ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಅನುಮತಿ ನೀಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತೆ ಹೈಕೋರ್ಟ್ ಮೆಟ್ಟಿಲೇರಿರುವ ಸಂಗತಿ ಬೆಳಕಿಗೆ ಬಂದಿದೆ.ಹೈಕೋರ್ಟ್‌ನಿಂದ ಅರ್ಜಿ ಸ್ವೀಕಾರ:ಕೆಆರ್‌ಎಸ್ ಅಣೆಕಟ್ಟು ಸುತ್ತಮುತ್ತ ಕಲ್ಲು ಗಣಿಗಾರಿಕೆ ನಡೆಸುವುದಕ್ಕೆ ಗಣಿ ಮಾಲೀಕರಿಂದ ಒತ್ತಡ ಹೆಚ್ಚುತ್ತಿರುವುದರಿಂದ ಜೂ.೨೪, ಜು.೩ ಹಾಗೂ ಮತ್ತೊಂದು ದಿನಾಂಕವನ್ನು ನಿಗದಿಪಡಿಸಿಕೊಂಡು ನೀರಾವರಿ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಕದ ತಟ್ಟಿದ್ದಾರೆ. ಟ್ರಯಲ್ ಬ್ಲಾಸ್ಟ್‌ನಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿರುವ ಬಗ್ಗೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಸಲ್ಲಿಸಿರುವ ಆಕ್ಷೇಪಣಾ ಅರ್ಜಿಯನ್ನು ಹೈಕೋರ್ಟ್ ಸ್ವೀಕರಿಸಿದೆ. ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ಕೋರಿ ನೀರಾವರಿ ಇಲಾಖೆ ಅಧಿಕಾರಿಗಳು ಜೂ.3 ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅಂದು ವಿಚಾರಣೆಗೆ ಅರ್ಜಿಯನ್ನು ಕೈಗೆತ್ತಿಕೊಳ್ಳದ ನ್ಯಾಯಾಲಯ ಜೂ.೨೦ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಕೆಆರ್‌ಎಸ್ ಬಳಿ ಗಣಿಗಾರಿಕೆ ನಡೆಸುವುದರಿಂದ 90 ವರ್ಷ ಹಳೆಯದಾಗಿರುವ ಅಣೆಕಟ್ಟೆಗೆ ಅಪಾಯವಿರುವುದಾಗಿ ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ೨೦೧೮ರ ಸೆಪ್ಟೆಂಬರ್ ೨೫ರಂದು ವರದಿ ನೀಡಿದೆ. ಚಿನಕುರಳಿ ಗ್ರಾಮದ ಶಿವಕುಮಾರ್ ಎಂಬುವರು ಗಣಿಗಾರಿಕೆಗೆ ಪರವಾನಗಿ ನೀಡುವಂತೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದ ವೇಳೆ ಅದರ ವಿಚಾರಣೆ ನಡೆಸುವ ಸಮಯದಲ್ಲಿ ಈ ವರದಿಯನ್ನಾಧರಿಸಿ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡಿ ಅಪಾಯವನ್ನು ಆಹ್ವಾನಿಸುವುದಿಲ್ಲವೆಂದು ಹೈಕೋರ್ಟ್ ಹಿಂದೊಮ್ಮೆ ಅಭಿಪ್ರಾಯಪಟ್ಟಿತ್ತು. ಅಣೆಕಟ್ಟು ಸುರಕ್ಷತಾ ಸಮಿತಿಯಿಂದಲೇ ಗಣಿಗಾರಿಕೆಗೆ ಸಂಬಂಧಿಸಿದ ಅನುಮತಿಯನ್ನು ಪಡೆಯುವಂತೆಯೂ ನ್ಯಾಯಾಲಯ ಹೇಳಿತ್ತು.ಸಮಿತಿ ರಚನೆಯೇ ಆಗಿಲ್ಲ: ಆದರೆ, ಕಳೆದ ಎರಡು ವರ್ಷಗಳಿಂದ ಅಣೆಕಟ್ಟು ಸುರಕ್ಷತಾ ಸಮಿತಿ ರಚನೆಯೇ ಆಗಿಲ್ಲ. ಸಮಿತಿ ರಚನೆಗೆ ರಾಜ್ಯಸರ್ಕಾರ ನಿರಾಸಕ್ತಿ ವಹಿಸಿರುವ ಕಾರಣದಿಂದಲೇ ಟ್ರಯಲ್ ಬ್ಲಾಸ್ಟ್ ವಿಚಾರ ಪದೇ ಪದೇ ನ್ಯಾಯಾಲಯದ ಮೆಟ್ಟಿಲೇರುವಂತಾಗಿದೆ. ಕೆಆರ್‌ಎಸ್ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟು ಸುರಕ್ಷತಾ ಸಮಿತಿಯನ್ನು ರಚಿಸಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಇದಕ್ಕೊಂದು ತಾರ್ಕಿಕ ಅಂತ್ಯವಾಡ ಬಹುದಾಗಿದ್ದರೂ ಸರ್ಕಾರ ಅದರ ಬಗ್ಗೆ ಆಸಕ್ತಿಯನ್ನೇ ತೋರುತ್ತಿಲ್ಲ.ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ನಾಧರಿಸಿ ಕೆಆರ್‌ಎಸ್ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ರಾಜ್ಯ ಉಚ್ಛ ನ್ಯಾಯಾಲಯ ಗಣಿಗಾರಿಕೆಯನ್ನು ನಿಷೇಧಿಸಿದೆ. ಆದರೂ, ಹಠ ಬಿಡದ ಗಣಿ ಮಾಲೀಕರು ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಮತ್ತೆ ಮತ್ತೆ ನ್ಯಾಯಾಲಯದ ಕದ ತಟ್ಟುತ್ತಲೇ ಇದ್ದಾರೆ. ನ್ಯಾಯಾಲಯ ಅನುಮತಿ ನೀಡಿದರೂ ರೈತಸಂಘದಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿರುವುದು ಗಣಿ ಮಾಲೀಕರನ್ನು ಕಂಗೆಡಿಸಿದೆ.ಜಿಲ್ಲಾಡಳಿತಕ್ಕೆ ತಲೆನೋವು: ಟ್ರಯಲ್ ಬ್ಲಾಸ್ಟ್ ಭೂತ ಆಗಾಗ ಮೇಲೇಳುತ್ತಿರುವುದು ಜಿಲ್ಲಾಡಳಿತಕ್ಕೂ ತೀವ್ರ ತಲೆನೋವು ತಂದಿದೆ. ಗಣಿ ಮಾಲೀಕರನ್ನು ಎದುರಿಸಲಾಗದೆ, ರೈತಸಂಘದ ವಿರೋಧವನ್ನೂ ಹತ್ತಿಕ್ಕಲಾಗದ ಸ್ಥಿತಿಯಲ್ಲಿದ್ದಾರೆ. ಎರಡು ಬಾರಿ ಪುಣೆ, ಜಾರ್ಖಂಡ್‌ನಿಂದ ವಿಜ್ಞಾನಿಗಳ ತಂಡವನ್ನು ಟ್ರಯಲ್ ಬ್ಲಾಸ್ ನಡೆಸುವುದಕ್ಕೆ ಕರೆಸಲಾಗಿತ್ತಾದರೂ ರೈತರ ವಿರೋಧದಿಂದ ಅದಕ್ಕೆ ಅವಕಾಶವೇ ಸಿಗಲಿಲ್ಲ. ಈಗ ಮತ್ತೆ ಟ್ರಯಲ್ ಬ್ಲಾಸ್ಟ್‌ಗೆ ನೀರಾವರಿ ಇಲಾಖೆ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದು, ಜಿಲ್ಲಾಡಳಿತವನ್ನು ಮತ್ತೆ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.ಹಿಂದಿನಿಂದಲೂ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್‌ಗೆ ರೈತರ ಮನವೊಲಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ಈಗಲೂ ಮಾಡುತ್ತಿದೆ. ಆದರೆ, ಇದಕ್ಕೆ ರೈತಸಂಘದವರು ಸುತರಾಂ ಒಪ್ಪುತ್ತಿಲ್ಲ. ಟ್ರಯಲ್ ಬ್ಲಾಸ್ಟ್‌ಗೆ ನಾವೆಂದಿಗೂ ಅವಕಾಶ ನೀಡುವುದಿಲ್ಲ. ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಬಿಗಿ ನಿಲುವು ತಳೆದಿದ್ದಾರೆ.
ಸಿಎಂ ಭೇಟಿಗೆ ಪ್ರಯತ್ನ:ಟ್ರಯಲ್ ಬ್ಲಾಸ್ಟ್‌ಗೆ ಶಾಶ್ವತ ಕಡಿವಾಣ ಹಾಕಲು ಈ ಬಾರಿ ಮುಖ್ಯಮಂತ್ರಿ ಬಳಿಗೆ ಹೋಗುವುದಕ್ಕೆ ನಿರ್ಧರಿಸಿದ್ದೇವೆ. ಅಣೆಕಟ್ಟು ಸುರಕ್ಷತಾ ಸಮಿತಿಯನ್ನು ರಚಿಸಿದ್ದರೆ ನ್ಯಾಯಾಲಯದ ಮುಂದೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ. ಈ ಬಾರಿ ರೈತಸಂಘದ ನಿಯೋಗ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಕೂಡಲೇ ಸಮಿತಿ ರಚಿಸಿ ಟ್ರಯಲ್ ಬ್ಲಾಸ್ಟ್‌ಗೆ ಯಾವುದೇ ಅನುಮತಿ ನೀಡದಂತೆ ಒತ್ತಾಯಿಸಲಿದ್ದೇವೆ.-ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷರು, ರೈತಸಂಘ
ಕಾನೂನು ಹೋರಾಟ ಮುಂದುವರೆಸುವೆ:ಕೆಆರ್‌ಎಸ್ ಅಣೆಕಟ್ಟು ಬಳಿ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡದಂತೆ ಹೈಕೋರ್ಟ್‌ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದೇನೆ. ಅದನ್ನು ವಿಚಾರಣೆಗೆ ನ್ಯಾಯಾಲಯ ಅಂಗೀಕರಿಸಿದೆ. ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ. ಅಣೆಕಟ್ಟು ಉಳಿವಿಗೆ ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು. ಅಣೆಕಟ್ಟು ಉಳಿವಿಗಾಗಿ ನನ್ನ ಹೋರಾಟ ನಿರಂತರವಾಗಿರುತ್ತದೆ.- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ