ಸಂಘ-ಸಂಸ್ಥೆಗಳು ನೋಂದಣಿಯಾಗಲೇಬೇಕು ಎಂಬುದು ಕಾನೂನಿನಲ್ಲಿ ಇದೆಯೇ?. ಇದ್ದರೆ ಅದನ್ನು ಬಹಿರಂಗಗೊಳಿಸಿ. ಅಥವಾ, ಆರ್‌ಎಸ್‌ಎಸ್ ಸಂಘಟನೆ ಯಾವುದಾದರೂ ಕಾನೂನು ಬಾಹಿರ ಚಟುವಟಿಕೆಯನ್ನು ನಡೆಸಿರುವುದು ಕಂಡು ಬಂದರೆ ಅದನ್ನು ತೋರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ:
ಸಂಘ-ಸಂಸ್ಥೆಗಳು ನೋಂದಣಿಯಾಗಲೇಬೇಕು ಎಂಬುದು ಕಾನೂನಿನಲ್ಲಿ ಇದೆಯೇ?. ಇದ್ದರೆ ಅದನ್ನು ಬಹಿರಂಗಗೊಳಿಸಿ. ಅಥವಾ, ಆರ್‌ಎಸ್‌ಎಸ್ ಸಂಘಟನೆ ಯಾವುದಾದರೂ ಕಾನೂನು ಬಾಹಿರ ಚಟುವಟಿಕೆಯನ್ನು ನಡೆಸಿರುವುದು ಕಂಡು ಬಂದರೆ ಅದನ್ನು ತೋರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ನೆಹರು, ಇಂದಿರಾ ಗಾಂಧಿಯವರು ಆರ್‌ಎಸ್‌ಎಸ್ ಅನ್ನು ನಿರ್ಬಂಧಿಸಲು ಹೊರಟಿದ್ದರು. ಅವರ ಕಾಲದಲ್ಲೇ ಇದನ್ನು ಮಾಡಲು ಆಗಲಿಲ್ಲ. ಈಗ ಪ್ರಿಯಾಂಕ್ ಖರ್ಗೆಯಿಂದ ಆಗುತ್ತದೆಯೇ ಎಂದು ಲೇವಡಿ ಮಾಡಿದರು. ಸಚಿವರು ಅನವಶ್ಯಕವಾಗಿ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ಇದನ್ನೆಲ್ಲ ಮಾಡುತ್ತಿದೆ ಎಂದು ಟೀಕಿಸಿದರು.
ಗೃಹ ಇಲಾಖೆಯಲ್ಲಿ ಮಾಡಲು ನೂರಾರು ಕೆಲಸ ಇದೆ. ಅದನ್ನು ಬಿಟ್ಟು ಸಚಿವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಒಂದು ವೇಳೆ ಆರ್‌ಎಸ್‌ಎಸ್ ಕಾನೂನುಬಾಹಿರ ಚಟುವಟಿಕೆ ನಡೆಸಿದ್ದರೆ ರಾಜ್ಯದ ಜನರಿಗೆ ಬಹಿರಂಗವಾಗಿ ತಿಳಿಸಿ ಎಂದು ಕುಟುಕಿದರು.ಇದೇ ವೇಳೆ, ನಾಗೇಂದ್ರಗೆ ಸಚಿವ ಸ್ಥಾನ ಕೊಟ್ಟಿದ್ದನ್ನು ಟೀಕಿಸಿದ ವಿಜಯೇಂದ್ರ, ಭ್ರಷ್ಟಾಚಾರ ಆರೋಪ ಹೊತ್ತಿರುವ ನಾಗೇಂದ್ರರನ್ನು ಡಿ.ಕೆ.ಶಿವಕುಮಾರ್ ಅವರು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವವರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಅನಿವಾರ್ಯತೆ ಸಿಎಂಗೆ ಏನಿತ್ತು ಎಂದು ಪ್ರಶ್ನಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು.ಹಗರಣದಲ್ಲಿ ಅವರು ಭಾಗಿಯಾಗಿದ್ದಾರೆ. ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರು ಮೊದಲ ಆರೋಪಿಯಾಗಿದ್ದಾರೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಿಂದ ಅವರನ್ನು ಕೈ ಬಿಡಲಾಗಿತ್ತು. ಡಿ.ಕೆ.ಶಿವಕುಮಾರ್ ಅವರು ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಅಂತಹ ಅನಿವಾರ್ಯತೆ ಏನಿತ್ತು ಎಂಬುದು ಬಹಿರಂಗವಾಗಬೇಕಿದೆ ಎಂದರು.ಬಿ.ನಾಗೇಂದ್ರ ಮೇಲೆ ನಮಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ, ಅವರ ಮೇಲೆ ಹಣ ಲೂಟಿ ಮಾಡಿದ ಗಂಭೀರ ಆರೋಪವಿದೆ. ಸಿಎಂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು. ನಾಗೇಂದ್ರ ಅವರ ಬದಲು ಅದೇ ಸಮುದಾಯದ ಇಬ್ಬರನ್ನು ಬೇಕಾದರೆ ಸೇರಿಸಿಕೊಳ್ಳಲಿ. ನಮ್ಮ ಅಭ್ಯಂತರವೇನಿಲ್ಲ ಎಂದು ಸಲಹೆ ನೀಡಿದರು.
ನಾಗೇಂದ್ರ ಅವರು ದೋಷಮುಕ್ತವಾಗುವವರೆಗೆ ಸಚಿವ ಸ್ಥಾನದಿಂದ ಅವರನ್ನು ವಜಾ ಮಾಡಬೇಕು. ಈ ಸಂಬಂಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಲಿದ್ದೇವೆ. ಅಲ್ಲದೆ, ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಆಯಾ ಜಿಲ್ಲಾ ಬಿಜೆಪಿ ಹೋರಾಟ ಮಾಡಲಿದೆ ಎಂದು ವಿಜಯೇಂದ್ರ ತಿಳಿಸಿದರು.ಹನೂರು ಎನ್‌ಕೌಂಟರ್ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಹನೂರು ತಾಲೂಕಿನಲ್ಲಿ ನಡೆದಿರುವ ಎನ್ ಕೌಂಟರ್ ನ್ನು ಖಂಡಿಸುತ್ತೇನೆ. ಇದು ನಾವ್ಯಾರು ಒಪ್ಪುವಂತದಲ್ಲ. ಕಾಡಿಗೆ ಹೋದವರನ್ನು ಎನ್‌ಕೌಂಟರ್ ಮಾಡಿ ಅಂತ ಕಾನೂನಿನಲ್ಲಿ ಇದೆಯೇ. ಕೂಡಲೇ ಈ ಪ್ರಕರಣದ ತನಿಖೆ ಆಗಬೇಕು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.