ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಶ್ರಾವಣ ಮಾಸ ಮುಕ್ತಾಯವಾಗಿ ಭಾದ್ರಪದ ಮಾಸ ಆರಂಭಗೊಂಡಿದೆ. ನೆರೆಯ ಮಹಾರಾಷ್ಟ್ರದ ಪುಣೆ, ಮುಂಬೈ ಹೊರತುಪಡಿಸಿದರೆ ಗಣೇಶೋತ್ಸವವನ್ನು ಅತೀ ಅದ್ಧೂರಿಯಿಂದ ಆಚರಿಸುವುದು ಗಡಿಜಿಲ್ಲೆ ಬೆಳಗಾವಿಯಲ್ಲೇ. ಸಾರ್ವಜನಿಕ ಗಣೇಶೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ವಿನಾಯಕನ ಸ್ವಾಗತಕ್ಕೆ ಜಿಲ್ಲೆಯಾದ್ಯಂತ ಭರದ ಸಿದ್ಧತೆಗಳು ನಡೆದಿವೆ. ಬೀದಿ ಬೀದಿಗಳಲ್ಲಿ ಸಾರ್ವಜನಿಕ ಗಣೇಶ ಮಂಟಪಗಳು ತಲೆ ಎತ್ತಿವೆ. ಪರಿಸರಕ್ಕೆ ಮಾರಕವಾದ ನಿಷೇಧಿತ ಪಿಒಪಿ ಗಣೇಶ ಮೂರ್ತಿಗಳ ನಿರ್ಮಾಣ ಹಾಗೂ ಮಾರಾಟ ನಿರ್ಬಂಧಿಸಲಾಗಿದ್ದು, ಜಿಲ್ಲಾಡಳಿತ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ಜಿಲ್ಲಾಡಳಿತ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಹಾಗೂ ತಯಾರಿಕೆ ಮೇಲೆ ಕಣ್ಗಾವಲು ಇರಿಸಲು ಮುಂದಾಗಿದೆ. ಈ ಸಂಬಂಧ ಅಧಿಕಾರಿಗಳ ಟಾಸ್ಕ್‌ಫೋರ್ಸ್ ರಚನೆ ಮಾಡಿದೆ. ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಕರ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣಿಟ್ಟಿದೆ.
ಪರಿಸರ ಮಾರಕ ಪಿಒಪಿ ಮೂರ್ತಿಗಳು:ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಸಾಮಾನ್ಯವಾಗಿ 6 ಅಡಿ ಎತ್ತರ ಮಾತ್ರ ಇರಲಿವೆ. ಆದರೆ, 8 ರಿಂದ 10 ಅಡಿ ಎತ್ತರದ ಮೂರ್ತಿಗಳು ಬೇಕಾದರೆ ಪಿಒಪಿ ಬಳಸಿಯೇ ಮಾಡಬೇಕು. ಕೆಲವರು ಎತ್ತರದ ಗಣೇಶನಿಗಾಗಿ ಪಿಒಪಿ ಮೂರ್ತಿಗಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಪಿಒಪಿ ಮೂರ್ತಿಗಳ ತಯಾರಿಕೆಯಲ್ಲಿ ರಾಸಾಯನಿಕ ವಸ್ತುಗಳ ಬಳಕೆ ಹೆಚ್ಚಿರುವುದರಿಂದ ಕೆರೆ, ಬಾವಿ ಸೇರಿ ಇತರ ಜಲ ಮೂಲಗಳಲ್ಲಿ ವಿಸರ್ಜಿಸಿದರೆ ಕರಗುವುದಿಲ್ಲ. ಜತೆಗೆ ನೀರು ಹಾಳಾಗುವುದಲ್ಲದೆ ಪರಿಸರವೂ ನಾಶವಾಗುತ್ತದೆ. ಜಲಚರಗಳ ಪ್ರಾಣಕ್ಕೂ ಕುತ್ತು ತರುತ್ತವೆ.
ಪ್ರತಿವರ್ಷ ನೆರೆಯ ಮಹಾರಾಷ್ಟ್ರ ರಾಜ್ಯದಿಂದ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಬೆಳಗಾವಿ ಮೂಲಕವೇ ಕರ್ನಾಟಕ ಪ್ರವೇಶಿಸುತ್ತವೆ. ಇಂತಹ ಮೂರ್ತಿಗಳ ಮಾರಾಟ, ಸಾಗಣೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ( ಪಿಒಪಿ) ಗಣೇಶ ಮೂರ್ತಿಗಳ ತಯಾರಿ ಮತ್ತು ಮಾರಾಟದ ಮೇಲೆನಿರ್ಬಂಧವಿದ್ದರೂ ಅನೇಕ ಮಾರಾಟಗಾರರು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ. ಹಬ್ಬದ ಮುನ್ನಾ ದಿನವೇ ಪಿಒಪಿ ಮೂರ್ತಿ ಮಾರಾಟ ಮಾಡಲಾಗುತ್ತಿದೆ.ರಾಸಾಯನಿಕಗಳನ್ನು ಬಳಸಿ ತಯಾರಿಸುವ ಪಿಒಪಿ ಮೂರ್ತಿಗಳು ಪರಿಸರಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತವೆ. ಆದರೆ ನೈಸರ್ಗಿಕವಾಗಿ ಮಣ್ಣು ಬಳಸಿ ತಯಾರಿಸುವ ಗಣೇಶ ಮೂರ್ತಿಗಳು ಹೆಚ್ಚು ಅಲಂಕಾರಿಕವಾಗಿ ಇರುವುದಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ನಿಷೇಧಿತ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ.
ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಹಬ್ಬವನ್ನು ಆಚರಿಸುವಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಪಿಒಪಿ ಮೂರ್ತಿಗಳ ಕುರಿತು ಜಾಗೃತಿ ಮೂಡಿಸಿದ್ದರೂ ನಿಯಮ ಮೀರಿ ಅಂತಹ ಮೂರ್ತಿಗಳನ್ನೇ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಪರಿಸರಕ್ಕೆ ಮಾರಕವಾಗುವಂತಹ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪರಿಸರವಾದಿ ಸುರೇಶ ಉರಬಿನಹಟ್ಟಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.ಏಕ ಗವಾಕ್ಷಿ ವ್ಯವಸ್ಥೆ:
ಗಣೇಶೋತ್ಸವ ಮಂಡಳಿಗಳಿಗೆ ಸುಲಭವಾಗಿ ಹಾಗೂ ಶೀಘ್ರವಾಗಿ ಒಂದೇ ಕಡೆ ಅನುಮತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಯಾ ಪೊಲೀಸ್ ಠಾಣೆಗಳಲ್ಲಿಯೇ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಸ್ಕಾಂ, ಪೊಲೀಸ್, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಆಯಾ ಪೊಲೀಸ್ ಠಾಣೆಯ ಏಕಗವಾಕ್ಷಿ ಕೇಂದ್ರದಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಉಪಸ್ಥಿತರಿದ್ದು, ಅಗತ್ಯ ಅನುಮತಿ ನೀಡಲಿದ್ದಾರೆ.ಪರಿಸರಕ್ಕೆ ಮಾರಕವಾಗುವಂತಹ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಪಿಒಪಿ ಗಣೇಶ ಮೂರ್ತಿಗಳ ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ.-ಮೊಹಮ್ಮದ ರೋಷನ್, ಜಿಲ್ಲಾಧಿಕಾರಿಗಣೇಶೋತ್ಸವದಲ್ಲಿ ನಿಯಮ ಮೀರಿ ಪರಿಸರಕ್ಕೆ ಮಾರಕವಾಗುವಂತಹ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇಂತಹ ಪರಿಸರ ಮಾರಕ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು.
-ಸುರೇಶ ಉರಬಿನಹಟ್ಟಿ, ಪರಿಸರವಾದಿ