ವಿಧಾನಸಭೆ, ಸುವರ್ಣಸೌಧದಲ್ಲಿ ಬೆಂಗಳೂರು, ಕರಾವಳಿ, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಬಗ್ಗೆ ಸಚಿವರು, ಶಾಸಕರಾದಿಯಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತಿದರೆ, ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆ, ಇಲ್ಲಿನ ಜನರ ಬಗ್ಗೆ ಧ್ವನಿ ಎತ್ತಬೇಕಾದ ಶಾಸಕರ ಜತೆಗೆ ಚರ್ಚಿಸಿ, ಧ್ವನಿ ಆಗಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ವಿದೇಶ ಪ್ರವಾಸದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಧಾನಸಭೆ, ಸುವರ್ಣಸೌಧದಲ್ಲಿ ಬೆಂಗಳೂರು, ಕರಾವಳಿ, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಬಗ್ಗೆ ಸಚಿವರು, ಶಾಸಕರಾದಿಯಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತಿದರೆ, ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆ, ಇಲ್ಲಿನ ಜನರ ಬಗ್ಗೆ ಧ್ವನಿ ಎತ್ತಬೇಕಾದ ಶಾಸಕರ ಜತೆಗೆ ಚರ್ಚಿಸಿ, ಧ್ವನಿ ಆಗಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ವಿದೇಶ ಪ್ರವಾಸದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್‌ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಅಭಿವೃದ್ಧಿಯೆಂದರೆ ಅಲ್ಲಿನ ಸಚಿವರು, ಶಾಸಕರು ಒಂದಾಗುತ್ತಾರೆ. ಕರಾವಳಿಯೆಂದರೆ ಆ ಭಾಗದ ಸಚಿವರು, ಶಾಸಕರು ಧ್ವನಿಗೂಡಿಸುತ್ತಾರೆ. ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕವೆಂದರೆ ಅಲ್ಲಿನ ಸಚಿವರು, ಶಾಸಕರು ಒಂದಾಗುತ್ತಾರೆ. ಆದರೆ, ಮಧ್ಯ ಕರ್ನಾಟಕದ ಸಚಿವರು ನಮ್ಮ ಜಿಲ್ಲೆಯ ಶಾಸಕರ ಜತೆಗೆ ಯಾವುದೇ ಸಭೆ ಮಾಡುತ್ತಿಲ್ಲ ಎಂದರು.

ಬೆಂಗಳೂರು, ಕರಾವಳಿ, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕಕ್ಕೆ ಸಾವಿರಾರು ಕೋಟಿ ರು. ಅನುದಾನ ಇಂತಹ ಪ್ರಯತ್ನದಿಂದ ಸಿಗುತ್ತದೆ. ಆದರೆ, ಭದ್ರಾ, ತುಂಗಭದ್ರಾ ರೈತರ ಕಷ್ಟ ಕೇಳುವವರು ಯಾರು? ಭದ್ರಾ ಕಾಲುವೆಗಳು ಮಾಯವಾಗಿ ಹಳ್ಳ, ರಸ್ತೆಗಳಾಗಿವೆ. ಹಳ್ಳ ಯಾವುದೇ, ರಸ್ತೆ ಯಾವುದೇ, ಕಾಲುವೆ ಯಾವುದು ಎಂಬುದೇ ಗೊತ್ತಾಗುತ್ತಿಲ್ಲ. 16ನೇ ವಿಧಾನಸಭೆಯ 8 ಅಧಿವೇಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್‌ ಎಷ್ಟು ನಿಮಿಷ ಸದನದಲ್ಲಿ ಕಾಣಿಸಿಕೊಂಡಿದ್ದಾರೆ. ಶಾಮನೂರು ಶಿವಶಂಕರಪ್ಪನವರು ನಿಧನರಾದ ನಂತರದ ಬಗ್ಗೆ ನಾನು ಮಾತನಾಡುತ್ತಿಲ್ಲ. ಅದಕ್ಕೆ ಮುಂಚೆ ಎಷ್ಟು ಸಲ ಸಚಿವ ಎಸ್ಸೆಸ್ಸೆಂ ಸದನಕ್ಕೆ ಬಂದಿದ್ದಾರೆಂದು ಉತ್ತರಿಸಲಿ ಎಂದು ಹೇಳಿದರು.

ಯಡಿಯೂರಪ್ಪ ಸಿಎಂ, ಕೆ.ಎಸ್.ಈಶ್ವರಪ್ಪ ಡಿಸಿಎಂ ಆಗಿದ್ದಾಗ ಭದ್ರಾ ನಾಲೆ ಆಧುನೀಕರಣವಾಗಿತ್ತು. ಆಗಿನ ನಮ್ಮ ಸರ್ಕಾರ ಮಧ್ಯ ಕರ್ನಾಟಕದ ವಿಶೇಷವಾಗಿ ದಾವಣಗೆರೆ ಅಭಿವೃದ್ಧಿಗೆ ಸ್ಪಂದಿಸಿತ್ತು. ಈಗ ಯಾರು? ಯಾವ ಸಿಎಂ, ಡಿಸಿಎಂ ಸ್ಪಂದಿಸುತ್ತಿಲ್ಲ. ಜಿಲ್ಲಾ ಸಚಿವರೂ ಸಿಗುತ್ತಿಲ್ಲ. 7 ದಿನ ಅಧಿವೇಶನ ನಡೆದಾಗ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಎಲ್ಲಿದ್ದರು? ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪನವರು ಆಸ್ಪತ್ರೆಯಲ್ಲಿದ್ದರು. ಆದರೆ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್‌ ವಿದೇಶ ಪ್ರವಾಸದಲ್ಲಿದ್ದರು. ದಾವಣಗೆರೆ ಜಿಲ್ಲೆಯ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರುವವರು ಯಾರು ಎಂದು ಪ್ರಶ್ನಿಸಿದರು.

ಬಾಪೂಜಿ ವಿದ್ಯಾಸಂಸ್ಥೆಯನ್ನು ದಿವಂಗತ ಶಾಮನೂರು ಶಿವಶಂಕರಪ್ಪನವರು ಸ್ಥಾಪಿಸಿದ್ದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಸಂಸ್ಥೆ ಹುಟ್ಟು ಹಾಕಿದ ಹಿರಿಯರೆಲ್ಲಾ ಸ್ವರ್ಗದಲ್ಲಿದ್ದು, ಈಗಿನ ಆಡಳಿತ ಮಂಡಳಿ ಕೆಲಸ ನೋಡಿ, ಆ ಹಿರಿಯರ ಆತ್ಮಗಳು ವ್ಯಥೆ ಪಡುತ್ತಿವೆ. ಬಾಪೂಜಿ ವಿದ್ಯಾಸಂಸ್ಥೆ ಬಗ್ಗೆ ಮಾಹಿತಿ ಇಲ್ಲದಿದ್ದರೆ ಮುಖ್ಯಮಂತ್ರಿಗಳು ಸರಿಯಾದ ಮಾಹಿತಿ ತರಿಸಿಕೊಳ್ಳಬೇಕಿತ್ತು. ಕಟ್ಟಿದವರು, ಬೆಳೆಸಿದವರು ಮಾಹಿತಿ ತರಿಸಿಕೊಂಡು ಹೇಳಬೇಕಿತ್ತು. ಆದರೆ, ಸಂಸ್ಥೆಯನ್ನು ಕಟ್ಟಿದವರಿಗೆ ಸಿಎಂ ಅವಮಾನಿಸಿದ್ದಾರೆ ಎಂದು ದೂರಿದರು.

ಬಿಜೆಪಿ ಮುಖಂಡಬಾರದ ಬಾಲರಾಜಶೆಟ್ಟಿ, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ, ಕಿಶೋರಕುಮಾರ, ಶಿವಾನಂದ ಇತರರು ಇದ್ದರು.

ಆನೆಕೊಂಡದ ಬಳಿ ಗುಂಡಿ ಮುಚ್ಚಿಸಲು ನಿತ್ಯವೂ 250-300 ಲೋಡ್ ಮಣ್ಣು ಸಾಗಿಸುತ್ತಿದ್ದಾರೆ. ಈ ಬಗ್ಗೆ ಡಿಸಿಗೆ ಕೇಳಿದರೆ ತಮಗೆ ಮಾಹಿತಿ ಇಲ್ಲವೆನ್ನುತ್ತಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅದು ನೀರಾವರಿ ಇಲಾಖೆಗೆ ಸಂಬಂಧಿಸಿದ್ದೆನ್ನುತ್ತಾರೆ. ನಂತರ 25 ಸಾವಿರ ರು. ದಂಡ ವಿಧಿಸಿದ್ದೇವೆಂದು, ಮಣ್ಣು ಸಾಗಿಸಲು ಅನುಮತಿ ಪಡೆದಿದ್ದಾರೆಂದು ನಾನು ಮಾಹಿತಿ ಕೇಳಿದ ನಂತರ ಪತ್ರ ಪಡೆದು, ತೇಪೆ ಹಾಕುವ ಕೆಲಸ ಮಾಡುತ್ತಾರೆ. ಬಡಪಾಯಿ ಅಧಿಕಾರಿಗಳು ತಮ್ಮ ಸ್ಥಾನಮಾನ, ಅಧಿಕಾರವನ್ನು ಅರಿತು ಕೆಲಸ ಮಾಡಲಿ. ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದಂತೆ ಇಲ್ಲಿನ ಅಧಿಕಾರಿಗಳ ಮೇಲೆ ಮೊದಲು ಕ್ರಮ ಕೈಗೊಳ್ಳಲಿ.

ಬಿ.ಪಿ.ಹರೀಶ ಬಿಜೆಪಿ ಶಾಸಕ