11 ಮಂದಿ ಆರ್‌ಸಿಬಿ ಅಭಿಮಾನಿಗಳ ಸಾವು ಪ್ರಕರಣ ಸಂಬಂಧ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಆರ್‌ಸಿಬಿ ಬಳಿಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ (ಡಿಪಿಎಆರ್‌) ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರನ್ನು ಕೂಡ ಅಪರಾಧ ತನಿಖಾ ಇಲಾಖೆಯ (ಸಿಐಡಿ) ತನಿಖೆಗೊಳಪಡಿಸುವ ಸಾಧ್ಯತೆಯಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳ ಸಾವು ಪ್ರಕರಣ ಸಂಬಂಧ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಆರ್‌ಸಿಬಿ ಬಳಿಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ (ಡಿಪಿಎಆರ್‌) ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರನ್ನು ಕೂಡ ಅಪರಾಧ ತನಿಖಾ ಇಲಾಖೆಯ (ಸಿಐಡಿ) ತನಿಖೆಗೊಳಪಡಿಸುವ ಸಾಧ್ಯತೆಯಿದೆ.

ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಕಬ್ಬನ್‌ ಪಾರ್ಕ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಕೆಎಸ್‌ಸಿಎ, ಆರ್‌ಸಿಬಿ ಹಾಗೂ ಡಿಎನ್‌ಎ ಸಂಸ್ಥೆಗಳನ್ನು ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿತ್ತು. ಆದರೆ ಕಾರ್ಯಕ್ರಮ ಆಯೋಜನೆಯಲ್ಲಿ ಡಿಪಿಎಆರ್ ಹಾಗೂ ಪೊಲೀಸರ ಲೋಪಗಳ ಬಗ್ಗೆ ನಡೆಸಲು ಸಿಐಡಿ ಮುಂದಾಗಿದೆ ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಅಂದು ವಿಧಾನಸೌಧ ಮೆಟ್ಟಿಲ ಮೇಲೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಕುರಿತು ಡಿಪಿಎಆರ್‌ ಸಿದ್ಧತೆ ಹಾಗೂ ಚಿನ್ನಸ್ವಾಮಿ ಮತ್ತು ವಿಧಾನಸೌಧ ಬಂದೋಸ್ತ್‌ ವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಸಿಐಡಿ ಮಾಹಿತಿ ಸಂಗ್ರಹಿಸಿದೆ. ಇನ್ನು ಕಾರ್ಯಕ್ರಮದ ಅನುಮತಿ ವಿಚಾರವಾಗಿ ಪೊಲೀಸ್‌, ಡಿಪಿಎಆರ್‌, ಆರ್‌ಸಿಬಿ ಹಾಗೂ ಕೆಎಸ್‌ಸಿಎ ಮಧ್ಯೆ ನಡೆದಿರುವ ಪತ್ರ ಸಂವಹನ ಕುರಿತು ಕೂಡ ವಿವರ ಕಲೆ ಹಾಕಿದೆ ಎಂದು ಮೂಲಗಳು ಹೇಳಿವೆ.

ಸಿಐಡಿ ತನಿಖೆ ಕಾರಣವೇನು?:

ಐಪಿಎಲ್ ಟ್ರೋಫಿ ವಿಜೇತ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಜೂ.4 ರಂದು ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳು ಆಯೋಜನೆ ಆಗಿದ್ದವು. ಆದರೆ ಈ ಕಾರ್ಯಕ್ರಮದ ಆಯೋಜನೆಗೆ ಪೊಲೀಸರು ಪೂರ್ವಾನುಮತಿ ನೀಡಲು ನಿರಾಕರಿಸಿದ್ದರು. ಅಲ್ಲದೆ ಲಿಖಿತವಾಗಿ ಡಿಪಿಎಆರ್‌ಗೆ ವಿಧಾನಸೌಧ ಡಿಸಿಪಿ ಕರಿಬಸವನಗೌಡ ತಿಳಿಸಿದ್ದರು. ಹೀಗಿದ್ದರೂ ವಿಧಾನಸೌಧ ಮೆಟ್ಟಿಲಿನ ಮೇಲೆ ಸಮಾರಂಭ ನಡೆಯಿತು.

ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶದ್ವಾರದ ಬಳಿ ನೂಕಾಟ ನಡೆದು ಕಾಲ್ತುಳಿತವಾಗಿ 11 ಜನ ಉಸಿರು ಚೆಲ್ಲಿದ್ದರು. ಈ ಘಟನೆಗೆ ಭದ್ರತಾ ಲೋಪ ಕಾರಣವಾಗಿದೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ಹೀಗಾಗಿಯೇ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಂದೋಬಸ್ತ್ ಕುರಿತು ಡಿಪಿಎಆರ್ ಹಾಗೂ ಪೊಲೀಸರನ್ನು ತನಿಖೆ ನಡೆಸಲು ಸಿಐಡಿ ಚಿಂತಿಸಿದೆ ಎನ್ನಲಾಗಿದೆ.

ಎರಡು ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಪೂರ್ವಾನುಮತಿ ನಿರಾಕರಿಸಿದ್ದ ಅಧಿಕಾರಿಗಳು, ಜನ ಸೇರುವ ಬಗ್ಗೆ ಮಾಹಿತಿ ಪಡೆದು ಮುಂಜಾಗ್ರತೆ ವಹಿಸಬೇಕಿತ್ತು. ಹಾಗಾಗಿ ಅಂದು ಭದ್ರತೆಗೆ ಎಷ್ಟು ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾವ್ಯಾವ ಅಧಿಕಾರಿಗಳಿಗೆ ಜವಾಬ್ದಾರಿ ಕೊಡಲಾಗಿತ್ತು ಎಂಬ ಬಗ್ಗೆ ಸಿಐಡಿ ಮಾಹಿತಿ ಪಡೆದಿದೆ ಎಂದು ತಿಳಿದು ಬಂದಿದೆ. -ಬಾಕ್ಸ್‌-

ಸ್ಟೇಡಿಯಂ ಭದ್ರತೆ ಖುದ್ದುಪರಿಶೀಲಿಸಿದ್ದ ಆಯುಕ್ತ

ಅಂದು ಅಭಿನಂದನಾ ಸಮಾರಂಭ ನಡೆಯಲಿದ್ದ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧ ಮೆಟ್ಟಿಲಿನ ಬಳಿ ತೆರಳಿ ಖುದ್ದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಭದ್ರತೆ ಪರಿಶೀಲಿಸಿದ್ದರು. ಸ್ಟೇಡಿಯಂನ ಪ್ರತಿ ಗೇಟ್‌ಗೆ ಹೋಗಿ ಸಿಬ್ಬಂದಿ ನಿಯೋಜನೆ ಕುರಿತು ಅವರು ಮಾಹಿತಿ ಪಡೆದಿದ್ದರು.

ಅಲ್ಲದೆ, ತಮ್ಮ ಕಚೇರಿಯಲ್ಲಿ ಮಧ್ಯಾಹ್ನ 12ಕ್ಕೆ ಭದ್ರತೆ ಕುರಿತು ಇಬ್ಬರು ಹೆಚ್ಚುವರಿ ಆಯುಕ್ತರು ಹಾಗೂ ಮೂವರು ಜಂಟಿ ಆಯುಕ್ತರ ಜತೆ ಸಭೆ ನಡೆಸಿ ಅ‍ವರು ಸಮಾಲೋಚಿಸಿದ್ದರು.

ಅದರಂತೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ವೇದಿಕೆಗೆ ಬರುವವರೆಗೆ ಆರ್‌ಸಿಬಿ ತಂಡ ಭದ್ರತೆಗೆ ಪೂರ್ವ ವಿಭಾಗದ ಜಂಟಿ ಆಯುಕ್ತ ರಮೇಶ್ ಬಾನೋತ್, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ವಿಕಾಸ್‌, ಸಂಚಾರ ವ್ಯವಸ್ಥೆ ನಿರ್ವಹಣೆಗೆ ಜಂಟಿ ಆಯುಕ್ತ ಅನುಚೇತ್ ಹಾಗೂ ಬಂದೋಬಸ್ತ್‌ನಲ್ಲಿ ತೊಡಗಿದ್ದ ಅಧಿಕಾರಿಗಳ ಜತೆ ಸಮನ್ವಯತೆಗೆ ಕಮಾಂಡರ್‌ ಸೆಂಟರ್‌ ಹೊಣೆಗಾರಿಕೆಯನ್ನು ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ ಅವರಿಗೆ ಆಯುಕ್ತ ದಯಾನಂದ್ ವಹಿಸಿದ್ದರು. ಅಲ್ಲದೆ, ವಿಧಾನಸೌಧ ಭದ್ರತೆಗೆ ಖುದ್ದು ಅವರೇ ಮೇಲುಸ್ತುವಾರಿ ವಹಿಸಿದ್ದರು.

ಆದರೆ ನಿರೀಕ್ಷೆಗೂ ಮೀರಿ ಅಭಿಮಾನಿಗಳ ಜಮಾವಣೆ ಪರಿಣಾಮ ಜನರನ್ನು ನಿಯಂತ್ರಿಸಲು ಪೊಲೀಸರಿಗೆ ಸವಾಲಾಗಿದೆ ಎಂದು ತಿಳಿದು ಬಂದಿದೆ.

ಡಿಜಿಪಿಗೆ ತಿಳಿಸಿ ತೆರಳಿದ ಆಯುಕ್ತರು:

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಘಟನೆ ನಡೆದ ವೇಳೆ ವಿಧಾನಸೌಧ ಮೆಟ್ಟಿಲಿನ ಬಳಿ ಭದ್ರತಾ ಮೇಲುಸ್ತುವಾರಿಯಲ್ಲಿ ಆಯುಕ್ತ ದಯಾನಂದ್ ನಿರತರಾಗಿದ್ದರು. ಕಾಲ್ತುಳಿತದಲ್ಲಿ ಅಭಿಮಾನಿಗಳ ಸಾವಿನ ವಿಷಯ ಅವರಿಗೆ ಗೊತ್ತಾಗಿದೆ. ಕೂಡಲೇ ಡಿಜಿಪಿ ಸಲೀಂ ಅವರಿಗೆ ಕಾಲ್ತುಳಿತ ದುರಂತ ಬಗ್ಗೆ ತಿಳಿಸಿ ಕ್ರೀಡಾಂಗಣದ ಬಳಿ ಆಯುಕ್ತರು ಧಾವಿಸಿದ್ದಾರೆ ಎಂದು ಮೂಲಗಳು ಹೇಳಿವೆ.