ಗ್ಯಾರಂಟಿ ಕೊಡಲು ಇವರೇನು ಮುಖ್ಯಮಂತ್ರಿನಾ? ಪ್ರಧಾನಿಯಾ?: ಎಚ್‌.ಡಿ. ದೇವೇಗೌಡ

| Published : Apr 27 2024, 01:18 AM IST / Updated: Apr 27 2024, 01:23 PM IST

ಗ್ಯಾರಂಟಿ ಕೊಡಲು ಇವರೇನು ಮುಖ್ಯಮಂತ್ರಿನಾ? ಪ್ರಧಾನಿಯಾ?: ಎಚ್‌.ಡಿ. ದೇವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

‘ಒಂದು ಲಕ್ಷ ಕೊಡ್ತೇವೆ, ಸಾಲ ಮನ್ನಾ ಮಾಡ್ತೇವೆ, ಜಾತಿ ಗಣತಿ ಮಾಡ್ತೇವೆ ಅಂತ ಹೇಳಿದ್ದಾರೆ. ಇವರು ಯಾರು ಮುಖ್ಯಮಂತ್ರಿಯಾ ಅಥವಾ ಪ್ರಧಾನಿಯಾ? ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. 

 ಹೊಳೆನರಸೀಪುರ :  ‘ಒಂದು ಲಕ್ಷ ಕೊಡ್ತೇವೆ, ಸಾಲ ಮನ್ನಾ ಮಾಡ್ತೇವೆ, ಜಾತಿ ಗಣತಿ ಮಾಡ್ತೇವೆ ಅಂತ ಹೇಳಿದ್ದಾರೆ. ಇವರು ಯಾರು ಮುಖ್ಯಮಂತ್ರಿಯಾ ಅಥವಾ ಪ್ರಧಾನಿಯಾ? ಉತ್ತರಪ್ರದೇಶದಲ್ಲಿ ನಿಲ್ಲಲು ಆಗದೇ ಕೇರಳಕ್ಕೆ ಹೋಗಿ ನಿಲ್ತಾರೆ. ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಹಿಂದೆಂದೂ ನಡೆದಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ ೨೫೧ರಲ್ಲಿ ಪತ್ನಿ ಚೆನ್ನಮ್ಮನವರ ಜತೆ ಆಗಮಿಸಿ, ಮತ ಚಲಾಯಿಸಿದ ನಂತರ ಮಾತನಾಡಿದರು. ‘೧೯೬೨ರಿಂದ ಇಲ್ಲಿಗೆ ಬಂದು ವಾಸವಾಗಿದ್ದೇನೆ. ಜಮೀನಿನಲ್ಲಿ ಇರುವ ತೆಂಗು ಬೆಳೆ ನೋಡಲು ಬರುತ್ತೇನೆ. ನಾನು ಮತ್ತು ಚೆನ್ನಮ್ಮ ಮತ ಹಾಕಿದ್ದೇವೆ. ಮತ ಹಾಕುವ ಹಕ್ಕು ಎಲ್ಲರಿಗೂ ಇದೆ. ಯಾರಿಗೆ ಹಾಕಿದ್ದೇವೆ ಎಂದು ಹೇಳುವ ಹಾಗಿಲ್ಲ’ ಎಂದು ಹೇಳಿದರು.

‘ಈ ರಾಜ್ಯದ ಮಹಾ ಜನತೆ ಮುಂದೆ ಒಂದು ವಿಷಯ ಪ್ರಸ್ತಾಪ ಮಾಡ್ತೇನೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಪತ್ರ ಪ್ರದರ್ಶಿಸಿ, ಒಂದು ಲಕ್ಷ ಕೊಡ್ತೇವೆ ಎಂದು ಖರ್ಗೆ, ರಾಹುಲ್ ಹೇಳ್ತಾರೆ. ನಿನ್ನೆಯಿಂದ ಇಂತಹ ಕಾರ್ಡ್‌ಗಳನ್ನು ಕೆಲವು ಮನೆಗಳಿಗೆ ಹಂಚಿದ್ದಾರೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಹಂಚಿಲ್ಲ, ಆದರೆ ಇಲ್ಲಿ ಮಾತ್ರ ಹಂಚಿದ್ದಾರೆ, ಸಿಎಂ, ಡಿಸಿಎಂ ಸಹಿ ಮಾಡಿದರೇ ಒಪ್ಪಿಕೊಳ್ಳಬಹುದು, ಜನರಿಗೆ ಇದಕ್ಕಿಂತ ಹೇಯವಾದ ವಂಚನೆ, ಮೋಸ ಮಾಡುವ ದುಷ್ಕೃತ್ಯ ಈ ರಾಜ್ಯದಲ್ಲಿ ನಡೆಯುತ್ತಿದೆ’ ಎಂದು ಕಿಡಿಕಾರಿದರು.

‘೧೪ ಕ್ಷೇತ್ರದಲ್ಲಿ ಈ ಕೆಟ್ಟ ಕರಪತ್ರ ಹಂಚಿದ್ದಾರೆ, ಕೆಲ ಹೆಣ್ಣುಮಕ್ಕಳಿಗೆ ಲಕ್ಷ ರು. ಕೊಡ್ತಾರಂತೆ. ಇದನ್ನು ವಿದ್ಯಾವಂತರು ನಂಬಲ್ಲ’ ಎಂದು ಮೂದಲಿಸಿದರು.

ಮತದಾನಕ್ಕೂ ಮುನ್ನ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಹರದನಹಳ್ಳಿಯ ಶ್ರೀ ದೇವೇಶ್ವರ ದೇವಾಲಯ, ಬೆಟ್ಟದ ಶ್ರೀ ರಂಗನಾಥಸ್ವಾಮಿ ಹಾಗೂ ಪಡುವಲಹಿಪ್ಪೆಯ ಶ್ರೀ ಕೋದಂಡರಾಮ ದೇವಾಲಯಕ್ಕೆ ಚೆನ್ನಮ್ಮನವರ ಜತೆ ತೆರಳಿ ಎಚ್‌.ಡಿ. ದೇವೇಗೌಡ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

ಪ್ರಜ್ವಲ್‌ ಏಕಾಂಗಿ ಮತದಾನ:

ಸಂಸದ ಪ್ರಜ್ವಲ್ ರೇವಣ್ಣ ಹರದನಹಳ್ಳಿಯ ಶ್ರೀ ದೇವೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಪಡುವಲಹಿಪ್ಪೆ ಗ್ರಾಮದಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿ, ‘ಖಂಡಿತಾ ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ನೂರಕ್ಕೆ ನೂರು ಜನರ ಮೇಲೆ ವಿಶ್ವಾಸವಿದೆ, ನೂರಕ್ಕೆ ನೂರು ಭಾಗ ಗೆಲ್ತೇವೆ’ ಎಂದು ವಿಶ್ವಾಸದಿಂದ ನುಡಿದರು.

‘ಬಿಜೆಪಿ ಕಾರ್ಯಕರ್ತರು, ಮುಖಂಡರು ಜತೆಗೆ ನಮ್ಮ ಮುಖಂಡರು ಒಟ್ಟಾಗಿ ಕೆಲಸ ಮಾಡಿದ್ದಾರೆ, ಯಾವುದೇ ಸಂದರ್ಭ ಆಗಲಿ, ಏನೇ ಬಂದರೂ ಎದುರಿಸುತ್ತೇವೆ, ಈ ಚುನಾವಣೆ ಗೆಲ್ತೇವೆ. ರಾಜ್ಯದ ಮೊದಲ ಹಂತದ ೧೪ ಕ್ಷೇತ್ರಗಳಲ್ಲೂ ಗೆಲ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎಚ್.ಡಿ.ರೇವಣ್ಣ ಪತ್ನಿ ಭವಾನಿ ಅವರ ಜತೆ ಆಗಮಿಸಿ, ಪಡುವಲಹಿಪ್ಪೆಯ ಶ್ರೀ ಕೋದಂಡರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮತದಾನ ಮಾಡಿದರು.

ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ೨೫೧ರಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟ್ ರಾಘವೇಂದ್ರ ಶಾಸಕ ಎಚ್.ಡಿ. ರೇವಣ್ಣ ಆಗಮಿಸುವ ವೇಳೆ ಮತಗಟ್ಟೆ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿ, ನಕಲಿ ಮತದಾನ ಮಾಡಿದ್ದಾರೆ ಎಂದು ಆರೋಪಿಸಿದರು, ಆಗ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಸಮಾಧಾನಗೊಳ್ಳದೆ, ನಕಲಿ ಮತದಾನ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಮತಗಟ್ಟೆಯಿಂದ ಹೊರ ನಡೆದರು.ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆ ಗ್ರಾಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪತ್ನಿ ಚೆನ್ನಮ್ಮನವರ ಜೊತೆ ಆಗಮಿಸಿ ಮತ ಚಲಾಯಿಸಿದರು.