ಸಾರಾಂಶ
ವಿಚಾರ ಸಂಕಿರಣ । ಕೃಷ್ಣ ಭಾಗ್ಯ ಜಲ ನಿಗಮದಿಂದ ಆಯೋಜನೆ । ನೀರಾವರಿ ಕೃಷಿಯ ವಿಷಯಗಳ ಉಪನ್ಯಾಸ
ಕನ್ನಡಪ್ರಭ ವಾರ್ತೆ ಶಹಾಪುರರೈತರನ್ನು ಹೊರತುಪಡಿಸಿ ನೀರಾವರಿ ಅಭಿವೃದ್ಧಿ ಸಾಧಿಸುವುದು ಅಸಾಧ್ಯ ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆಯ (ವಾಲ್ಮಿ) ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಅಭಿಪ್ರಾಯಪಟ್ಟರು.
ತಾಲೂಕಿನ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವತಿಯಿಂದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆದಾಗ್ಯೂ, ಅತಿಯಾದ ನೀರು ಹಾಕುವುದರಿಂದ ಪರಿಸರದ ಅವನತಿ, ಲವಣಾಂಶ ಮತ್ತು ನೀರು ತುಂಬುವಿಕೆಯಂತಹ ಹಲವಾರು ಸಮಸ್ಯೆಗಳನ್ನು ನೀವು ಎದುರಿಸಬಹುದು. ಹೀಗಾಗಿ, ಪರಿಸರ ಸಮತೋಲನ ಮತ್ತು ಶಾಶ್ವತ ಕೃಷಿ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಲು ಸಮರ್ಥ ಮತ್ತು ಸುಸ್ಥಿರ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ. ಮನುಷ್ಯನ ದುಷ್ಕೃತ್ಯದಿಂದ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನೀರಿನ ಸಂಕಟ, ಕಲಹಗಳು ಜಾಸ್ತಿಯಾಗುತ್ತಿವೆ. ನೀರಿಗಾಗಿ ಅನೇಕ ರಾಷ್ಟçಗಳು ಪರದಾಡುತ್ತಿವೆ. ನೀರಿಗಾಗಿ ೩ನೇ ಮಹಾಯುದ್ಧ ನಡೆದರೆ ಅಚ್ಚರಿಯಿಲ್ಲ. ನೆಲ ಜಲ ಅಭಿವೃದ್ಧಿ ನಿರ್ವಹಣೆ, ಕೃಷಿ, ಜಲ ಸಂಪನ್ಮೂಲ, ನೀರಾವರಿ ನಿಗಮ ಹಾಗೂ ಜಲ ಸಂಪನ್ಮೂಲ ಇಲಾಖೆಗಳ ಸಿಬ್ಬಂದ್ಧಿಗಳಿಗೆ, ರೈತರಿಗೆ ತರಬೇತಿ ನೀಡಿ ನೀರಾವರಿ ಯೋಜನೆಗಳ ಉದ್ಧೇಶಗಳನ್ನು ಸಫಲಗೊಳಿಸಲು ವಾಲ್ಮಿ ಸಂಸ್ಥೆ ಶ್ರಮಿಸುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್, ನೀರಿನ ನಿರ್ವಹಣೆ ಸರ್ಕಾರದ ಕೆಲಸವಷ್ಟೇ ಅಲ್ಲ ಈ ಕಾರ್ಯದಲ್ಲಿ ರೈತರೂ ಕೈಜೋಡಿಸಬೇಕು. ನೀರಿನ ಬಳಕೆದಾರರ ಸಂಘದ ಪದಾದಧಿಕಾರಿಗಳು ನೀರಾವರಿ ಸೌಲಭ್ಯಗಳ ಸದ್ಬಳಕೆ ಮತ್ತು ನೀರಿನ ನಿರ್ವಹಣೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಧಾರವಾಢ ಕೃಷಿ ವಿ.ವಿ.ಯ ನಿವೃತ್ತ ಕುಲಪತಿ ಡಾ. ವಿಠ್ಠಲ್ ಆಯ್. ಬೆಣಗಿ ಅವರು ಭೂಮಿಯ ಫಲವತ್ತತೆ ಕಾಪಾಡುವುದು ಹಾಗೂ ಸಾವಯವ ಕೃಷಿ ಪದ್ಧತಿ ಕುರಿತು ಉಪನ್ಯಾಸ ನೀಡಿದರು. ಧಾರವಾಡದ ವಾಲ್ಮಿ ಸಹ ಪ್ರಾಧ್ಯಾಪಕ ಬಿ.ಎಚ್. ಪೂಜಾರಿ, ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ, ಸ್ಕಾಡಾ ಕೇಂದ್ರದ ಸದಾನಂದ ಪಾಂಚಾಳ, ರೈತ ಮುಖಂಡರಾದ ಶರಣು ವಿ. ಮಂದರವಾಡ, ಲಕ್ಷ್ಮೀಕಾಂತ ಪಾಟೀಲ, ಪ್ರಭಾಕರ ಪಾಟೀಲ, ಮಹೇಶ ಗೌಡ, ಎಮ್. ಸುಭೇದಾರ, ಮಲ್ಲಣ್ಣಗೌಡ ಪರಿವಾಣ ಮುಂತಾದವರು ನೀರಾವರಿ ಮತ್ತು ಕೃಷಿಯ ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಡಾ. ಪಿ.ಎಚ್. ಕುಚನೂರು, ಡಾ. ಮಹೇಶ ಮಾಲಗತ್ತಿ, ಜಿ.ಜಿ. ಪವರ್, ಲಕ್ಷ್ಮಣ ಎಮ್.ನಾಯಕ್, ಅಬ್ದುಲ್ ಖುದ್ದೂಸ್, ಪಿ. ಸತ್ಯನಾರಾಯಣ, ಸೈಯದ್ ಇರ್ಫಾನ್, ಹುಸನಪ್ಪ ಕಟ್ಟಿಮನಿ, ರೈತ ಮುಖಂಡರಾದ ಮಲ್ಲಣ್ಣ ಪರಿವಾಣ, ಚೆನ್ನಪ್ಪ ಆನೆಗುಂದಿ, ಶರಣು ಮಂದಾರವಾಡ, ಮಹೇಶ್ ಗೌಡ ಸುಬೇದಾರ್, ಅಮಿತ ಕ್ಯಾತನವರ್, ಸಾವಿತ್ರಿ, ಕನ್ಯಾಕುಮಾರಿ, ಚಂದ್ರಲೇಖ, ಪ್ರಕಾಶ, ಉಮರ್‌ಅಲಿ, ಸಿದ್ಧಪ್ಪ ಮುಂತಾದವರು ಇದ್ದರು.