ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾ.7ಕ್ಕೆ ತಮ್ಮ ಸರ್ಕಾರದ ಬಜೆಟ್ ಮಂಡನೆ ಮಾಡಲಿದ್ದಾರೆ: ಬಂಪರ್‌ ಕೊಡುತ್ತಾ ಸರ್ಕಾರ?

| N/A | Published : Mar 06 2025, 12:31 AM IST / Updated: Mar 06 2025, 12:05 PM IST

siddaramaiah
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾ.7ಕ್ಕೆ ತಮ್ಮ ಸರ್ಕಾರದ ಬಜೆಟ್ ಮಂಡನೆ ಮಾಡಲಿದ್ದಾರೆ: ಬಂಪರ್‌ ಕೊಡುತ್ತಾ ಸರ್ಕಾರ?
Share this Article
  • FB
  • TW
  • Linkdin
  • Email

ಸಾರಾಂಶ

 ಸಮರ್ಥ ನಾಯಕ ಎನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾ.7ಕ್ಕೆ ತಮ್ಮ ಸರ್ಕಾರದ ಬಜೆಟ್ ಮಂಡನೆ ಮಾಡಲಿದ್ದಾರೆ. ಅವರ ಲೆಕ್ಕಾಚಾರದ ಬಗ್ಗೆ ರಾಜ್ಯದ ಜನರ ಚಿತ್ತ ನೆಟ್ಟಿದ್ದು, ಈ ಬಜೆಟ್‌ನಲ್ಲಿ ಯಾರ್‍ಯಾರಿಗೆ ಏನೇನು ಕೊಡುಗೆ ಕೊಡಬಹುದು ಎಂದು ನಿರೀಕ್ಷೆ ಹೊತ್ತುಕೊಂಡಿದ್ದಾರೆ.  

ಶಶಿಕಾಂತ ಮೆಂಡೆಗಾರ

 ವಿಜಯಪುರ :  ಸಮರ್ಥ ನಾಯಕ ಎನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾ.7ಕ್ಕೆ ತಮ್ಮ ಸರ್ಕಾರದ ಬಜೆಟ್ ಮಂಡನೆ ಮಾಡಲಿದ್ದಾರೆ. ಅವರ ಲೆಕ್ಕಾಚಾರದ ಬಗ್ಗೆ ರಾಜ್ಯದ ಜನರ ಚಿತ್ತ ನೆಟ್ಟಿದ್ದು, ಈ ಬಜೆಟ್‌ನಲ್ಲಿ ಯಾರ್‍ಯಾರಿಗೆ ಏನೇನು ಕೊಡುಗೆ ಕೊಡಬಹುದು ಎಂದು ನಿರೀಕ್ಷೆ ಹೊತ್ತುಕೊಂಡಿದ್ದಾರೆ. 

ಅದರ ಮಧ್ಯೆ ವಿಜಯಪುರ ಜಿಲ್ಲೆಯ ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ ಹಾಗೂ ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಅವರು ತಮ್ಮ ಇಲಾಖೆಗಳಿಂದ ಜಿಲ್ಲೆಗೆ ಏನೇನು ಕೊಡುಗೆ ಕೊಡಬಹುದು ಅಂತಲೂ ಕಾಯುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಜಿಲ್ಲೆಗೆ ಭರಪೂರ ಅನುದಾನ ಹಾಗೂ ಕೊಡುಗೆಗಳು ಸಿಗುವ ನಿರೀಕ್ಷೆ ಜೊತೆಗೆ ಹಿಂದಿನ ಬೇಡಿಕೆಗಳು ಇಡೇರಲಿವೆಯಾ ಎಂಬುದು ಕಾದು ನೋಡಬೇಕಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯಲ್ಲಿ ಹಿಂದುಳಿದ ವಿಜಯಪುರ ಜಿಲ್ಲೆಗೆ ಹೆಚ್ಚಿನ ಯೋಜನೆಗಳು ಹಾಗೂ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ಜನ ಕೂಡ ನಿರೀಕ್ಷೆಯಲ್ಲಿದ್ದಾರೆ.

ಸರ್ಕಾರಿ ಮೆಡಿಕಲ್ ಕಾಲೇಜು:

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸ್ಥಳಾವಕಾಶ ಇದ್ದರೂ ಇದುವರೆಗೂ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಿಸಿಲ್ಲ. ಹೀಗಾಗಿ, ಈ ಬಾರಿ ಮೆಡಿಕಲ್ ಕಾಲೇಜು ನಿರ್ಮಾಣದ ಬಗ್ಗೆ ವಿಜಯಪುರಕ್ಕೆ ಆಗಮಿಸಿದ್ದ ವೇಳೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಭರವಸೆ ನೀಡಿದ್ದರು. ಅದರಂತೆ ಸರ್ಕಾರಿ ಮೆಡಿಕಲ್ ಕಾಲೇಜು ಸಿಗಬಹುದು ಎಂಬ ನಿರೀಕ್ಷೆಯಿದೆ. ಜತೆಗೆ ರಾಜ್ಯದ ಏಕೈಕ ಮಹಿಳಾ ವಿವಿಯಾಗಿರುವ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಗೆ ಶೈಕ್ಷಣಿಕ ಚಟುವಟಿಕೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ವಿಶೇಷ ಅನುದಾನದ ಅವಶ್ಯಕತೆ ಇದೆ. ಕಳೆದ ಐದಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡಿಲ್ಲ.

ಸೋಪ್ ತಯಾರಿಕೆ ಫ್ಯಾಕ್ಟರಿ:

ಕೈಗಾರಿಕೆಗಳಿಗೆ ಮೀಸಲಿರಿಸಿದ ಭೂಮಿ ಸಾಕಷ್ಟಿದ್ದರೂ ಕೈಗಾರಿಕೋದ್ಯಮಿಗಳು ಬರುತ್ತಿಲ್ಲ. ಈ ಕಾರಣದಿಂದ ಕಳೆದ ಜನವರಿಯಲ್ಲಿ ಏರ್ಪಡಿಸಿದ್ದ ಸಾಬೂನು ಮೇಳದಲ್ಲಿ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ತಾಲೂಕಿನ ಇಟ್ಟಂಗಿಹಾಳ ಬಳಿ 10 ಎಕರೆಯಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಸ್ಥಾಪಿಸಲಾಗುವುದು. ಇದರಿಂದ 400 ಜನರಿಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ನೀಡಿದ್ದರು. ಹೀಗಾಗಿ ಈ ಸಾಬೂನು ತಯಾರಿಕಾ ಘಟಕ ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ.

ಫುಡ್‌ ಪಾರ್ಕ್‌ ಅಭಿವೃದ್ಧಿ:

ತಾಲೂಕಿನ ಇಟ್ಟಂಗಿಹಾಳದಲ್ಲಿ ಫುಡ್‌ಪಾರ್ಕ್‌ಗೆ ಸ್ಥಳ ಗುರುತಿಸಲಾಗಿದ್ದು, ಅದಕ್ಕೆ ಸೂಕ್ತ ಅನುದಾನದ ಕೊರತೆ ಇದೆ. ಈ ಭಾಗದಲ್ಲಿ ಹೆಚ್ಚಿನ ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದರಿಂದ ಅವುಗಳನ್ನು ಸಂರಕ್ಷಿಸಲು, ಸಂಸ್ಕರಿಸಲು ರೈತರಿಗೆ ಅನುಕೂಲವಾಗುವಂತೆ ಮಾಡಬೇಕಿದೆ. ಅದಕ್ಕಾಗಿ ಬೇಕಿರುವ ಅನುದಾನವನ್ನು ಈ ಬಜೆಟ್‌ನಲ್ಲಿ ಸಿದ್ದರಾಮಯ್ಯನವರು ಕೊಡಬಹುದಾ ಎಂದು ರೈತರು ಕಾಯುತ್ತಿದ್ದಾರೆ. ಜೊತೆಗೆ ಜಿಐ ಟ್ಯಾಗ್ ಪಡೆದುಕೊಳ್ಳುವ ಮೂಲಕ ಇಂಡಿಯ ಕಾಗ್ಜಿ ಲಿಂಬೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಆದರೆ ಲಿಂಬೆಗಾಗಿ, ಸಂಶೋಧನೆಗಾಗಿ ಇಂಡಿಯಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪಿತವಾಗಿದ್ದರೂ ಅಲ್ಲಿ ಸೂಕ್ತ ಕಾರ್ಯ ಚಟುವಟಿಕೆಗಳು ನಡೆಯುತ್ತಿಲ್ಲ. ಅದಕ್ಕಾಗಿ ಸರ್ಕಾರ ಹೆಚ್ಚು ಅನುದಾನ ನೀಡಿ ಚುರುಕುಗೊಳಿಸಬೇಕಿದೆ.

ನೀರಾವರಿಗೆ ಬೇಕಿದೆ ಆದ್ಯತೆ:

ಶತಮಾನದ ಸಂತ ಸಿದ್ಧೇಶ್ವರ ಶ್ರೀಗಳು ಹೇಳಿದಂತೆ ಈ ನೆಲಕ್ಕೆ ಬೊಗಸೆ ನೀರು ಕೊಟ್ಟರೆ ಸಾಕು ಕ್ಯಾಲಿಫೋರ್ನಿಯಾವನ್ನು ಮೀರಿಸುತ್ತದೆ ಎಂಬ ಮಾತು ಅಕ್ಷರಶಃ ನಿಜವಾಗಿದೆ. ಹಾಗಾಗಿ ಜಿಲ್ಲಾದ್ಯಂತ ಇನ್ನೂ ಕಾಮಗಾರಿಯಲ್ಲಿರುವ ವಿವಿಧ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು. ಈ ಮೂಲಕ ಬರದನಾಡು ಎನಿಸಿಕೊಂಡ ಜಿಲ್ಲೆ ಮತ್ತೆ ಹಸಿರುನಾಡು ಎನಿಸಿಕೊಳ್ಳಬೇಕಿದೆ. 

ಆಲಮಟ್ಟಿ ಎತ್ತರಕ್ಕೆ ಕ್ರಮ:

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ಕೊಳ್ಳದ ಆಲಮಟ್ಟಿ ಜಲಾಶಯವನ್ನು 519ರಿಂದ 526 ಮೀಟರ್‌ಗೆ ಎತ್ತರಿಸಬೇಕಿದೆ. ಇದಕ್ಕಾಗಿ ಲಕ್ಷಾಂತರ ಎಕರೆ ಭೂಮಿ ಭೂ ಸ್ವಾಧಿನ ಆಗಬೇಕು. ನೂರಾರು ಹಳ್ಳಿಗಳು ಮುಳುಗಡೆ ಆಗುವುದರಿಂದ ಸಂತ್ರಸ್ತರಿಗೆ ನೆಲೆ ಕಲ್ಪಿಸಬೇಕಿದೆ. ಇದಕ್ಕಾಗಿ ವಾರ್ಷಿ ₹50 ಸಾವಿರ ಕೋಟಿ ಬೇಕಾಗುತ್ತಿದ್ದು, ಇದಕ್ಕೂ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಬೇಕಿದೆ.

ಹೀಗೆ ಹತ್ತಲು ವಿವಿಧ ಬೇಡಿಕೆಗಳು, ಹಲವು ನಿರೀಕ್ಷೆಗಳು ಈ ಬಾರಿಯ ಬಜೆಟ್‌ನಲ್ಲಿ ಜನತೆ ಇರಿಸಿಕೊಂಡಿದ್ದಾರೆ. ಕಳೆದ ಬಾರಿ ಘೋಷಣೆಯಾಗಿ ಬಾಕಿ ಉಳಿದ ಯೋಜನೆಗಳ ಅನುಷ್ಠಾನದ ಜೊತೆಗೆ ಇನ್ನಷ್ಟು ಹೊಸ ಯೋಜನೆಗಳು ಈ ಬಜೆಟ್‌ನಲ್ಲಿ ಜಾರಿಯಾಗಬೇಕಿದೆ.