆ ನೀವು ಏಕೆ ಇಇ ಕೆಲಸ ಮಾಡಬೇಕು ಎಂದು ಕಿಡಿಕಾರಿದರು.
ಒಬ್ಬ ಆಕೌಂಟ್ಸ್ ಆಫೀಸರ್ ನಿಮಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಅವರು ನನ್ನ ಕಂಟ್ರೋಲ್‌ನಲ್ಲಿ ಇಲ್ಲ ಎಂದು ಹೇಳುತ್ತೀರಿ. ಹೀಗಾದರೆ ನೀವೇಕೆ ಇಂತಹ ಉನ್ನತ ಹುದ್ದೆಯಲ್ಲಿ ಇರಬೇಕು. ಒಂದು ಆರ್‌ಆರ್ ನಂಬರ್ ನೀಡಲು ರೈತ ಎಷ್ಟು ತಿಂಗಳು ಕಾಯಬೇಕು, ತಾಲೂಕಿನ ಸಾರ್ವಜನಿಕರಿಂದ ಬರುತ್ತಿರುವ ಸಮಸ್ಯೆಗಳು, ನೂತನ ವಿದ್ಯುತ್ ಸಂಪರ್ಕ, ವಿವಿಧ ಅರ್ಜಿಗಳ ವಿಲೇವಾರಿ ಸೇರಿದಂತೆ ಇಲಾಖೆಯ ಕಾರ್ಯವೈಖರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಆಕ್ರೋಶ ವ್ಯಕ್ತಪಡಿಸಿದರು.ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರಕ್ಕಾಗಿ ಬರುವ ರೈತರು, ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡದೆ ವಿನಾಕಾರಣ ಅಲೆದಾಡಿಸುತ್ತಿರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಣ್ಣಪುಟ್ಟ ವಿಚಾರಗಳಿಗೂ ರೈತರು ಶಾಸಕರು ಯಾವುದೇ ಹಾಗೂ ಸಾರ್ವಜನಿಕರನ್ನು ಕಚೇರಿಗೆ ಪದೇ ಪದೇ ಅಲೆದಾಡಿಸುವುದು ಸರಿಯಲ್ಲ. ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡಬಾರದು ಎಂದರು.ರೈತರು ದೇಶದ ಬೆನ್ನೆಲು. ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಅತ್ಯಂತ ಅವಶ್ಯಕ. ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಿ ಶೀಘ್ರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿಗೆ ಕೆಲಸ ಮಾಡಿಕೊಡಲು ಸೂಚಿಸಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮ ವಿಭಾಗಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.