ಇಷ್ಟಲಿಂಗವು ಕೇವಲ ಭಕ್ತಿಯ ತೃಪ್ತಿಗಷ್ಟೇ ಸೀಮಿತವಾಗದೇ ಯೋಗ ಸಾಧನೆಗೆ ಸಹಕಾರಿಯಾಗಿದೆ.

ಕುರುಗೋಡು: ದೈನಂದಿನ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಇಷ್ಟಲಿಂಗ ಪೂಜೆ ಮಾರ್ಗದರ್ಶನ ನೀಡುತ್ತದೆ ಎಂದು ಉಪನ್ಯಾಸಕ ಎನ್. ವೀರೇಂದ್ರ ಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಪಟ್ಟಣದ ಕೊಟ್ಟೂರು ಸ್ವಾಮಿ ಶಾಖಾ ವಿರಕ್ತ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಮೂರನೇ ಶಿವಾನುಭನ ಸಂಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೈವತ್ವದ ಸಾಕ್ಷಾತ್ಕಾರ ಮತ್ತು ಆತ್ಮಾವಲೋಕನಕ್ಕೂ ಸಹಕಾರಿಯಾದ ಇಷ್ಟಲಿಂಗ ಪೂಜೆಯಲ್ಲಿ ಧ್ಯಾನಾಸಕ್ತರಾಗುವುದರಿಂದ ಮೆದುಳಿನ ಎಲ್ಲ ಗುಣ ಸ್ವಭಾವಗಳು ಪ್ರಭಾವಿಯಾಗಿ ಶಕ್ತಿ ಸಾಮರ್ಥ್ಯಗಳು ವೃದ್ಧಿಸುತ್ತವೆ ಎಂದರು.

ಇಷ್ಟಲಿಂಗವು ಕೇವಲ ಭಕ್ತಿಯ ತೃಪ್ತಿಗಷ್ಟೇ ಸೀಮಿತವಾಗದೇ ಯೋಗ ಸಾಧನೆಗೆ ಸಹಕಾರಿಯಾಗಿದೆ. ಎಲ್ಲರೂ ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಿರಂಜನ ಪ್ರಭು ಮಹಾಸ್ವಾಮಿ ಮಾತನಾಡಿ, ಇಷ್ಟಲಿಂಗ ಪೂಜೆ ಮಾಡುವ ಮೂಲಕ ತಮ್ಮೊಳಗಿನ ಅಂತಶಕ್ತಿಯಿಂದ ಕುಂಡಲಿನಿ ಜಾಗೃತಿಗೊಳಿಸಲು ಸಾಧ್ಯ ಎಂದರು.

ಒತ್ತಡದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಎಲ್ಲರೂ ಜೀವನದಲ್ಲಿ ಇಷ್ಟಲಿಂಗ ಪೂಜೆ ಅನುಸರಿಸಿ ಶಾಂತಚಿತ್ತರಾಗಿ ಜೀವಿಸಬಹುದು. ಮೊದಲು ಮನೆಗಳಲ್ಲಿ ಸಂಸ್ಕಾರವಿತ್ತು. ಬದಲಾದ ಪರಿಸ್ಥಿತಯಲ್ಲಿ ಮೊಬೈಲ್ ಬಂದ ನಂತರ ಎಲ್ಲವೂ ನೇಪತ್ಯಕ್ಕೆ ಸರಿದಿದೆ. ಸಂಸ್ಕೃತಿ ಮತ್ತು ಸಂಸ್ಕಾರದ ಪುನರ್ ಮನನಮಾಡಲು ಇಷ್ಟಲಿಂಗ ಪೂಜೆಯಲ್ಲಿ ತೊಡಗಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಪಡೆದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಪುರಸಭೆ ಅಧ್ಯಕ್ಷ ಜಿ.ಮಂಜುನಾಥ ಮತ್ತು ಶ್ರೀಮಠದ ಭಕ್ತರು ಇದ್ದರು.