ಪಿಆರ್‌ಇ ಎಇಇ ಕೊಠಡಿಗೆ ವಾಸ್ತುದೋಷವೇ?

| Published : Jan 13 2025, 12:46 AM IST

ಸಾರಾಂಶ

ಜನಪ್ರತಿನಿಧಿಗಳು ಸಾಮಾನ್ಯವಾಗಿ ತಮ್ಮ ಸರ್ಕಾರಿ ಕಚೇರಿಗಳನ್ನು ವಾಸ್ತು ಪ್ರಕಾರ ಬದಲಾಯಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ, ಹುಕ್ಕೇರಿ ಪಟ್ಟಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ವಾಸ್ತು ದೋಷವೆಂದು ತಮ್ಮ ಕಚೇರಿ ಮರು ಸೃಷ್ಟಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಜನಪ್ರತಿನಿಧಿಗಳು ಸಾಮಾನ್ಯವಾಗಿ ತಮ್ಮ ಸರ್ಕಾರಿ ಕಚೇರಿಗಳನ್ನು ವಾಸ್ತು ಪ್ರಕಾರ ಬದಲಾಯಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ, ಹುಕ್ಕೇರಿ ಪಟ್ಟಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ವಾಸ್ತು ದೋಷವೆಂದು ತಮ್ಮ ಕಚೇರಿ ಮರು ಸೃಷ್ಟಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿರುವ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯನ್ನು ಇದೀಗ ವಾಸ್ತು ಪ್ರಕಾರ ಬದಲಾಯಿಸಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ನಾಲ್ಕು ವರ್ಷದ ಹಿಂದೆಯಷ್ಟೇ ನವೀಕರಿಸಿದ ಈ ಕಚೇರಿಯ ಎಇಇ ಕೊಠಡಿ ಸುಸಜ್ಜಿತವಾಗಿದ್ದರೂ ದುರಸ್ತಿ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿವೆ.

ಮೌಢ್ಯ ಹೋಗಲಾಡಿಸಬೇಕಾದ ಸರ್ಕಾರಿ ಅಧಿಕಾರಿಯೊಬ್ಬರು ಸ್ವತಃ ತಾವೇ ಮೂಢನಂಬಿಕೆಯ ಮೊರೆ ಹೋಗಿರುವ ಅನುಮಾನವಿದೆ. ಸಂಪೂರ್ಣ ಹವಾನಿಯಂತ್ರಿತ ಕೊಠಡಿಯನ್ನು ಏಕಾಏಕಿ ದುರಸ್ತಿ ಮಾಡುವ ಮೂಲಕ ಕಟ್ಟಡ ನಿರ್ವಹಣೆ ನಿಯಮ ಗಾಳಿಗೆ ತೂರಿರುವುದು ಇಲ್ಲಿ ಸ್ಪಷ್ಟವಾಗುತ್ತಿದೆ. ಸದ್ಯ ಪಿಆರ್‌ಇ ಎಇಇ ಶಶಿಕಾಂತ ವಂದಾಳೆ ಅವರು ತಮ್ಮ ಇಷ್ಟದಂತೆ ಕೊಠಡಿ ದುರಸ್ತಿ ಮತ್ತು ನವೀಕರಣದ ಹೆಸರಿನಲ್ಲಿ ಲಕ್ಷಾಂತರ ರು. ವ್ಯಯಿಸುತ್ತಿದ್ದಾರೆ ಎಂಬ ದೂರುಗಳಿವೆ. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

1990 ರಿಂದ ಆರಂಭವಾದ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದಲ್ಲಿ 34 ವರ್ಷದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ 45 ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ, ಉತ್ತಮ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ, ಯಾವ ಅಧಿಕಾರಿಗಳಿಗೂ ಕಂಡುಬಾರದ ವಾಸ್ತುದೋಷ 2024ರ ಅಗಸ್ಟ್ 8 ರಿಂದ ಅಧಿಕಾರ ವಹಿಸಿಕೊಂಡ 46ನೇ ಎಇಇ ಶಶಿಕಾಂತ ವಂದಾಳೆ ಅವರಿಗೆ ಹೇಗೆ ಕಂಡು ಬಂತು? ಎನ್ನುವ ಪ್ರಶ್ನೆ ಎದುರಾಗಿದೆ.

ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಚೌಕಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಬೇಕೇ ವಿನಃ ವಾಸ್ತುದೋಷ. ಯಾರೋ ಹೇಳಿದ ಮಾತು ನಂಬಿಕೊಂಡು ಸಾರ್ವಜನಿಕರ ಸ್ವತ್ತಾದ ಸರ್ಕಾರಿ ಕಚೇರಿಯನ್ನೇ ತಮಗೆ ಇಷ್ಟ ಬಂದಂತೆ ಬದಲಿಸಿಕೊಳ್ಳುವುದು ಸರಿಯಲ್ಲ ಎನ್ನುವುದು ಸಾರ್ವಜನಿಕರ ವಾದ.ಮೇಲಧಿಕಾರಿಗಳ ಅನುಮತಿ ಇಲ್ಲದೇ ಈ ಕೊಠಡಿಯನ್ನು ದುರಸ್ತಿ ನೆಪದಲ್ಲಿ ಧ್ವಂಸಗೊಳಿಸಿರುವ ಪಿಆರ್‌ಇ ಅಧಿಕಾರಿಗಳ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೂಡಲೇ ಸಂಬಂಧಿಸಿದ ಮೇಲಧಿಕಾರಿಗಳು ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯ ಕೇಳಿಬಂದಿದೆ.-------------

ಸುಸಜ್ಜಿತ ಕೊಠಡಿ ಧ್ವಂಸ

ಹುಕ್ಕೇರಿ ಪಟ್ಟಣದಲ್ಲಿನ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕೊಠಡಿ ನವೀಕರಣಗೊಳಿಸಲು 2024-25ನೇ ಸಾಲಿನ ಜಿಲ್ಲಾ ಪಂಚಾಯತಿಯ 2059-ಕಟ್ಟಡ ನಿರ್ವಹಣೆ ಲೆಕ್ಕ ಶೀರ್ಷಿಕೆಯಲ್ಲಿ ₹80,000 ಅನುದಾನ ಕಾಯ್ದಿರಿಸಲಾಗಿದೆ. ಈ ಕೊಠಡಿ ದುರಸ್ತಿ ಕಾಮಗಾರಿಯೊಂದಿಗೆ ನೀರು ಪೂರೈಕೆ, ಶೌಚಾಲಯ ರಿಪೇರಿ, ನೆಲಹಾಸು ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕೊಠಡಿಯ ಗೋಡೆಗೆ ಅಳವಡಿಸಿದ ಕಟ್ಟಿಗೆ ಹುಳು ತಿಂದು (ಪ್ಲೈಯುವುಡ್) ಹಾಳಾಗಿತ್ತು. ಹಾಗಾಗಿ ರಿಪೇರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಶಶಿಕಾಂತ ವಂದಾಳೆ, ಎಇಇ ಪಿಆರ್‌ಇ ಹುಕ್ಕೇರಿ