ರಾಜ್ಯದಲ್ಲಿ ಮುಂಗಾರು ಕೈಕೊಟ್ಟು ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದರೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಎರಡನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿ ಜಿಲ್ಲೆಯ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಕನ್ನಡಪ್ರಭ ವಾರ್ತೆ ಬೀದರ್
ರಾಜ್ಯದಲ್ಲಿ ಮುಂಗಾರು ಕೈಕೊಟ್ಟು ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದರೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಎರಡನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿ ಜಿಲ್ಲೆಯ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.ಮೊದಲ ಹಂತದ 101 ತಾಲೂಕುಗಳ ಪಟ್ಟಿಯ ಬಳಿಕ ಪ್ರಕಟಿಸಲಾದ 24 ತಾಲೂಕುಗಳ 2ನೇ ಪಟ್ಟಿಯಲ್ಲೂ ಜಿಲ್ಲೆಯ ಗಡಿ ಭಾಗದ ತಾಲೂಕುಗಳಿಗೆ ತೀವ್ರ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತವರು ಕ್ಷೇತ್ರವಾದ ಭಾಲ್ಕಿ ತಾಲೂಕನ್ನು ಮಾತ್ರ ಮಧ್ಯಮ ಬರಪೀಡಿತ ಎಂದು ಘೋಷಿಸಲಾಗಿದ್ದು, ತೀವ್ರ ಬರದ ಛಾಯೆಯಲ್ಲಿರುವ ಕಮಲನಗರ, ಔರಾದ್ ಮತ್ತು ಹುಲಸೂರು ತಾಲೂಕುಗಳನ್ನು ಪಟ್ಟಿಯಿಂದ ಪೂರ್ತಿಯಾಗಿ ಕೈಬಿಡಲಾಗಿದೆ.ನೆರೆಯ ಕಲಬುರಗಿಗೆ ಆದ್ಯತೆ, ಬೀದರ್‌ಗೆ ಏಕಿಲ್ಲ?: ನೆರೆಯ ಕಲಬುರಗಿ ಜಿಲ್ಲೆಯ ಆಳಂದ, ಶಹಬಾದ್, ಅಫಜಲಪುರ, ಚಿತ್ತಾಪುರ, ಕಲಬುರಗಿ ಹಾಗೂ ಯಡ್ರಾಮಿ ಸೇರಿದಂತೆ ಒಟ್ಟು 6 ತಾಲೂಕುಗಳನ್ನು ಎರಡನೇ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಆದರೆ ಭೌಗೋಳಿಕವಾಗಿ ಪಕ್ಕದಲ್ಲೇ ಇರುವ ಬೀದರ್ ಜಿಲ್ಲೆಗೆ ಕೇವಲ ಒಂದು ತಾಲೂಕು ಮಾತ್ರ ದಕ್ಕಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಮರ್ಪಕ ಮಳೆಯಾಗದೆ ಬಿತ್ತಿದ ಹೆಸರು ಮತ್ತು ಉದ್ದು ಮೊಳಕೆಯೊಡೆಯದೆ ನಶಿಸಿ ಹೋಗಿದ್ದರೆ, ಕೈಗೆ ಬರಬೇಕಿದ್ದ ಪ್ರಮುಖ ಬೆಳೆ ಸೋಯಾಬಿನ್ ಬಿಸಿಲಿಗೆ ಒಣಗಿ ನಾಶವಾಗುತ್ತಿದೆ. ಬೆಳೆ ನಷ್ಟದಿಂದ ಕಂಗಾಲಾಗಿರುವ ಕಮಲನಗರ, ಔರಾದ್ ಮತ್ತು ಹುಲಸೂರು ಭಾಗದ ರೈತರಿಗೆ ಸರ್ಕಾರದ ಈ ನಿರ್ಧಾರ ಗಾಯದ ಮೇಲೆ ಎಳೆ ಸವರಿದಂತಾಗಿದೆ.ಈ ಹಿಂದೆಯೇ ಕಮಲನಗರ ಹಾಗೂ ಹುಲಸೂರು ತಾಲೂಕುಗಳಲ್ಲಿ ಬರ ಘೋಷಣೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆಗಳು ನಡೆದಿದ್ದವು ಇದೀಗ 2ನೇ ಪಟ್ಟಿಯಲ್ಲಿಯೂ ಹೆಸರಿಲ್ಲದಿರುವುದು ರೈತರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಬಹುದು.
ಕಮಲನಗರಕ್ಕೆ ತಾರತಮ್ಯ: ಪೂಜಾ ಬೇಲ್ಲೆ ಮದನೂರ ಆಕ್ರೋಶಕಮಲನಗರ: ಸರ್ಕಾರ ಬಿಡುಗಡೆ ಮಾಡಿರುವ ಎರಡನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಮಲನಗರ ತಾಲೂಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೈಬಿಟ್ಟಿರುವುದಕ್ಕೆ ಮದನೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೂಜಾ ಗುಂಡಪ್ಪ ಬೇಲ್ಲೆ ಮದನೂರ ಅವರು ತೀವ್ರ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕನ್ನು ಮಾತ್ರ ಮಧ್ಯಮ ಬರಪೀಡಿತ ಪ್ರದೇಶವೆಂದು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಆದರೆ, ವಾಸ್ತವದಲ್ಲಿ ಭೀಕರ ಅಭಾವ ಎದುರಿಸುತ್ತಿರುವ ಕಮಲನಗರ ತಾಲೂಕನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಸ್ಥಳೀಯ ರೈತರಿಗೆ ಎಸಗಿದ ಘೋರ ಅನ್ಯಾಯ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ತಾಲೂಕಿನಾದ್ಯಂತ ಬಿತ್ತನೆ ಮಾಡಿದ್ದ ಹೆಸರು ಹಾಗೂ ಉದ್ದು ಮೊಳಕೆಯೊಡೆಯದೆ ಭೂಮಿಯಲ್ಲೇ ನಾಶವಾಗಿದೆ. ಇನ್ನು ಕೈಗೆ ಬರಬೇಕಿದ್ದ ಅಲ್ಪ ಸ್ವಲ್ಪ ಬೆಳೆಯೂ ಒಣಗುತ್ತಿದ್ದು, ರೈತರು ತೀವ್ರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲ ಪಟ್ಟಿಯಲ್ಲಿ ಬಿಟ್ಟುಹೋದರೂ, ಎರಡನೇ ಪಟ್ಟಿಯಲ್ಲಾದರೂ ಕಮಲನಗರ ಸೇರ್ಪಡೆಯಾಗಲಿದೆ ಎಂಬ ಭರವಸೆಯಲ್ಲಿ ರೈತರಿದ್ದರು. ಆದರೆ, ಸರ್ಕಾರ ಪ್ರಕಟಿಸಿದ ಎರಡನೇ ಪಟ್ಟಿಯೂ ತಾಲೂಕಿನ ಜನರಿಗೆ ಭಾರೀ ಆಘಾತ ತಂದಿದೆ. ಕಷ್ಟದಲ್ಲಿರುವ ಅನ್ನದಾತನ ಕೂಗಿಗೆ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಕ್ಷಣವೇ ಸ್ಪಂದಿಸಬೇಕು. ಈ ನಿರ್ಧಾರವನ್ನು ತಕ್ಷಣವೇ ಮರುಪರಿಶೀಲಿಸಿ, ಕಮಲನಗರ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿ ಸೂಕ್ತ ಪರಿಹಾರ ಪ್ರಕಟಿಸಬೇಕು ಎಂದು ಪೂಜಾ ಆಗ್ರಹಿಸಿದ್ದಾರೆ.