ಕನ್ನಡಪ್ರಭ ವಾರ್ತೆ ವಿಜಯಪುರ
ಸಿದ್ದರಾಮಯ್ಯನವರ ಅವಧಿಯಲ್ಲಿ ನೀರಾವರಿ ಸಚಿವನಾಗಿ ಸಾಕಷ್ಟು ಕೆಲಸ ಮಾಡಿ, ಜಿಲ್ಲೆಗೆ, ರೈತರಿಗೆ ನೀರು ಕೊಡುವ ಕೆಲಸ ಮಾಡಿದ್ದೇನೆ. ಹೀಗಾಗಿಯೇ ಇಂದು ವಿಜಯಪುರ ಜಿಲ್ಲೆ ಹಸಿರಿನಿಂದ ಕಂಗೊಳಿಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಿದ್ದೇನೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಿ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಹಿನ್ನೆಲೆ ನಗರದ ಪಾಟೀಲ ಗಾರ್ಡೆನಿಯಾದಲ್ಲಿ ನಾನಾ ಸಂಸ್ಥೆಗಳು, ನಾಗರಿಕರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಭೂಮಿಗೆ ಒಂದು ಬೊಗಸೆ ನೀರು ಕೊಡಿ, ಇದು ಅಮೆರಿಕದ ಕ್ಯಾಲಿಫೋರ್ನಿಯಾ ಮೀರಿಸುತ್ತದೆ ಎಂದು ಸಿದ್ಧೇಶ್ವರ ಶ್ರೀಗಳು 30 ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ನನಗೆ ಹೇಳಿದ್ದರು. ಇಂದು ಕ್ಯಾಲಿಫೋರ್ನಿಯಾ ದ್ರಾಕ್ಷಿ ನಮ್ಮ ಜಿಲ್ಲೆಗೆ ಬಂದಿದ್ದು, ಸಿದ್ಧೇಶ್ವರ ಶ್ರೀಗಳ ಆಶಯ ಈಡೇರಿಸಿದಂತಾಗಿದ್ದು, ನನಗೆ ಸಂತಸವಾಗಿದೆ ಎಂದು ಹೇಳಿದರು.
ಬರ ಜಿಲ್ಲೆ, ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಈ ಜಿಲ್ಲೆಗೆ ಬ್ರಿಟಿಷರ ಕಾಲದಲ್ಲಿಯೇ ರಾಜಸ್ಥಾನದ ಜೈಸಲ್ಮೇರ ಹಾಗೂ ಕರ್ನಾಟಕದಲ್ಲಿ ವಿಜಯಪುರ ತೀವ್ರವಾದ ಬರ ಪ್ರದೇಶ ಎಂದು ಘೋಷಣೆ ಮಾಡಿ, ಬರ ನಿವಾರಣೆ ಕೇಂದ್ರ ಸ್ಥಾಪಿಸಲಾಗಿತ್ತು. ಇಲ್ಲಿನ ಜನರು ಹೃದಯ ಶ್ರೀಮಂತಿಕೆಯ ಹೊಂದಿದ್ದು, ಇಂದಿರಾಗಾಂಧಿ, ನಿಜಲಿಂಗಪ್ಪ ಅವರನ್ನು ಬಂಗಾರದಲ್ಲಿ ತೂಗಿದವರು ನಮ್ಮ ಜಿಲ್ಲೆಯ ಜನರು. ಪಂಚ ನದಿಗಳು ಹರಿದರೂ ಕುಡಿಯಲು ನೀರು ಇರಲಿಲ್ಲ ಎಂದರು.ಮೂರು ವರ್ಷಗಳ ಹಿಂದೆ ಕೈಗಾರಿಕೆ ಮಂತ್ರಿಯಾದ ಮೇಲೆ ಕೆ.ಎಸ್.ಡಿ.ಎಲ್ ಎರಡನೇ ಕಾರ್ಖಾನೆ ಇಟ್ಟಂಗಿಹಾಳದಲ್ಲಿ ತಂದಿದ್ದು, ಫುಡ್ ಪ್ರೊಸೆಸಿಂಗ್ ಕಾರ್ಖಾನೆ, ಕೊಕಾ ಕೋಲಾ ತಯಾರಿಕೆ ಯುನಿಟ್, ಸುಜಲಾನ್ ಕಂಪನಿಗಳು ಶೀಘ್ರ ಜಿಲ್ಲೆಗೆ ಬರಲಿವೆ. ಇದರ ಜೊತೆಗೆ ಹೈನುಗಾರಿಕೆಗೆ ಪ್ರೋತ್ಸಾಹ ಕೊಡುವ ಸಲುವಾಗಿ ಬಿಎಲ್‌ಡಿಇ ಸಂಸ್ಥೆಯಿಂದಲೇ ಪ್ರತಿ ವರ್ಷ 50 ಲಕ್ಷದಂತೆ ಅಕ್ಷಯಕಲ್ಪದವರೊಂದಿಗೆ ಸೇರಿ ಪೈಲಟ್ ಪ್ರೊಜೆಕ್ಟ್ ಯೋಜನೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ನನಗೆ ಬೆಂಬಲಿಸಿದ ಎಐಸಿಸಿ, ಕೆಪಿಸಿಸಿ ನಾಯಕರಿಗೆಲ್ಲ ಧನ್ಯವಾದ ಅರ್ಪಿಸುತ್ತೇನೆ. ಎಲ್ಲ ಅಭಿಮಾನಿಗಳಿಗೂ, ಕಾರ್ಯಕರ್ತರಿಗೂ, ಮತದಾರರಿಗೂ ಹಾಗೂ ಹಿರಿಯರಿಗೂ, ತಮಗೆಲ್ಲರಿಗೂ ಅಭಿನಂದನೆ ಎಂದರು.
ಕೋಟಿ ಸಸಿಗಳನ್ನು ನೆಟ್ಟ ಕನಸುಗಾರ:
ಎಂ.ಬಿ. ಪಾಟೀಲರು ಅತ್ಯುತ್ತಮ ಕನಸುಗಾರರಾಗಿದ್ದು, ರಾಜಕೀಯದಲ್ಲಿ ತಮ್ಮನ್ನೇ ಸಮರ್ಪಣೆ ಮಾಡಿಕೊಂಡು, ಇಡಿ ಜಿಲ್ಲೆಯ ಅಭಿವೃದ್ಧಿ ಮಾಡಿದ್ದಾರೆ.ಸತತ ಬರದ ನಾಡಾದ ನನ್ನ ಕ್ಷೇತ್ರದಲ್ಲಿ ನೀರಾವರಿ ಮಾಡಿ, ಜಿಲ್ಲೆಯನ್ನು ನಂದನವನವನ್ನಾಗಿ ಮಾಡುವ ಯೋಜನೆ ಹಾಕಿಕೊಂಡು ಎರಡು ಕೋಟಿ ಸಸಿಗಳನ್ನು ನೆಟ್ಟಿದ್ದಾರೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.ಎಂ.ಬಿ. ಪಾಟೀಲರು ಇರದಿದ್ದರೆ ಈ ಜಿಲ್ಲೆಯ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ, ಅಷ್ಟು ಹದಗೆಡುತ್ತಿತ್ತು. ಹಾಗಾಗಿ ನನ್ನ ಸಂಪೂರ್ಣ ಸಹಕಾರ ಎಂ.ಬಿ. ಪಾಟೀಲರಿಗೆ ಇದ್ದು, ಅವರ ಹೆಗಲಿಗೆ ಹೆಗಲು ಕೊಟ್ಟು ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮಡಿವಾಳಪ್ಪ ಕರಡಿ, ಡಾ.ಗಂಗಾಧರ ಸಂಬಣ್ಣಿ, ಸಂಗು ಸಜ್ಜನ, ವಿ.ಎನ್. ಬಿರಾದಾರ, ವಿ.ಸಿ. ನಾಗಠಾಣ, ಡಾ.ಕಂಠೀರವ ಕುಲ್ಲೊಳ್ಳಿ, ಸಿದ್ರಾಮಪ್ಪ ಉಪ್ಪಿನ, ಬಸನಗೌಡ ಹರನಾಳ, ಡಾ.ಬಿ.ಎಸ್. ಪಾಟೀಲ, ಎಸ್.ವಿ. ಪಾಟೀಲ, ಶಂಕರಗೌಡ ಸವನಳ್ಳಿ, ಹಾಸಿಂಪೀರ ವಾಲಿಕಾರ ಇದ್ದರು.ಇನ್ನೂ ಹೆಚ್ಚಿನ ಕೆಲಸ ಮಾಡುವೆ:ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ನನಗೆ ಕೈಗಾರಿಕೆ ಸಚಿವನಾಗಿ ಮುಂದುವರಿಯಲು ಅವಕಾಶ ಸಿಕ್ಕಿದೆ. ಈಗಾಗಲೇ ಕೈಗಾರಿಕೆ ಇಲಾಖೆಯಲ್ಲಿ ತಳಮಟ್ಟದಿಂದ ಕೆಲಸ ಮಾಡಲಾಗಿದೆ, ಇನ್ನೂ ಹೆಚ್ಚಿನ ಕೆಲಸ ಮಾಡುತ್ತೆನೆ. ಬೇರೆ ಇಲಾಖೆ ತೆಗೆದುಕೊಂಡಿದ್ದರೆ ಮತ್ತೆ ತಳಮಟ್ಟದಿಂದ ಕೆಲಸ ಆರಂಭಿಸಿಬೇಕಿತ್ತು. ನೀರಾವರಿ ಖಾತೆ ಸಿಕ್ಕಿದ್ದಕ್ಕೆ ಸಚಿವ ರಾಮಲಿಂಗ ರೆಡ್ಡಿ ಬೇಸರ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರನ್ನು ನಾಯಕರಾದ ಸೋನಿಯಾ ಗಾಂಧಿ, ರಾಹುಲ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮನವೊಲಿಸುವ ಕೆಲಸ ಮಾಡುತ್ತಾರೆ ಎಂದರು.