ತಮ್ಮ ಇಲಾಖೆಯ ಮಾಹಿತಿಯಿಲ್ಲದೇ ಕಾಟಾಚಾರಕ್ಕೆ ಕೆಡಿಪಿ ಸಭೆಗೆ ಹಾಜರಾಗುವುದು ಬೇಡ. ಇಲಾಖೆಯ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.

ಶಿರಸಿ: ಮಾಹಿತಿ ಇಲ್ಲದೇ ಸಭೆಗೆ ಏಕೆ ಬರುತ್ತೀರಿ? ಕಾಟಾಚಾರಕ್ಕೆ ಸಭೆಗೆ ಬಂದು ಕುಳಿತಿದ್ದಾದರೆ ಈಗಲೇ ಎದ್ದುಹೋಗಿ. ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಗಳನ್ನು ಎಂದಿಗೂ ಸಹಿಸುವುದಿಲ್ಲ. ಶಾಸಕರ ಸಭೆಯಲ್ಲೇ ಅಧಿಕಾರಿಗಳು ಇಷ್ಟು ನಿರ್ಲಕ್ಷ್ಯ ವಹಿಸಿದರೆ ಜನಸಾಮಾನ್ಯರ ಸಮಸ್ಯೆಗೆ ಹೇಗೆ ಸ್ಪಂದಿಸಬಹುದು. ಸಂಬಳ ಬರುವುದಕ್ಕಾಗಿಯೇ ಕೆಲಸ ಮಾಡಬೇಡಿ ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶುಕ್ರವಾರ ನಗರದ ಆಡಳಿತ ಸೌಧದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಇಲಾಖೆಯ ಮಾಹಿತಿಯಿಲ್ಲದೇ ಕಾಟಾಚಾರಕ್ಕೆ ಕೆಡಿಪಿ ಸಭೆಗೆ ಹಾಜರಾಗುವುದು ಬೇಡ. ಇಲಾಖೆಯ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾಹಿತಿ ನೀಡಿ, ತಾಲೂಕಿನಲ್ಲಿ ೧೭೬೭೦ ಮಕ್ಕಳು ಇದುವರೆಗೆ ಶಾಲೆಗೆ ದಾಖಲಾಗಿದ್ದಾರೆ. ಜೂ. ೩೦ರ ವರೆಗೂ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದೆ. ತಾಲೂಕಿನಲ್ಲಿ ೨ ಶಾಲೆಗಳಲ್ಲಿ ೧೦ಕ್ಕಿಂತ ಕಡಿಮೆ ಮತ್ತು ೩೮ ಶಾಲೆಗಳಲ್ಲಿ ೫ ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಈಗಾಗಲೇ ಶೇ. ೮೦ರಷ್ಟು ಪುಸ್ತಕ ಪೂರೈಕೆ ಮಾಡಲಾಗಿದೆ. ಇನ್ನು ಬರಬೇಕಾದ ಪುಸ್ತಕಗಳು ಎರಡನೇ ಅವಧಿಯವಾಗಿದ್ದು, ಈಗ ಶಾಲೆ ವಿದ್ಯಾಭ್ಯಾಸಕ್ಕೆ ತೊಂದರೆ ಇಲ್ಲ. ೬೬ ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡಿರುವುದರಿಂದ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇಲ್ಲ. ೬೬ ಹಳೆಯ ಕೊಠಡಿಗಳನ್ನು ಕೆಡವಬೇಕಾಗಿದೆ. ೧೦೪ ಕೊಠಡಿ ದುರಸ್ತಿಯಾಗಬೇಕಿದೆ. ೬೫ ಶಾಲೆಗಳಲ್ಲಿ ಅಡುಗೆ ಕೊಠಡಿ ರಿಪೇರಿ ಆಗಬೇಕು. ೩೫ ಹೊಸ ಕೊಠಡಿ ಹಾಗೂ ೭೨ ಶೌಚಾಲಯಗಳ ಅಗತ್ಯವಿದೆ ಎಂದರು.

ಶಾಸಕ ಭೀಮಣ್ಣ ಪ್ರತಿಕ್ರಿಯಿಸಿ, ಕ್ಷೇತ್ರದಲ್ಲಿರುವ ಶಾಲೆಗಳ ಕಟ್ಟಡ ರಿಪೇರಿಗೆ ವಿಶೇಷ ಅನುದಾನ ತರಲಾಗುವುದು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಕೊರತೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೂಗಳನ್ನೇ ವಿತರಿಸಲು ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿ ಆದ್ಯತೆ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಅನುದಾನಿತ ಪ್ರೌಢಶಾಲೆಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆಯಾಗಿದೆ. ಮುಂದಿನ ವರ್ಷಗಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವಂತೆ ಪ್ರೌಢಶಾಲೆಗಳಿಗೆ ಸೂಚನೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಭಟ್ಟ ಮಾತನಾಡಿ, ತಾಲೂಕಿನಲ್ಲಿ ಡೆಂಘೀ ನಿಯಂತ್ರಣಕ್ಕೆ ಬರುತ್ತಿದೆ. ವೈದ್ಯರನ್ನೂ ಒಳಗೊಂಡ ೬೫ ತಂಡ ರಚನೆ ಮಾಡಿ ತಾಲೂಕಿನ ಎಲ್ಲೆಡೆ ಡೆಂಘೀ ಪರಿಶೀಲನೆ, ಔಷಧ ವಿತರಣೆ ಮಾಡುತ್ತಿದ್ದೇವೆ. ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಸಾರ್ವಜನಿಕರಿಗೆ ಮುಂಜಾಗ್ರತೆ ಮೂಡಿಸುತ್ತಿದ್ದೇವೆ. ನಗರದಲ್ಲಿ ಫಾಗಿಂಗ್ ನಡೆಸಿ ಪಾಂಪ್ಲೆಟ್ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಸಾರಿಗೆ ಘಟಕ ವ್ಯವಸ್ಥಾಪಕ ಸರ್ವೇಶ ನಾಯ್ಕ ಸಭೆ ಮಾಹಿತಿ ನೀಡಿ, ಶಕ್ತಿ ಯೋಜನೆಯ ಮೂಲಕ ಪ್ರತಿ ದಿನ ಸರಾಸರಿ ೩೫ ಸಾವಿರ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವಿತರಣೆ ಆರಂಭಿಸಲಾಗಿದೆ ಎಂದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ತಹಸೀಲ್ದಾರ್ ರಮೇಶ ಹೆಗಡೆ, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷೆ ಜ್ಯೋತಿ ಪಾಟೀಲ್ ಉಪಸ್ಥಿತರಿದ್ದರು.ಸೈಟ್‌ ಎಂಜಿನಿಯರ್‌, ಗುತ್ತಿಗೆದಾರರೇ ಹೊಣೆ

ನಗರ ವ್ಯಾಪ್ತಿಯಲ್ಲಿ ನಿರ್ಮಿಸಲಾದ ನೀರು ಪೂರೈಕೆಯ ಕೆಲವು ಒವರ್‌ಹೆಡ್ ಟ್ಯಾಂಕ್ ಇನ್ನೂ ನಗರಸಭೆಗೆ ಹಸ್ತಾಂತರಗೊಂಡಿಲ್ಲ. ನಿರ್ಮಿಸಿದ ಕೆಲ ಟ್ಯಾಂಕ್‌ಗಳಲ್ಲಿ ಸೋರಿಕೆಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಹೊಸ ಟ್ಯಾಂಕ್‌ಗಳಲ್ಲಿ ನೀರು ಸೋರಿಕೆ ಕಂಡುಬಂದರೆ ಸೈಟ್ ಎಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಹೊಣೆಯನ್ನಾಗಿ ಮಾಡಲಾಗುತ್ತದೆ. ನೆಲಸಮ ಮಾಡಿ ಪುನಃ ನಿರ್ಮಾಣಕ್ಕೆ ಸೂಚನೆ ನೀಡಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.