ಸಾರಾಂಶ
ಗದಗ: ಇಷ್ಟಲಿಂಗ ಪೂಜೆಯನ್ನು ಬಹಿರಂಗವಾಗಿ ಆಚರಿಸಿಕೊಂಡು ಬರುವಲ್ಲಿ ರಂಭಾಪುರಿ ಪೀಠದ ವೀರಗಂಗಾಧರ ಜಗದ್ಗುರುಗಳು ಪ್ರಮುಖ ಕಾರಣೀಕರ್ತರು ಎಂದು ಕಾಶಿ ಪೀಠದ ಜ. ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜ. ಪಂಚಾಚಾರ್ಯ ಸೇವಾ ಸಂಘ, ಜ. ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಹಾಗೂ ಜ. ವಿಶ್ವಾರಾಧ್ಯ ಎಜ್ಯಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಷಾಢ ಮಾಸದ ಅಂಗವಾಗಿ ಗುರುವಾರ ಜರುಗಿದ ಮಹಿಳೆಯರ ಉಡಿ ತುಂಬುವ ಹಾಗೂ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ರಂಭಾಪುರಿ ಪೀಠದ ವೀರಗಂಗಾಧರ ಜಗದ್ಗುರುಗಳ ತರುವಾಯ ಕಾಶಿ ಪೀಠದ ನೂತನ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ನೆರವೇರಿಸಿಕೊಂಡು ಬಂದಿದ್ದಾರೆ ಎಂದರು.ಸರ್ವಾರಾಧ್ಯನಾಗಿರುವ ಶಿವನನ್ನು ದೇಹದ ಮೇಲಿರಿಸಿಕೊಂಡು, ಲಿಂಗದೊಂದಿಗೆ ಬದುಕಿ, ಲಿಂಗದಲ್ಲಿ ಲೀನವಾಗುವ ಭಾಗ್ಯ ಮನುಷ್ಯನಿಗೆ ಮಾತ್ರ ಲಭಿಸಿದೆ. ಪ್ರತಿಯೊಬ್ಬರೂ ಪೂಜೆ ಮಾಡುವಾಗ ಎಷ್ಟು ಭಾವದೊಳಗೆ ಬೆರೆಯುತ್ತೇವೆ ಅಷ್ಟು ಪುಣ್ಯ ಸಿಗುತ್ತದೆ. ನಮ್ಮ ದೇಹದೊಳಗಿನ ಜೀವಕೋಶ ಎಲ್ಲಿಯವರೆಗೆ ಸಶಕ್ತವಾಗಿರುತ್ತವೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ. ಜೀವಕೋಶಗಳು ಸಶಕ್ತವಾಗಿರಲು ನಮ್ಮ ಮನಸ್ಸಿನ ಸ್ಥಿತಿ ಪ್ರಮುಖವಾಗಿರುತ್ತವೆ. ನಾವು ನಿತ್ಯ ಭಕ್ತಿಯಿಂದ ತನ್ಮಯತೆಯಿಂದ ಪೂಜೆ ಮಾಡಬೇಕು. ಧರ್ಮಗ್ರಂಥಗಳನ್ನು ಪಾರಾಯಣ ಮಾಡುವಂತಹ ಸಮಯ ರೂಢಿಸಿಕೊಂಡರೆ ಜೀವಕೋಶಗಳು ಸಶಕ್ತಗೊಂಡು ನಿರೋಗಿಗಳಾಗಿ ಆರೋಗ್ಯಂತರಾಗಿರುತ್ತವೆ ಎಂದರು.
ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಅನೇಕ ಜನ್ಮಗಳ ಪುಣ್ಯದ ಫಲವಾಗಿ ಮಾನವ ಜನ್ಮ ಸಿಕ್ಕಿದೆ. ಗುರುವಿನ ಸಾನ್ನಿಧ್ಯದಲ್ಲಿ ದೇಹ ದಂಡಿಸುವ ಮೂಲಕ ನಮ್ಮ ಪೂರ್ಣಾಂಗಗಳು ಶರಣಾಗತಿ ಹೊಂದಿದಾಗ ಗುರುವಿನ ಕೃಪಾಕಟಾಕ್ಷ ಒಲಿಯಲು ಸಾಧ್ಯವಾಗುತ್ತದೆ ಎಂದರು.ಈ ವೇಳೆ ಧಾರವಾಡದ ಸರ್ಜನ್ ಡಾ.ಶಿವನಗೌಡ ರುದ್ರಗೌಡ ರಾಮನಗೌಡರ ಅವರಿಗೆ ಶ್ರೀ ಜ.ಪಂಚಾಚಾರ್ಯ ಕೃಪಾಪೋಷಿತ ಧರ್ಮ ಪ್ರಕಾಶ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ಶಿಕ್ಷಕ ನಾಗಪ್ಪ. ಆರ್.ಶಿರೋಳ ಅವರಿಗೆ ದಿವ್ಯಾಂಗ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ರಾಜು ಗುಡಿಮನಿ ಅವರನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿಯ ನವನಗರದ ಕಾಶಿ ಖಾಸಾ ಶಾಖಾ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.ಜಿಗೇರಿಯ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಲ್ಲಸಮುದ್ರ ಓಂಕಾರೇಶ್ವರ ಮಠದ ಫಕ್ಕಿರೇಶ್ವರ ಸ್ವಾಮೀಜಿ, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮೀಜಿ, ಅಡ್ನೂರ ಬೃಹನ್ಮಠದ ಅಭಿನವ ಪಂಚಾಕ್ಷರ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಸಂಘದ ಕಾರ್ಯಾಧ್ಯಕ್ಷ ಸಿದ್ದಲಿಂಗಪ್ಪ ಚಳಗೇರಿ, ಕಳಕನಗೌಡ ಪಾಟೀಲ, ಪ್ರಸನ್ನ ಶಾಬಾದಿಮಠ, ಆರ್.ಎ. ರಬ್ಬನಗೌಡರ, ಚಂದ್ರು ಬಾಳಿಹಳ್ಳಿಮಠ, ಸುರೇಶ ಅಬ್ಬಿಗೇರಿ, ಉಮಾಪತಿ ಭೂಸನೂರಮಠ, ಎಸ್.ಎಸ್.ಮೇಟಿ, ವೀರಭದ್ರಯ್ಯ ಧನ್ನೂರಹಿರೇಮಠ, ಆರ್.ಕೆ. ಮಠ, ಡಾ. ಶೇಖರ ಸಜ್ಜನರ ಸೇರಿ ಹಲವರು ಇದ್ದರು.ಅಕ್ಕಮ್ಮ ಗುರುಸ್ವಾಮಿಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ವಿ.ಕೆ. ಗುರುಮಠ ನಿರೂಪಿಸಿದರು.