ಸಾರಾಂಶ
ಮದ್ದೂರು : ಮಗನ ಚುನಾವಣೆಗಿಂತ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಏನು ನಡೆಯಿತು ಎನ್ನುವುದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯವಾಯಿತೇ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕುಟುಕಿದರು.
ಪಟ್ಟಣದ ಎಚ್.ಕೆ.ವೀರಣ್ಣಗೌಡ ನಗರದಲ್ಲಿ ತಮ್ಮ ಆಪ್ತ ಕೆ.ಎಸ್.ಸುನಿಲ್ ಕುಮಾರ್ ಅವರ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನ ಪಂಚತಾರಾ ಹೋಟೆಲ್ ನಲ್ಲಿ ನಡೆದ ನಿಶ್ಚಿತಾರ್ಥದ ವೇಳೆ ಯಾವುದೇ ಹಲ್ಲೆ ನಡೆದಿಲ್ಲ. ಈ ವಿಚಾರವು ನನಗೆ ಗೊತ್ತಿಲ್ಲ. ಅದನ್ನು ಕುಮಾರಸ್ವಾಮಿ ಅವರನ್ನೇ ಕೇಳಿ ತಿಳಿದುಕೊಳ್ಳಿ ಎಂದರು.
ಕೀಲಾರ ಜಯರಾಮ್ ಮತ್ತು ನಾನು 40 ವರ್ಷಗಳ ಸ್ನೇಹಿತರು. ಅವರು ಜೆಡಿಎಸ್ ನಲ್ಲಿದ್ದಾಗ ನಾನು ಕಾಂಗ್ರೆಸ್ ನಲ್ಲಿದ್ದೆ. ಈಗಲೂ ಇಬ್ಬರು ಜೊತೆಯಾಗಿದ್ದೇವೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಜೊತೆಯಲ್ಲೇ ಊಟ ಮಾಡಿದ್ದೇವೆ. ಯಾವುದೇ ಗಲಾಟೆ ಅಥವಾ ಹಲ್ಲೆ ನಡೆದಿಲ್ಲ. ಸಚಿವರೊಬ್ಬರ ಮೇಲೆ ಹಲ್ಲೆ ನಡೆದಿದೆ ಎಂಬುದು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಊಹಾ ಪೋಹ ಹೇಳಿಕೆ ಎಂದು ಕಿಡಿಕಾರಿದರು.
ಡಿ.ಕೆ.ಶಿವಕುಮಾರ್ ಮತ್ತು ನನ್ನ ಮೇಲೆ ಟೀಕೆ, ಟಿಪ್ಪಣಿಗಳನ್ನು ಮಾಡದಿದ್ದರೆ ಅವರಿಗೆ ನಿದ್ರೆ ಬರುವುದಿಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಗೆಲುವು ಶತಸಿದ್ಧ. ಕ್ಷೇತ್ರದ ಜನರು ಯಾರನ್ನು ಗೆಲ್ಲಿಸಬೇಕು ಎಂದು ಈಗಾಗಲೇ ತೀರ್ಮಾನ ಕೈಗೊಂಡಿದ್ದಾರೆ. ಅದು ನಮ್ಮ ಪರವಾಗಿದೆ. ಚುನಾವಣೆಯಲ್ಲಿ ನಾನು ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಶಾಸಕರು, ಮುಖಂಡರು ಒಗ್ಗಟ್ಟಿನಿಂದ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪರ ಅಲೆ ಇದೆ ಎಂದು ತಿಳಿಸಿದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಕಾಂಗ್ರೆಸ್ ಮುಖಂಡರಾದ ತೋಯಜಾಕ್ಷ, ಎಂ.ಪಿ.ಅಮರ ಬಾಬು, ಅರುಣ ಇದ್ದರು.