ಸ್ವಚ್ಚತೆ ಕಾಪಾಡುವಲ್ಲಿ ನಿಲಯಪಾಲಕರ ಬೇಜವಾಬ್ದಾರಿ

| Published : Feb 10 2025, 01:46 AM IST

ಸಾರಾಂಶ

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಆರೋಗ್ಯದ ಹಿತದೃಷ್ಟಿ ಹಿನ್ನೆಲೆಯಲ್ಲಿ, ರಾಜ್ಯ ಮಕ್ಕಳ ರಕ್ಷಣೆ ಆಯೋಗದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ ಮತ್ತು ಇತರೇ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕ ಬಾಲಕಿಯರ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ಹಾಸ್ಟೆಲ್‌ಗಳ ಅವ್ಯವಸ್ಥೆ ಹಾಗೂ ನಿರ್ವಹಣೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಪಾವಗಡ

ಈ ವೇಳೆ ಬಾಲಕಿಯರ ಹಾಜರಾತಿ ಕಡಿಮೆ, ಅಡುಗೆ ಕೋಣೆ ಹಾಗೂ ಶೌಚಾಲಯಗಳ ಅಸರ್ಮಪಕ ನಿರ್ವಹಣೆ ಹಾಗೂ ಹಾಸ್ಟೆಲ್‌ ಸ್ವಚ್ಚತೆ ಮರೀಚಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಾಲಕಿಯರಿಗೆ ಮಲಗಲು ಹಾಗೂ ಶುಚಿತ್ವ ವಾತವಾರಣ ನಿರ್ಮಾಣ ಮಾಡುವ ಸಲುವಾಗಿ ಸರ್ಕಾರದಿಂದ ಮಂಚ ಹಾಗೂ ಹಾಸಿಗೆ, ದಿಂಬು ಪೂರೈಕೆಯಾಗಿದ್ದು, ಮೂರು ತಿಂಗಳಾದರೂ ಬಾಲಕಿಯರಿಗೆ ವಿತರಿಸಿದೇ ಇಡಲಾಗಿತ್ತು, ಬಗ್ಗೆ ಈ ಹಿಂದಿನ ನಿಲಯಪಾಲಕಿ ರಜೆ ತೆರಳಿದ್ದ ಹಿನ್ನೆಲೆಯಲ್ಲಿ, ಫೆ 7ರಂದು ನಿಯೋಜಿತರಾಗಿ ಮಧುಗಿರಿಯಿಂದ ಅಗಮಿಸುತ್ತಿರುವ ವಾರ್ಡ್‌ನ್‌ರೊಬ್ಬರಿಗೆ ಪ್ರಶ್ನಿಸಿದರು. ಈ ಸಂಬಂಧ ವಿವರ ನೀಡಬೇಕಿದ್ದ ಇತ್ತೀಚೆಗೆ ನಿಯೋಜಿತರಾದ ಶಿರಾ, ಪಾವಗಡ ಕಚೇರಿಯ ಚಾರ್ಜ್‌ನಲ್ಲಿರುವ ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿಯೊಬ್ಬರು ಗೈರಾಗಿದ್ದ ಪರಿಣಾಮ, ಬಿಸಿಎಂ ಹಾಸ್ಚಲ್‌ಗಳ ನಿರ್ವಹಣೆ ಕುರಿತು ನಿಲಯಪಾಲಕರಿಂದಲೇ ವಿವರ ಪಡೆದರು.

ಬಳಿಕ ಪಟ್ಟಣದ ಅಪ್‌ಬಂಡೆಯಲಿರುವ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಎಸ್‌ಸಿ ಎಸ್‌ಟಿ ಬಾಲಕರ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ ಆಯೋಗ ಸದಸ್ಯ ತಿಪ್ಪೇಸ್ವಾಮಿ, ಅಲ್ಲಿನ ನಂ.1 ಹಾಗೂ ನ.2 ಹಾಸ್ಟೆಲ್‌ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಸರ್ಕಾರದ ನಿಯಮಾನುಸಾರ ಹಾಸ್ಟೆಲ್‌ಗಳ ನಿರ್ವಹಣೆ ಅಸಮರ್ಪಕತೆದಿಂದ ಕೂಡಿದ್ದು, ಹಾಸ್ಟೆಲ್‌ಗಳ ಸ್ವಚ್ಚತೆ ಹಾಗೂ ಶೌಚಾಲಯಗಳು ವಾಸನೆಯಿಂದ ಕೂಡಿರುವುದನ್ನು ಕಂಡು ಅತ್ಯಂತ ಬೇಸರ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆಯ ನ.2 ಡಾ.ಬಿ.ಆರ್‌.ಅಂಬೇಡ್ಕರ್‌ ವಿದ್ಯಾರ್ಥಿ ನಿಲಯದಲ್ಲಿ, 58 ಮಕ್ಕಳ ಹಾಜರಾತಿ ಪೈಕಿ ಕೇವಲ 12ಮಂದಿ ಮಾತ್ರ ವಿದ್ಯಾರ್ಥಿಗಳಿದ್ದು, ಮಕ್ಕಳು ಊರಿಗೆ ಹೋದ ಬಗ್ಗೆ ಸೂಕ್ತ ಮಾಹಿತಿ ಪಡೆದಿಲ್ಲದಿದ್ದರಿಂದ ನಿಲಯಪಾಲಕರನ್ನು ಪ್ರಶ್ನಿಸಿದರು.

ರಾಜಕೀಯ ಪ್ರೇರಿತ ಕೆಲ ವಾರ್ಡನ್‌ಗಳು ಕಚೇರಿ ಹಾಗೂ ಹಾಸ್ಟಲ್ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇದರಿಂದ ಹಾಸ್ಟೆಲ್‌ಗಳ ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ. ಈ ಬಗ್ಗೆ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಸಿಪಿಡಿಒ ಸಯ್ಯಾದ್‌ ರಖೀಬ್‌ ಇದ್ದರು.