ಸಂಘ ಸಂಸ್ಥೆಗಳು ನೋಂದಣಿಯಾಗಬೇಕೆಂದು ಈ ನೆಲದ ಕಾನೂನಿನಲ್ಲಿ ಇದೇಯೇ. ಇದ್ದರೆ ಅದನ್ನು ಬಹಿರಂಗಗೊಳಿಸಿ. ಇಲ್ಲ ಆರ್‌ಎಸ್‌ಎಸ್ ಯಾವುದಾದರೂ ಕಾನೂನು ಬಾಹಿರ ಚಟುವಟಿಕೆಯನ್ನು ನಡೆಸಿರುವುದು ನೀವು ಕಂಡು ಹಿಡಿದಿದ್ದರೆ ತೋರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂಘ ಸಂಸ್ಥೆಗಳು ನೋಂದಣಿಯಾಗಬೇಕೆಂದು ಈ ನೆಲದ ಕಾನೂನಿನಲ್ಲಿ ಇದೇಯೇ. ಇದ್ದರೆ ಅದನ್ನು ಬಹಿರಂಗಗೊಳಿಸಿ. ಇಲ್ಲ ಆರ್‌ಎಸ್‌ಎಸ್ ಯಾವುದಾದರೂ ಕಾನೂನು ಬಾಹಿರ ಚಟುವಟಿಕೆಯನ್ನು ನಡೆಸಿರುವುದು ನೀವು ಕಂಡು ಹಿಡಿದಿದ್ದರೆ ತೋರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದರು.

ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರು, ಇಂದಿರಾ ಗಾಂಧಿ ಅವರು ಆರ್‌ಎಸ್‌ಎಸ್ ನಿರ್ಬಂಧಿಸಲು ಹೊರಟಿದ್ದರು. ಅವರ ಕಾಲದಲ್ಲೇ ಇದನ್ನು ಮಾಡಲು ಆಗಲಿಲ್ಲ. ಈಗ ಪ್ರಿಯಾಂಕ್ ಖರ್ಗೆಯಿಂದ ಆಗುತ್ತದೇಯೇ ಎಂದು ಲೇವಡಿ ಮಾಡಿದ ಅವರು, ಸಚಿವರು ಅವಿವೇಕತನದಿಂದ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಇದನ್ನೆಲ್ಲ ಮಾಡುತ್ತಿದೆ ಎಂದು ಟೀಕಿಸಿದರು.

ಗೃಹ ಇಲಾಖೆಯಲ್ಲಿ ಮಾಡಲು ನೂರಾರು ಕೆಲಸ ಇದೆ. ಅದನ್ನು ಬಿಟ್ಟು ಸಚಿವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಒಂದು ವೇಳೆ ಆರ್‌ಎಸ್‌ಎಸ್ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದರೆ ರಾಜ್ಯದ ಜನರಿಗೆ ಬಹಿರಂಗವಾಗಿ ತಿಳಿಸಿ ಎಂದು ಕುಟುಕಿದರು.

ಚಾಮರಾಜನಗರದ ಹನೂರು ಎನ್‌ಕೌಂಟರ್ ಪ್ರಕರಣ ಕುರಿತು ಮಾತನಾಡಿ, ಹನೂರು ತಾಲೂಕಿನಲ್ಲಿ ನಡೆದಿರುವ ಎನ್ ಕೌಂಟರ್ ಖಂಡಿಸುತ್ತೇನೆ. ಇದನ್ನು ನಾವ್ಯಾರು ಒಪ್ಪುವಂತದಲ್ಲ. ಕಾಡಿಗೆ ಹೋದವರನ್ನು ಎನ್‌ಕೌಂಟರ್ ಮಾಡಿ ಅಂತ ಕಾನೂನಿನಲ್ಲಿ ಇದೆಯೇ. ಕೂಡಲೇ ಈ ಪ್ರಕರಣವನ್ನು ಮುಖ್ಯಮಂತ್ರಿ ತನಿಖೆಗೆ ಒಳಪಡಿಸಬೇಕು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹೇಳಿದರು.

ನಾಗೇಂದ್ರನಿಗೆ ಸಚಿವ ಸ್ಥಾನ ಕೊಟ್ಟಿದ್ದೇಕೆ?: ಭ್ರಷ್ಟಾಚಾರ ಆರೋಪ‌ ಹೊತ್ತಿರುವ ನಾಗೇಂದ್ರರನ್ನು ಡಿ.ಕೆ.ಶಿವಕುಮಾರ್ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವವರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಅನಿವಾರ್ಯತೆ ಸಿಎಂಗೆ ಏನಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಹಗರಣ, ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರು ಮೊದಲ ಆರೋಪಿಯಾಗಿದ್ದಾರೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಿಂದ ಅವರನ್ನು ಕೈ ಬಿಡಲಾಗಿತ್ತು. ಡಿ.ಕೆ.ಶಿವಕುಮಾರ್ ಅವರು ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಅಂತಹ ಅನಿವಾರ್ಯತೆ ಏನಿತ್ತು ಎಂಬುದು ಬಹಿರಂಗವಾಗಬೇಕಿದೆ ಎಂದರು.

ಬಿ. ನಾಗೇಂದ್ರ ಮೇಲೆ ನಮಗೆ ವೈಯಕ್ತಿಕ ದ್ವೇಷವಿಲ್ಲ. ದಲಿತರ ಮೇಲೆ ಸಿಟ್ಟು, ಆರೋಪ ತೋರಿಸುತ್ತಾರೆ ಎಂದು ಹೇಳಿದ್ದಾರೆ. ಹಣ ಲೂಟಿ ಮಾಡಿದ ಗಂಭೀರ ಆರೋಪವಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಸಿಎಂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು. ನಾಗೇಂದ್ರ ಅವರ ಬದಲು ಅದೇ ಸಮುದಾಯದ ಇಬ್ಬರನ್ನು ಬೇಕಾದರೆ ಸೇರಿಸಿಕೊಳ್ಳಲಿ ನಮ್ಮ ಅಭ್ಯಂತರವೇನಿಲ್ಲ ಎಂದು ಸಲಹೆ ನೀಡಿದರು.

ನಾಗೇಂದ್ರ ದೋಷ ಮುಕ್ತವಾಗುವವರೆಗೆ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಈ ಸಂಬಂಧ ಸದನದ ಒಳಗೆ ಹಾಗೂ ಹೊರಗೆ ಈ ಬಗ್ಗೆ ಹೋರಾಟ ಮಾಡಲಿದ್ದೇವೆ. ಅಲ್ಲದೆ ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಆಯಾ ಜಿಲ್ಲಾ ಬಿಜೆಪಿ ಹೋರಾಟ ಮಾಡಲಿದೆ ಎಂದು ತಿಳಿಸಿದರು.

ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಹಾಕಿ: ಹೊಸನಗರ ತಾಲೂಕಿನ ಹರತಾಳು ಗ್ರಾಮದಿಂದ ಗೋವುಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ವಾಹನವನ್ನು ಬೆನ್ನಟ್ಟಿದ ಬಜರಂಗದಳ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಂಭೀರ ಗಾಯಗೊಂಡಿರುವ ಚಂದನ್ ಶಿಕಾರಿಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಂದಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಇಂತಹ ಅಕ್ರಮ ಚಟುವಟಿಕೆಗಳು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದೆ. ಮುಖ್ಯಮಂತ್ರಿಗಳು ಹಿಂದೂಗಳ ಪರ ಎಂದು ಹೇಳುತ್ತಿದ್ದಾರೆ, ಗೃಹ ಸಚಿವರು ಈ ವಿಚಾರ ಹೊರತು ಉಳಿದೆಲ್ಲ ವಿಷಯ ಮಾತನಾಡುತ್ತಿದ್ದಾರೆ. ಗೃಹ ಸಚಿವರು ಮತ್ತು ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿ ಸ್ಪಂದಿಸಿ, ಅಕ್ರಮ ಗೋ ಸಾಗಾಟಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು. ನಾನು ಎಸ್ಪಿಯವರ ಜೊತೆ ಮಾತಾಡಿದ್ದೇನೆ. ವಾಹನಗಳನ್ನ ಸೀಜ್ ಮಾಡಿದ್ರೇ ಸಾಕಾಗಲ್ಲ.‌ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಾಮೀನು ಸಿಗದ ರೀತಿಯಲ್ಲಿ ಕೇಸ್ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.