ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಕಚೇರಿ ಪೀಠೋಪಕರಣ ಜಪ್ತಿ

| Published : Mar 01 2025, 01:04 AM IST

ಸಾರಾಂಶ

ಪ್ರಕರಣದ ವಿಚಾರಣೆ ನಡೆಸಿದ ಶ್ರೀರಂಗಪಟ್ಟಣದ ಜಿಲ್ಲಾ ನ್ಯಾಯಾಲಯ 11 ಜನ ರೈತರಿಗೆ ಒಟ್ಟು 1 ಕೋಟಿ 10 ಲಕ್ಷ ರು. ಗಳ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ, ನೀರಾವರಿ ಇಲಾಖೆ ನ್ಯಾಯಾಲಯದ ಆದೇಶವನ್ನು ಪಾಲಿಸದೆ ನಿರ್ಲಕ್ಷಿಸಿತ್ತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕು ವ್ಯಾಪ್ತಿಯಲ್ಲಿ ಹೇಮಾವತಿ ನಾಲೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶವಿದ್ದರೂ ನೀರಾವರಿ ಇಲಾಖೆ ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ ನ್ಯಾಯಾಲಯದ ಸೂಚನೆ ಮೇರಗೆ ಶುಕ್ರವಾರ ಪಟ್ಟಣದ ಎಚ್.ಎಲ್.ಬಿ.ಸಿ ನಂ. 03ರ ಕಾರ್ಯಪಾಲಕ ಅಭಿಯಂತರ ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು.

ಹೇಮಾವತಿ ನಾಲಾ ಯೋಜನೆಗಾಗಿ ಭೂಮಿ ಕಳೆದುಕೊಂಡ 11 ಜನ ರೈತರು ಹೆಚ್ಚುವರಿ ಪರಿಹಾರಕ್ಕಾಗಿ ಶ್ರೀರಂಗಪಟ್ಟಣದ ಜಿಲ್ಲಾ ನ್ಯಾಯಾಲಯದಲ್ಲಿ 2015 ರಲ್ಲಿ ವಕೀಲ ವಡ್ಡರಹಳ್ಳಿ ಧನಂಜಯ ಅವರ ಮೂಲಕ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಶ್ರೀರಂಗಪಟ್ಟಣದ ಜಿಲ್ಲಾ ನ್ಯಾಯಾಲಯ 11 ಜನ ರೈತರಿಗೆ ಒಟ್ಟು 1 ಕೋಟಿ 10 ಲಕ್ಷ ರು. ಗಳ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ, ನೀರಾವರಿ ಇಲಾಖೆ ನ್ಯಾಯಾಲಯದ ಆದೇಶವನ್ನು ಪಾಲಿಸದೆ ನಿರ್ಲಕ್ಷಿಸಿತ್ತು.

ರೈತರಿಗೆ ಅಗತ್ಯ ಪರಿಹಾರ ನೀಡದ ಹಿನ್ನೆಲೆಯಲ್ಲಿ ಘನ ನ್ಯಾಯಾಲಯ ಈ ಹಿಂದೆಯೇ ಕಚೇರಿ ಜಪ್ತಿಗೆ ಆದೇಶ ನೀಡಿತ್ತು. ಅಂದು ನೀರಾವರಿ ಇಲಾಖೆ ಅಧಿಕಾರಿಗಳು ಸಮಯ ಕೋರಿ ಕಚೇರಿ ಜಪ್ತಿಯಾಗದಂತೆ ನೋಡಿಕೊಂಡಿದ್ದರು. ನ್ಯಾಯಾಲಯ ಅಧಿಕಾರಿಗಳು ಕೋರಿದ ಸಮಯ ನೀಡಿದರೂ ನೀರಾವರಿ ಇಲಾಖೆ ರೈತರ ಪರಿಹಾರದ ಹಣವನ್ನು ನೀಡದ ಹಿನ್ನೆಲೆಯಲ್ಲಿ ಇಂದು ಪಟ್ಟಣದ ಎಚ್.ಎಲ್.ಬಿ.ಸಿ ನಂ.೦3 ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಆಗಮಿಸಿದ ನ್ಯಾಯಾಲಯದ ಅಮೀನರ ತಂಡ ಕಚೇರಿ ಎಲ್ಲಾ ಪೀಠೋಪಕರಣಗಳನ್ನು ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ ಪಡೆದುಕೊಂಡಿತು.