- 17ರಂದು 18, 18ರಂದು 14 ಮಂದಿಗೆ ಚಿಕಿತ್ಸೆ । ಹಲವರಿಗೆ ಔಷಧಿ- ಮಾತ್ರೆಗಳ ವಿತರಣೆ

- - -

ಕನ್ನಡಪ್ರಭ ವಾರ್ತೆ ಹರಿಹರ

ನಗರದ ದಾಮೋದರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚೆಗೆ ವಾಂತಿ-ಭೇದಿ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಆದರೆ, ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆಗೆ ನೀಡಬೇಕಾದ ಅಗತ್ಯ ಔಷಧಿ ಹಾಗೂ ಇಂಜೆಕ್ಷನ್‌ಗಳ ಕೊರತೆ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಅಸ್ವಸ್ಥರು ಪರದಾಡುವಂತಾಗಿದೆ. ಮೂರು, ನಾಲ್ಕು ದಿನಗಳಿಂದ ಕೆಲ ನಾಗರಿಕರು ವಾಂತಿ-ಭೇದಿ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ತೀವ್ರ ಅಸ್ವಸ್ಥರನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಹಲವರಿಗೆ ಔಷಧಿ- ಮಾತ್ರೆಗಳ ನೀಡಿ ಕಳಿಸಿ ಕೊಡಲಾಗುತ್ತಿದೆ. ಆದರೆ, ಚಿಕಿತ್ಸೆಗಾಗಿ ಬೇಕಾದ ಅಗತ್ಯ ಪ್ರಮಾಣದ ಔಷಧಿ- ಗುಳಿಗೆಗಳು ಮತ್ತು ಇಂಜೆಕ್ಷನ್‌ಗಳ ದಾಸ್ತಾನು ಸಮರ್ಪಕವಾಗಿ ಲಭ್ಯವಿಲ್ಲ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.


ಬೇಸಿಗೆ ಆರಂಭದ ಹಿನ್ನೆಲೆ ಕಲುಷಿತ ನೀರಿನ ಸೇವನೆಯಿಂದಲೇ ವಾಂತಿ-ಭೇದಿ ಪ್ರಕರಣಗಳು ಉಲ್ಬಣಗೊಂಡಿವೆಯೇ ಅಥವಾ ಇದಕ್ಕೆ ಬೇರೆ ಕಾರಣಗಳಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ನಗರಸಭೆ ನಿರ್ಲಕ್ಷ್ಯವೂ ಈ ಸಮಸ್ಯೆಗೆ ಕಾರಣ ಇರಬಹುದು. ನೀರು ಸರಬರಾಜು ಕೇಂದ್ರಗಳ ಪರಿಶೀಲನೆ, ನಗರ ಸ್ವಚ್ಛತೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಅಗತ್ಯ ಕಾಳಜಿ ವಹಿಸಲಾಗುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಸಾರ್ವಜನಿಕರಿಗೆ ಸುಗಮ ಹಾಗೂ ತ್ವರಿತ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ನಗರದ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ. ವಾಂತಿ-ಭೇದಿ ಮಾತ್ರವಲ್ಲದೇ ಇತರೆ ಋತುಸಂಬಂಧಿ ಕಾಯಿಲೆಗಳ ಹರಡುವಿಕೆ ತಡೆಯಲು ಅಧಿಕಾರಿಗಳು ಈಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

- - -

(ಕೋಟ್ಸ್‌) ಫೆ.17ರಂದು 18 ಹಾಗೂ ಫೆ.18 ರಂದು 14 ವಾಂತಿ-ಭೇದಿ ಪ್ರಕರಣ ದಾಖಲಾಗಿದ್ದವು. ತದನಂತರ ಇಲ್ಲಿಯವರೆಗೆ ದಿನಕ್ಕೆ ಮೂರ್ನಾಲ್ಕು ಪ್ರಕರಣಗಳು ದಾಖಲಾಗಿವೆ. ಔಷಧಿ ಕೊರತೆ ಇದೆ. ಅನುದಾನದಲ್ಲಿ ಔಷಧಿ ಖರೀದಿಸಿ ಕೊಡುತ್ತಿದ್ದೇವೆ.

- ಡಾ.ಲತಾದೇವಿ, ವೈದ್ಯಾಧಿಕಾರಿ, ಸರ್ಕಾರಿ ಆಸ್ಪತ್ರೆ.

ವಾತಾವರಣ ಬದಲಾವಣೆಯಿಂದ ವಾಂತಿ- ಭೇಧಿ ಉಂಟಾಗುವ ಸಾಧ್ಯತೆ ಇದೆ. ತೀರಾ ಹೆಚ್ಚಿನ ವಾಂತಿ-ಭೇಧಿ ರೋಗಿಗಳಿಲ್ಲ. ಅಲ್ಲೊಂದು, ಇಲ್ಲೊಂದು ಕಂಡುಬಂದಿವೆ. ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗುತ್ತದೆ. ತೀರಾ ಹೆಚ್ಚಿನ ತೊಂದರೆ ಇದ್ದಲ್ಲಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಔಷಧಿ ಮಾತ್ರೆಗಳ ಕೊರತೆ ಇಲ್ಲ. ಕೊರತೆ ಆದಲ್ಲಿ ಇಂಡೆಂಟ್ ಹಾಕಲು ತಿಳಿಸಲಾಗಿದೆ. ಅಗತ್ಯ ಬಿದ್ದಲ್ಲಿ ಖರೀದಿಸಲು ಸಹ ತಿಳಿಸಲಾಗಿದೆ.

- ಡಾ.ಅಬ್ದುಲ್ ಖಾದರ್, ತಾಲೂಕು ಆರೋಗ್ಯಾಧಿಕಾರಿ.

- - -

(* ಫೋಟೋಗಳಿವೆ.)