ಕಡೂರು ಪುರಸಭೆಯಲ್ಲಿ ಕಾಂಗ್ರೆಸ್‌ ಮ್ಯಾಜಿಕ್‌ ಮಾಡುತ್ತಾ?

| Published : Aug 26 2024, 01:39 AM IST

ಕಡೂರು ಪುರಸಭೆಯಲ್ಲಿ ಕಾಂಗ್ರೆಸ್‌ ಮ್ಯಾಜಿಕ್‌ ಮಾಡುತ್ತಾ?
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಗದ್ದುಗೆಗಾಗಿ ಸೋಮವಾರ ಚುನಾವಣೆ ನಿಗದಿಯಾಗಿದ್ದು, ಸದಸ್ಯರ ಪ್ರವಾಸ, ಬಿಜೆಪಿ-ಜೆಡಿಎಸ್‌ಗೆ ಬಹುಮತವಿದ್ದರೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕರು ಪುರಸಭೆಯಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಲಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

- ತೀವ್ರ ಕುತೂಹಲ ಮೂಡಿಸಿರುವ ಇಂದಿನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ

- ತಮ್ಮ ಸದಸ್ಯರನ್ನು ಕಾಪಿಟ್ಟುಕೊಳ್ಳಲು ಪ್ರವಾಸದ ಮೊರೆ ಹೋಗಿರುವ ಪಕ್ಷಗಳು

ಕಡೂರು ಕೃಷ್ಣಮೂರ್ತಿ

ಕನ್ನಡಪ್ರಭ ವಾರ್ತೆ, ಕಡೂರು

ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಗದ್ದುಗೆಗಾಗಿ ಸೋಮವಾರ ಚುನಾವಣೆ ನಿಗದಿಯಾಗಿದ್ದು, ಸದಸ್ಯರ ಪ್ರವಾಸ, ಬಿಜೆಪಿ-ಜೆಡಿಎಸ್‌ಗೆ ಬಹುಮತವಿದ್ದರೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕರು ಪುರಸಭೆಯಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಲಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ಕಡೂರು ಪುರಸಭೆ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಎರಡನೇ ಅವಧಿಗೆ ಸುಮಾರು 11 ತಿಂಗಳ ಬಳಿಕ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ನ 7 ಸದಸ್ಯರು, 6 ಬಿಜೆಪಿ, 6 ಜೆಡಿಎಸ್ ಮತ್ತು 4 ಪಕ್ಷೇತರ ಅಭ್ಯರ್ಥಿಗಳು ಸೇರಿ 23 ಸದಸ್ಯರಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಲವರು ಕಾಂಗ್ರೆಸ್ ಸೇರಿರುವುದು, ನಾಲ್ವರು ಪಕ್ಷೇತರ ಸದಸ್ಯರಿರುವ ಕಾರಣ ಯಾರು ಯಾರಿಗೆ ಬೆಂಬಲಿಸುತ್ತಾರೆಂಬುದು ನಿಲುಕದೆ ಚುನಾವಣೆ ತೀವ್ರ ಆಸಕ್ತಿ ಕೆರಳಿಸಿದೆ.

ಕಾಂಗ್ರೆಸ್‌ನ ತೋಟದಮನೆ ಮೋಹನ್, ಈರಳ್ಳಿ ರಮೇಶ್ ಕೂಡ ಪ್ರಬಲ ಸ್ಪರ್ಧೆಯೊಡ್ಡಿದ್ದು, ಬಿಜೆಪಿಯಲ್ಲೂ ಪ್ರಬಲ ಸಾಕಷ್ಟು ಆಕಾಂಕ್ಷಿಗಗಳಿದ್ದಾರೆ. ಮೈತ್ರಿಯೋ, ಹೊಸ ಬೆಳವಣಿಗೆಯೋ? ಕಾದು ನೋಡಬೇಕಿದೆ. ಮೊದಲ ಅವಧಿಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಅಧ್ಯಕ್ಷರಾಗಿ ಭಂಡಾರಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ವಿಜಯ ಚಿನ್ನರಾಜು 30 ತಿಂಗಳ ಅಧಿಕಾರ ನಿರ್ವಹಿಸಿದ್ದಾರೆ. ಇದೀಗ ಎರಡನೇ ಅವಧಿಗೆ ಮತ್ತೆ ಮೈತ್ರಿ ಮುಂದುವರಿಯುತ್ತದೆಯೇ ಅಥವಾ ಚುನಾವಣೆ ನಡೆದು ಬದಲಾವಣೆಯಾಗುತ್ತದೆಯೋ ಎಂದು ಜನತೆ ಕಾತುರರಾಗಿದ್ದಾರೆ.

ಕಳೆದ ಬಾರಿ ಶಾಸಕರಾಗಿದ್ದ ಬೆಳ್ಳಿ ಪ್ರಕಾಶ್ ನೇತೃತ್ವದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿ ಪುರಸಭೆ ಅಧಿಕಾರ ನಡೆದಿತ್ತು. ಇದೀಗ ಕಾಂಗ್ರೆಸ್ ಶಾಸಕ ಕೆ.ಎಸ್ ಆನಂದ್ ಅವರಿಗೆ ಇದು ಪ್ರತಿಷ್ಠೆ ಪ್ರಶ್ನೆಯಾಗಿದೆ. ಕಾಂಗ್ರೆಸ್ ನ 7 ಸದಸ್ಯರ ಜೊತೆ ಒಬ್ಬರು ಪಕ್ಷೇತರರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಹಾಲಿ ಶಾಸಕರ 1 ಮತ ಮತ್ತು ಸಂಸದರ ಒಂದು ಮತ ಸೇರಿ ಒಟ್ಟು 10 ಮತಗಳು ಕಾಂಗ್ರೆಸ್ ಪಕ್ಷಕ್ಕಿವೆ.

ಇನ್ನು ಬಿಜೆಪಿಯ 6, ಜೆಡಿಎಸ್ ನ 6 ಸದಸ್ಯರ ಜೊತೆ 3 ಪಕ್ಷೇತರರು ಸೇರಿ 15 ಮತಗಳಾಗುತ್ತವೆ.

ಆದರೆ ಬದಲಾದ ಪರಿಸ್ಥಿತಿಯಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಭಂಡಾರಿ ಶ್ರೀನಿವಾಸ್, ವಿಜಯಲಕ್ಷ್ಮಿ, ಪುಷ್ಪಲತಾ ಮಂಜುನಾಥ್ ಸೇರಿದಂತೆ ಪದ್ಮಾಶಂಕರ್ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಹೀಗಾಗಿ ಕಾಂಗ್ರೆಸ್ ಹೊಸ ಮ್ಯಾಜಿಕ್‌ ಮಾಡುತ್ತಾ? ಎಂಬ ಪ್ರಶ್ನೆ ಮೂಡಿಸಿದೆ.

ಕಾಂಗ್ರೆಸ್ ಶಾಸಕ ಕೆ.ಎಸ್. ಆನಂದ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಕಡೂರು ಪುರಸಭೆಯಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಾವುಟ ಅರಳಲಿದೆ ಎಂದು ಪ್ರತಿಕ್ರಿಯಿಸಿದ್ದು ಕುತೂಹಲ ಹೆಚ್ಚಲು ಕಾರಣವಾಗಿದೆ. ಇದೇ ವೇಳೆ ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಮತ್ತು ವೈ.ಎಸ್‌.ವಿ.ದತ್ತ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಒಟ್ಟಾರೆ ಅಧ್ಯಕ್ಷ ಉಪಾಧ್ಯಕ್ಷರು ಯಾರು ಆಗುತ್ತಾರೆ ಎನ್ನುವುದಕ್ಕಿಂತ ಪುರಸಭೆ ಗದ್ದುಗೆ ಯಾವ ಪಕ್ಷದ ಪಾಲಾಗುತ್ತದೋ ಎಂಬ ಕುತೂಹಲವೇ ಹೆಚ್ಚಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಕಡೂರು ಪುರಸಭೆಯಲ್ಲಿ ಅಗತ್ಯ ಬಂದೋಬಸ್ತ್ ನ ಸಿದ್ಧತೆ ನಡೆದಿದೆ.

-- ಬಾಕ್ಸ್ ಸುದ್ದಿಗೆ--

ಅವಿರೋಧ ಆಯ್ಕೆಗೆ ಒತ್ತು ನೀಡುತ್ತಿದ್ದ ಪುರಸಭೆ ಚುನಾವಣೆಯಲ್ಲಿ ಸುಮಾರು 20 ವರ್ಷಗಳ ಬಳಿಕ ಪ್ರವಾಸದ ನೆಪದಲ್ಲಿ ತಮ್ಮ ತಮ್ಮ ಸದಸ್ಯರನ್ನು ಸೇಫ್ ಮಾಡಿಕೊಳ್ಳುವ ಪರಿಪಾಠ ಮತ್ತೆ ಆರಂಭವಾಗಿದೆ. ಬಲ್ಲ ಮೂಲಗಳ ಪ್ರಕಾರ ಜೆಡಿಎಸ್ ಸದಸ್ಯರು ತಿರುಪತಿ, ಬಿಜೆಪಿ ಸದಸ್ಯರು ಹೈದರಾಬಾದ್ ಮತ್ತು ತಮಿಳುನಾಡಿನ ಪ್ರವಾಸದಲ್ಲಿದ್ದು ಕಾಂಗ್ರೆಸ್ ಸದಸ್ಯರಲ್ಲಿ ಕೆಲವರು ದೆಹಲಿ ಪ್ರವಾಸದಲ್ಲಿದ್ದಾರೆ ಎಂದು ತಿಳಿದು ಬಂದಿದ್ದು ಚುನಾವಣೆ ನಾಮಪತ್ರ ಸಲ್ಲಿಕೆ ಸಮಯಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.