ಅಧಿಕಾರಿಗಳ ಬೇಜವಾಬ್ದಾರಿತನ: ಕಂದಾಯ ಸಚಿವರ ತರಾಟೆ

| Published : Dec 27 2024, 12:46 AM IST

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಕಚೇರಿ ಹಾಗೂ ಉಪನೊಂದಣಾಧಿಕಾರಿಗಳ ಕಚೇರಿಗೆ ಗುರುವಾರ ಬೆಳಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ದಿಧೀರ್‌ ಭೇಟಿ ನೀಡಿ ಪರಿಶೀಲಿಸಿದರು.

ದೊಡ್ಡಬಳ್ಳಾಪುರ: ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಕಚೇರಿ ಹಾಗೂ ಉಪನೊಂದಣಾಧಿಕಾರಿಗಳ ಕಚೇರಿಗೆ ಗುರುವಾರ ಬೆಳಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ದಿಧೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಕಚೇರಿಗಳಲ್ಲಿ ಬಹುತೇಕ ನಿಗದಿತ ಸಮಯಕ್ಕೆ ಹಾಜರಿಲ್ಲದ ಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಸಲ್ಲದ ಸಬೂಬುಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಯ ಅಶಿಸ್ತು, ಸಮಯಪಾಲನೆ ಲೋಪ, ಕರ್ತವ್ಯ ನಿರ್ಲಕ್ಷ್ಯ ಕುರಿತು ಕಿಡಿಕಾರಿದರು.

ಸಚಿವರ ಭೇಟಿ ಸುದ್ದಿ ತಿಳಿದ ಕೂಡಲೇ ಉಪವಿಭಾಗಧಿಕಾರಿ ದುರ್ಗಶ್ರೀ, ತಹಸೀಲ್ದಾರ್‌ ವಿಭಾ ವಿದ್ಯಾ ರಾಥೋಡ್ ಮತ್ತು ಜಿಲ್ಲಾಧಿಕಾರಿ ಶಿವಶಂಕರ್ ಸ್ಥಳಕ್ಕೆ ಆಗಮಿಸಿದರು. ಸಾರ್ವಜನಿಕರ ಎದುರೇ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಸಚಿವರು, ಜನರ ಕೆಲಸಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.

ವ್ಯವಸ್ಥೆಯೇ ಅವ್ಯವಸ್ಥೆ!

ಭೇಟಿ ನೀಡಿದ ವೇಳೆ ಶೇ.90ರಷ್ಟು ಅಧಿಕಾರಿಗಳು ಕೆಲಸಕ್ಕೆ ಬಂದಿಲ್ಲ. 11 ಗಂಟೆಯಾದರೂ ಕೆಲವು ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ವ್ಯವಸ್ಥೆ ಅವ್ಯವಸ್ಥೆಯಾಗಿ ಕಾಣುತ್ತಿದೆ. ವಾಸ್ತವವನ್ನು ಮುಚ್ಚಿಡುವುದು ಶೋಭೆ ತರುವುದಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ನಾನು ಬೆಂಗಳೂರಿನಿಂದ ಬಂದಿದ್ದೇನೆ, ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಬಂದಿದ್ದಾರೆ. ಆದರೆ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬಂದಿಲ್ಲ. ನಾನು ಬಂದ ಮೇಲೂ ಕೆಲವರು ಹಾಜರಾತಿ ರಿಜಿಸ್ಟರ್ ಗೆ ಸಹಿ ಹಾಕುತ್ತಿದ್ದರು. ಇದು ಇಲ್ಲಿನ ವಾಸ್ತವ ಚಿತ್ರಣ, ನಾನು ಮುಚ್ಚಿಟ್ಟು ಮಾತಾಡಬಹುದು, ಹಾಗೆ ಮಾಡಿದರೆ ಆತ್ಮವಂಚನೆ ಆಗಲಿದೆ ಎಂದರು.

ಬೇಜವಾಬ್ದಾರಿಯ ಕೂಪ:

ಸರ್ಕಾರಿ ವ್ಯವಸ್ಥೆಯಲ್ಲಿ ಜನರ ಕೆಲಸಗಳಿಗೆ ಆದ್ಯತೆ ನೀಡಬೇಕು. ಆದರೆ ಇಲ್ಲಿ ಅದು ಕಾಣುತ್ತಿಲ್ಲ, ಕೆಲವು ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಆದರೆ ಕೆಲವು ಅಧಿಕಾರಿಗಳು ನಮಗಾಗಿ ಜನರಿದ್ದಾರೆಂದು ಭಾವಿಸಿದ್ದಾರೆ. ವ್ಯವಸ್ಥೆ ಸರಿ ಇಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ. ಸರಿ ಮಾಡುವ ಜವಾಬ್ಧಾರಿ ಅವರ ಮೇಲಿದೆ. ಆಡಳಿತ ವ್ಯವಸ್ಥೆಯೇ ಈಗಿರುವಾಗ ಜಿಲ್ಲಾಧಿಕಾರಿ ಒಬ್ಬರಿಂದ ಇದು ಸಾಧ್ಯವಿಲ್ಲ, ಹಾಗಂತ ನಾವು ಅಸಹಾಯಕರಾಗಿ ಕೂರಲು ಸಾಧ್ಯವಿಲ್ಲ ಎಂದರು.

ಜಿಲ್ಲಾಧಿಕಾರಿಗಳು ಆಗಾಗ ತಾಲೂಕು ಕಚೇರಿಗಳಿಗೆ ಭೇಟಿ ಕೊಟ್ಟು ಅವ್ಯವಸ್ಥೆಯನ್ನ ಸರಿಪಡಿಸಬೇಕೆಂದು ಸೂಚನೆ ಕೊಟ್ಟಿದ್ದೇನೆ. ಇದನ್ನು ನೋಡಿ ಬೇರೆ ಅಧಿಕಾರಿಗಳು ಸರಿ ಮಾಡಿಕೊಳ್ಳುತ್ತಾರೆಂಬ ನಿರೀಕ್ಷೆ ಇದೆ. ನಾವು ಮಾತ್ರ ಗಂಭೀರವಾಗಿ ಕೆಲಸ ಮಾಡ್ತಾ ಇದ್ದೇವೆ. ಈ ಅವ್ಯವಸ್ಥೆ ನೋಡಿದಾಗ ಸರಿ ಮಾಡಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಾವು ಎಷ್ಟು ಮಾಡಿದರೂ ಸಾಲದು ಎಂಬುದಕ್ಕೆ ಇಲ್ಲಿನ ವ್ಯವಸ್ಥೆಯೇ ಸಾಕ್ಷಿಯಾಗಿದೆ ಎಂದರು.

ಬಾಕ್ಸ್..............

ಉಪನೋಂದಣಾಧಿಕಾರಿ ಕಚೇರಿ ಖಾಲಿಖಾಲಿ!

ದೊಡ್ಡಬಳ್ಳಾಪುರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಗುರುವಾರ ಬೆಳಗ್ಗೆ ಕಚೇರಿ ಸಮಯಕ್ಕೆ ಸರಿಯಾಗಿ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿದ್ದರು. ಈ ವೇಳೆ ಉಪನೋಂದಣಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದೆ ಇದ್ದುದನ್ನು ಗಮನಿಸಿ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಉಪನೋಂದಣಾಧಿಕಾರಿ ಕಚೇರಿಯ ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನಲೆ ಸಚಿವರು ಖುದ್ದು ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆಗೆ ಮುಂದಾದರು. ಕಚೇರಿ ಆರಂಭದ ವೇಳೆಗೆ ಒಬ್ಬಿಬ್ಬರು ಸಿಬ್ಬಂದಿ ಬಿಟ್ಟರೆ ಮತ್ತಾರೂ ಹಾಜರಿರಲಿಲ್ಲ. ಅಧಿಕಾರಿಗಳೇ ಇರಲಿಲ್ಲ. ಹೀಗಾಗಿ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಯಾವಾಗ ಸಬ್ ರಿಜಿಸ್ಟ್ರಾರ್ ಕೆಲಸಕ್ಕೆ ಬರೋದು, ಜನ ಬಂದ ಮೇಲೆ ನೀವು ಬರೋದಾ? ನಾನು ಎಲ್ಲಿಯೋ ಕುಳಿತು ಕೇಳುತ್ತಿಲ್ಲ, ನಿಮ್ಮ ಆಫೀಸ್‌ನಲ್ಲಿ ಕುಳಿತು ಕೇಳ್ತಾ ಇದ್ದೀನಿ. ಎಲ್ಲಿ ನಿಮ್ಮ ಸಬ್ ರಿಜಿಸ್ಟ್ರಾರ್? ಜನರು ಬಂದು ಕಾಯ್ತಾ ಇರಬೇಕಾ.. ನಿಮ್ಮ ಪ್ರವೇಶಕ್ಕೆ. ನೀವು ಪಾಳೇಗಾರರು, ರಾಜರು, ಜನರು ಬಂದು ಕಾದು ನಂತರ ನೀವು ಬರೋದು ಎಂದು ತರಾಟೆಗೆ ತೆಗೆದುಕೊಂಡರು.

ಫೋಟೋ-

26ಕೆಡಿಬಿಪಿ3- ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಕಚೇರಿಗೆ ದಿಢೀರ್‌ ಭೇಟಿ ನೀಡಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.