ಸಾರಾಂಶ
ಮರಿಯಮ್ಮನಹಳ್ಳಿ: ಶ್ರೀರಾಮುಲುಗೆ ಎಷ್ಟು ಜನ ಪಿಎಗಳು? ಪಿಎಗಳ ತೆಕ್ಕೆಗೆ ಆಡಳಿತ ಒಪ್ಪಿಸಿ, ಪಿಎಗಳ ಮೂಲಕ ಆಡಳಿತ ನಡೆಸುವ ಶ್ರೀರಾಮುಲು ಹೇಗೆ ಜನನಾಯಕನಾಗಲು ಸಾಧ್ಯ? ಪಿಎಗಳ ಕೋಟೆ ದಾಟಿ ಅವರನ್ನು ಕಾಣಲು ಸಾಧ್ಯವೇ? ಎಂದು ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಪ್ರಶ್ನಿಸಿದರು.
ಸಮೀಪದ ಡಣಾಯಕನಕೆರೆ ಗ್ರಾಮದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಅವರು ಮಾತನಾಡಿದರು.ನನ್ನ ಸುತ್ತ ಪಿಎಗಳು ಇಲ್ಲ. ಅರಮನೆಯಂತಹ ಮನೆ ನನ್ನದಿಲ್ಲ. ನನ್ನನ್ನು ಕಾಣಲು ಬಂದವರನ್ನು ಗೇಟ್ ನಲ್ಲಿಯೇ ತಡೆದು ನಿಲ್ಲಿಸಲು ನನ್ನ ಮನೆ ಮುಂದೆ ಸೆಕ್ಯುರಿಟಿ ಇಲ್ಲ. ನನ್ನನ್ನು ಕಾಣಲು ನೀವು ಯಾವಾಗಲಾದರೂ ಬರಬಹುದು. ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ನಿಮ್ಮ ಮನೆಯ ಸೇವಕನಂತೆ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.ಜನರ ಮತ್ತು ರೈತ ವಿರೋಧಿ ಆಗಿರುವ ಬಿಜೆಪಿ ಸರ್ಕಾರವನ್ನು ಈ ಸಲ ಕಿತ್ತೊಗೆದು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವನ್ನು ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಇಡೀ ದೇಶದ ಜನರು ನಿರ್ಧರಿಸಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ನೂರಕ್ಕೆ ನೂರಷ್ಟು ಗ್ಯಾರಂಟಿ ಎಂದರು.
ಕೆಎಂಎಫ್ ರಾಜ್ಯಾಧ್ಯಕ್ಷ ಎಸ್.ಭೀಮನಾಯ್ಕ್ ಮಾತನಾಡಿ, ಬಿಜೆಪಿ ಅಭ್ಯರ್ಥಿಗೆ ಈಗಾಗಲೇ ಸೋಲಿನ ಭಯ ಶುರುವಾಗಿದೆ. ಸೋಲು ಖಚಿತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಗೆಲುವು ನೂರಕ್ಕೆ ನೂರು ನಿಶ್ಚಿತಡ. ತುಕಾರಾಂ ಸರಳ, ಸಜ್ಜನ ಅಭ್ಯರ್ಥಿ. ಇವರನ್ನು ಗೆಲ್ಲಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಕೈ ಬಲಪಡಿಸಬೇಕು ಎಂದು ಅವರು ಹೇಳಿದರು.ಮಾಜಿ ಸಚಿವ ಎನ್.ಎಂ. ನಬಿಸಾಹೇಬ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಪ್ರಚಾರ ಸಮಿತಿ ಅಧ್ಯಕ್ಷ ಸೋಮಪ್ಪ ಉಪ್ಪಾರ್ ಸಭೆಯಲ್ಲಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಗೋವಿಂದರ ಪರಶುರಾಮ, ಕಾಂಗ್ರೆಸ್ ಮುಖಂಡರಾದ ಕಿಶೋರಿ ಭೂದ್ನಾಳ್, ವಿದ್ಯಾ ಹಿರೇಮಠ, ಡಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಹಿರಾಬಾನು ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಮರಿಯಮ್ಮನಹಳ್ಳಿ ಪಪಂ ಸದಸ್ಯರು, ಗ್ರಾಪಂ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.ಕಾಂಗ್ರೆಸ್ ಪ್ರಾಚಾರ ಸಭೆಯನ್ನು ಬೆಳಿಗ್ಗೆ ಗಾಳೆಮ್ಮನಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಪ್ರಚಾರ ನಡೆಸಿದರು.
ಗಾಳೆಮ್ಮನಗುಡಿ, ಹನುಮನಹಳ್ಳಿ, ಡಣಾಪುರ, ಜಿ.ನಾಗಲಾಪುರ, ಗೊಲ್ಲರಹಳ್ಳಿ, ಡಣಾಯಕನಕೆರೆ, ಚಿಲಕನಹಟ್ಟಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ ಕಾಂಗ್ರೆಸ್ ಪರ ಮತಯಾಚನೆ ನಡೆಸಿದರು.