ಸಾರಾಂಶ
ಕುಕ್ಕರ್ ಬಾಂಬ್ ಪ್ರಕರಣವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕ್ಷುಲ್ಲಕ ಘಟನೆಯಂತೆ ಬಿಂಬಿಸಿದೆ. ಬಾಂಬ್ ಘಟನೆಯೆಂದು ಹೇಳುವುದಕ್ಕೂ ಭಯಪಟ್ಟಿರುವುದನ್ನು ನೋಡಿದರೆ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸಲು ಯಾವ ಸ್ಥಿತಿಗೂ ಇಳಿಯುತ್ತದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾ.ಬೃಜೇಶ್ ಚೌಟ ಟೀಕಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರುಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕುಕ್ಕರ್ ಬಾಂಬ್ ಪ್ರಕರಣವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕ್ಷುಲ್ಲಕ ಘಟನೆಯಂತೆ ಬಿಂಬಿಸಿದೆ. ಭಯೋತ್ಪಾದಕ ಕೃತ್ಯವನ್ನು ಸಾಮಾನ್ಯ ಘಟನೆಯೆಂದು ಚಿತ್ರಿಸಿ ರಾಜ್ಯದ ಜನರಿಗೆ ಸಂದೇಶ ನೀಡುವಂತೆ ಸರ್ಕಾರದ ಆದೇಶ ಪತ್ರದಲ್ಲಿ ತೋರಿಸಿದ್ದು ಗಂಭೀರ ಪ್ರಮಾದ. ಇದು ಮುಸ್ಲಿಂ ತುಷ್ಟೀಕರಣ ಮಾತ್ರವಲ್ಲ, ದೇಶಕ್ಕೆ ಆತಂಕ ತಂದೊಡ್ಡಿರುವ ಭಯೋತ್ಪಾದಕರನ್ನೂ ಓಲೈಕೆ ಮಾಡಿದಂತಿದೆ. ಬಾಂಬ್ ಘಟನೆಯೆಂದು ಹೇಳುವುದಕ್ಕೂ ಭಯಪಟ್ಟಿರುವುದನ್ನು ನೋಡಿದರೆ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸಲು ಯಾವ ಸ್ಥಿತಿಗೂ ಇಳಿಯುತ್ತದೆ ಎನ್ನುವುದನ್ನು ತೋರಿಸಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾ.ಬೃಜೇಶ್ ಚೌಟ ಟೀಕಿಸಿದ್ದಾರೆ.
ಕುಕ್ಕರ್ ಬಾಂಬ್ ಘಟನೆಯಲ್ಲಿ ಗಂಭೀರ ಗಾಯಗೊಂಡು ಬದುಕುಳಿದಿರುವ ಪುರುಷೋತ್ತಮ ಪೂಜಾರಿ ಅವರಿಗೆ ಸಿಎಂ ಪರಿಹಾರ ನಿಧಿಯಿಂದ ಎರಡು ಲಕ್ಷ ರು. ನೆರವು ನೀಡಿದ್ದು ಒಳ್ಳೆಯ ಕೆಲಸವೇ ಆಗಿದ್ದರೂ, ಮುಖ್ಯಮಂತ್ರಿ ಕಚೇರಿಯ ಆದೇಶ ಪತ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಯಂತ್ರವನ್ನೇ ದುರುಪಯೋಗ ಪಡಿಸಿದೆ. ಆಟೋದಲ್ಲಿ ಪ್ರಯಾಣಿಕರೊಬ್ಬರು ಕುಕ್ಕರ್‌ನ್ನು ಹಿಡಿದುಕೊಂಡಿದ್ದ ವೇಳೆ ಸಿಡಿದು ಉಂಟಾಗಿದ್ದ ಘಟನೆ ಎಂದು ಹೇಳಿರುವುದು, ಅದು ಭಯೋತ್ಪಾದಕ ಕೃತ್ಯವೇ ಅಲ್ಲ ಎನ್ನುವುದನ್ನು ಹೇಳಿದಂತಿದೆ. ಕುಕ್ಕರ್ ಸಾಮಾನ್ಯ ರೀತಿಯಲ್ಲಿ ಸಿಡಿಯುವುದಿದ್ದರೆ, ಎಲ್ಲೆಲ್ಲಿ ಕುಕ್ಕರ್ ಇರುತ್ತದೋ ಅವೆಲ್ಲ ಸಿಡಿದು ಹೋಗಬೇಕಿತ್ತು. ಮನೆಯಲ್ಲಿ ಕುಕ್ಕರಲ್ಲಿ ಅನ್ನ ಬೇಯಿಸುವಾಗ ಸಿಡಿಯುತ್ತಿದ್ದರೂ, ವ್ಯಕ್ತಿ ಕರಟಿ ಹೋಗುವ ಸ್ಥಿತಿ ಬರುತ್ತಿರಲಿಲ್ಲ. ಈ ಘಟನೆಯಲ್ಲಿ ಕುಕ್ಕರ್ ಹಿಡಿದುಕೊಂಡಿದ್ದ ವ್ಯಕ್ತಿಯಲ್ಲದೆ, ಆಟೋ ಚಾಲಕರಾಗಿದ್ದವರೂ ಸುಟ್ಟು ಹೋಗಿದ್ದರು ಎನ್ನುವುದು ಕಾಂಗ್ರೆಸಿನವರಿಗೆ ತಿಳಿದಿಲ್ಲವೇ. ಎಂದು ಅವರು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.