ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಇರುಳಿಗ ಜನಾಂಗದ ಅಭ್ಯುದಯಕ್ಕೆ ಸಾಕಷ್ಟು ಯೋಜನೆ ಸರ್ಕಾರ ರೂಪಿಸಿದೆ. ಈ ಯೋಜನೆ ಸೌಲಭ್ಯಪಡೆದುಕೊಳ್ಳಲು ಅಗತ್ಯವಿರುವ ಮಾಹಿತಿ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಚ್. ಅಣ್ಣಯ್ಯನವರ ಹೇಳಿದರು.ತಾಲೂಕಿನ ಮಳೂರು ಹೋಬಳಿ ಮಾಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇರುಳಿಗರ ದೊಡ್ಡಿ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಸಾಮಾಜಿಕ ನ್ಯಾಯ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇರುಳಿಗರ ಏಳಿಗೆಗೆ ಸರ್ಕಾರ ರೂಪಿಸಿರುವ ಯೋಜನೆ, ಪಡೆಯುವ ವಿಧಾನ, ವಿವಿಧ ಇಲಾಖೆಗಳ ಜನಕಲ್ಯಾಣ ಯೋಜನೆ ತಿಳಿದುಕೊಳ್ಳಬೇಕು. ಸರ್ಕಾರದ ಸೌಲಭ್ಯ ಪಡೆಯಲು ಬೇಕಾದ ದಾಖಲಾತಿ ಮಾಹಿತಿ ಪಡೆದುಕೊಳ್ಳಬೇಕು, ನಂತರ ಸೌಲಭ್ಯಗಳಿಗೆ ಅರ್ಜಿ ಹಾಗೂ ದಾಖಲಾತಿ ಸಲ್ಲಿಸಿ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ನೀಡುವ ಲೇಬರ್ ಕಾರ್ಡ್ ಪಡೆದು ಆ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಮನೆ ದಾಖಲಾತಿ ಸರಿಯಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ತಪ್ಪಾಗಿದ್ದರೆ ಕೂಡಲೇ ಸರಿಪಡಿಸಿಕೊಳ್ಳಬೇಕು. ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಸಹ ತಮ್ಮ ಹೆಸರಿನಲ್ಲಿ ಮಾಡಿಸಿಕೊಳ್ಳಬೇಕು. ಮಗು ಜನಿಸಿದ ತಿಂಗಳೊಳಗೆ ಜನನ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಅದೇ ರೀತಿ ಮರಣ ಪ್ರಮಾಣ ಪತ್ರ ಸಹ ನಿಗದಿತ ಅವಧಿಯಲ್ಲಿ ಪಡೆದುಕೊಳ್ಳಬೇಕು ಎಂದು ಅಣ್ಣಯ್ಯನವರ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಆರ್. ಸವಿತಾ ಮಾತನಾಡಿ, ಮಹಿಳೆಯರು ಸೇರಿ ಪ್ರತಿಯೊಬ್ಬರಿಗೂ ಸಮಾನತೆ, ಸಮಾನವಾದ ಆಯ್ಕೆ ನೀಡುವ ದ್ಯೇಯೋದ್ದೇಶದಿಂದ ವಿಶ್ವ ಸಾಮಾಜಿಕ ನ್ಯಾಯ ದಿನ ಆಯೋಜಿಸಲಾಗಿದೆ. ಇರುಳಿಗರದೊಡ್ಡಿಯ ನಿವಾಸಿಗಳ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುತ್ತಿದೆ. ಹೆಚ್ಚಿನ ಸಮಸ್ಯೆಗಳಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತರುವಂತೆ ಅಥವಾ ಉಚಿತ ದೂರವಾಣಿ ಕರೆ ನಂಬರ್ 15100ಕ್ಕೆ ಕರೆ ಮಾಡುವಂತೆ ತಿಳಿಸಿದರು.
ತಹಸೀಲ್ದಾರ್ ಗಿರೀಶ್, ಡಿವೈಎಸ್ಪಿ ಕೆ.ಸಿ. ಗಿರಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶಿವಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಬೈಸಿಕಲ್ ವಿತರಣೆ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಚ್. ಅಣ್ಣಯ್ಯನವರ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೈಸಿಕಲ್ ವಿತರಿಸಿದರು. ಕಾರ್ಮಿಕ ಇಲಾಖೆಯಿಂದ ಸರ್ಕಾರದಿಂದ ದೊರೆಯುವ ವಿಮೆ ಪಾಲಿಸಿ ಕಾರ್ಡಗಳನ್ನು ಸಾಂಕೇತಿಕವಾಗಿ ಫಲಾನುಭವಿಗಳಿಗೆ ನೀಡಲಾಯಿತು. ನಂತರ ಗ್ರಾಮಸ್ಥರಿಂದ ಕುಂದುಕೊರತೆ ನ್ಯಾಯಾಧೀಶರು ಆಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿದ್ಯುತ್, ಮನೆ, ಪಡಿತರ ಚೀಟಿ, ಕುಡಿಯುವ ನೀರು, ರಸ್ತೆ ಸೇರಿ ಹಲವು ಸಮಸ್ಯೆ ಬಗ್ಗೆ ಸ್ಥಳೀಯರು ನ್ಯಾಯಾಧೀಶರ ಮುಂದೆ ಮಂಡಿಸಿದರು.